ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ವಿದ್ಯಾರ್ಥಿಗಳು ಮೊಬೈಲ್ ಮತ್ತು ದೂರದರ್ಶನಗಳಿಂದ ದೂರವಿದ್ದು, ಪಠ್ಯ ಪುಸ್ತಕದ ಜೊತೆಗೆ ದಿನಪತ್ರಿಕೆ, ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಾಗ ಹೆಚ್ಚಿನ ಜ್ಞಾನಾರ್ಜನೆ ಹೊಂದಲು ಸಾಧ್ಯವಿದೆ ಎಂದು ಶಾರದಾ ಮಾತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎ.ಬಡಿಗೇರ ಹೇಳಿದರು.ಪಟ್ಟಣದ ಕನಕ ನಗರದಲ್ಲಿರುವ ನವೋದಯ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಶಾರದಾ ಮಾತಾ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಯುವ ಆವೃತ್ತಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮೊಬೈಲ್ ದಾಸರಾಗಿರುವ ಅನೇಕ ವಿದ್ಯಾರ್ಥಿಗಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ವಿದ್ಯಾರ್ಜನೆಗೆ ಅವಶ್ಯಕತೆ ಇದ್ದಷ್ಟು ಮಾತ್ರ ಬಳಸಿಕೊಂಡು ಹೆಚ್ಚಿನ ಸಮಯವನ್ನು ಪಠ್ಯಪುಸ್ತಕ ಮತ್ತು ಪತ್ರಿಕೆಗಳನ್ನು, ಇನ್ನಿತರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆಗಳಲ್ಲಿ ಪ್ರಚಲಿತ ಮಾಹಿತಿಯನ್ನು ಒಳಗೊಂಡಂತೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಹೊಂದಲು ಮತ್ತು ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಬಹಳಷ್ಟು ಸಹಕಾರವಿದೆ ಎಂದರು.ಪ್ರತಿಭಾನ್ವಿತ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕು.ಸಾಕ್ಷಿ ಎಸ್.ಶಿವಾನಂದಮಠ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳು ಗುರುಗಳು ಹೇಳುವ ಪಾಠಗಳನ್ನು ಏಕಾಗ್ರತೆಯಿಂದ ಆಲಿಸಬೇಕು. ಜೀವನದಲ್ಲಿ ಗುರಿ ಇಟ್ಟುಕೊಂಡು ಶಿಸ್ತು ಸಂಯಮ, ಸಮಯ ಹೊಂದಾಣಿಕೆ ಮಾಡಿಕೊಂಡು ಕಠಿಣ ಅಭ್ಯಾಸ ಮಾಡಿದಾಗ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುತ್ತದೆ. ಪರೀಕ್ಷೆಯಲ್ಲಿ ಕೇವಲ ಹೆಚ್ಚು ಅಂಕ ಗಳಿಸುವುದು ಮಾನದಂಡವಲ್ಲ. ತಂದೆ ತಾಯಿ ನಿಮ್ಮ ಬಗ್ಗೆ ಕನಸು ಕಟ್ಟಿಕೊಂಡಿರುತ್ತಾರೆ. ಅವರು ಕನಸು ನನಸು ಮಾಡುವುದು ಜೊತೆಗೆ ಕಲಿಸಿದ ಗುರುಗಳಿಗೆ, ಕಲಿತ ಶಾಲೆಗೆ ಗೌರವ ತರುವ ನಿಟ್ಟಿನಲ್ಲಿ ನಾವು ಸಾಧಕರಾಗಿ ಹೊರಹೊಮ್ಮಬೇಕು. ವಿದ್ಯೆಯ ಜೊತೆಗೆ ವಿನಯ, ಮಾನವೀಯ ಮೌಲ್ಯಗಳು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಮಾಜ ಸೇವಕ ಸಿದ್ದಲಿಂಗಯ್ಯ ಶಿವಾನಂದಮಠ, ಪತ್ರಕರ್ತ ಅಣ್ಣಾಸಾಬ ತೆಲಸಂಗ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿ.ಎಂ.ಬಡಿಗೇರ, ಆಡಳಿತ ಅಧಿಕಾರಿ ಪಿ.ಎಸ್.ನಿಕ್ಕಂ, ಮುಖ್ಯೋಪಾಧ್ಯಾಯ ಬಿ.ಐ.ಮೋದಿ, ಶಿಕ್ಷಕರಾದ ಎಸ್.ಕೆ.ಸನದಿ, ರಾಮೇಶ ಪತ್ತಾರ, ನಂದಾ ಡವಳೇಶ್ವರ, ನಾಗರತ್ನ ಹರಿಕಾಂತ, ಸುಧಾ ಚಕ್ರಪಾಲಿ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.ಸಮಾಜ ಸೇವಕ ಸಿದ್ದಲಿಂಗಯ್ಯ ಶಿವಾನಂದಮಠರು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಯುವ ಆವೃತ್ತಿ ನೀಡುತ್ತಿರುವ ಅವರ ಕಾರ್ಯಕ್ಕೆ ವಿದ್ಯಾರ್ಥಿಗಳ ಪರವಾಗಿ ಅಭಿನಂದಿಸುತ್ತೇನೆ.
-ಎಂ.ಎ.ಬಡಿಗೇರ, ಶಾರದಾ ಮಾತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು.