ಕೇಂದ್ರದ ಎನ್‌ಸಿಡಿಸಿ ಬಳಕೆಗೆ ಸಿಎಂ ಮೊಂಡುತನ

| Published : Aug 21 2025, 02:00 AM IST

ಕೇಂದ್ರದ ಎನ್‌ಸಿಡಿಸಿ ಬಳಕೆಗೆ ಸಿಎಂ ಮೊಂಡುತನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಂಕಷ್ಟದಲ್ಲಿರುವ ರಾಜ್ಯದಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಎನ್‌ಸಿಡಿಸಿ ಮೂಲಕ ಸಾಲ ಸೌಲಭ್ಯದ ಅನುಕೂಲ ಕಲ್ಪಿಸಿದೆ. ಆದರೆ, ರಾಜ್ಯ ಸರ್ಕಾರದ ಹಾಗೂ ಸಿಎಂ ಮೊಂಡುತನದಿಂದಾಗಿ ನಮ್ಮ ರಾಜ್ಯದ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗದೆ ಮೋಸವಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ನಂದಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಗುರುಲಿಂಗಪ್ಪ ಅಂಗಡಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಂಕಷ್ಟದಲ್ಲಿರುವ ರಾಜ್ಯದಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಎನ್‌ಸಿಡಿಸಿ ಮೂಲಕ ಸಾಲ ಸೌಲಭ್ಯದ ಅನುಕೂಲ ಕಲ್ಪಿಸಿದೆ. ಆದರೆ, ರಾಜ್ಯ ಸರ್ಕಾರದ ಹಾಗೂ ಸಿಎಂ ಮೊಂಡುತನದಿಂದಾಗಿ ನಮ್ಮ ರಾಜ್ಯದ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗದೆ ಮೋಸವಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ನಂದಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಗುರುಲಿಂಗಪ್ಪ ಅಂಗಡಿ ಆರೋಪಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ಸಹಕಾರಿ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್‌ಸಿಡಿಸಿ) ಮೂಲಕ ಉತ್ತಮ ಸಾಲದ ಯೋಜನೆ ನೀಡಿದೆ. ಈ ಸಾಲವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ನೀಡುತ್ತಿದ್ದು, ಕೇಂದ್ರದಿಂದ ಸಾಲ ಪಡೆವ ರಾಜ್ಯ ಸರ್ಕಾರಗಳು ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ನೀಡಬೇಕು ಎಂದರು.ಬೇರೆ ಬೇರೆ ರಾಜ್ಯಗಳಲ್ಲಿ ಈ ಸಾಲ ಸೌಲಭ್ಯ ಪಡೆದುಕೊಂಡು ಅಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆಗಳು ಅಭಿವೃದ್ಧಿಯಾಗಿವೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಸಿಎಂ ಸಿದ್ಧರಾಮಯ್ಯ ಹಾಗೂ ಅವರ ಸಂಪುಟ ಸಚಿವರ ಮೊಂಡುತನದಿಂದಾಗಿ ಇವರು ಈ ಯೋಜನೆ ಉಪಯೋಗಿಸಿಕೊಳ್ಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಕಡಿಮೆ ಬಡ್ಡಿಗೆ ಸಾಲ ಕೊಡುವ ಈ ಯೋಜನೆಯ ಲಾಭ ಪಡೆದುಕೊಂಡರೆ ತಮ್ಮ ಹೆಸರು ಗೌಣವಾಗಿ ಕೇಂದ್ರದಲ್ಲಿರುವ ಬಿಜೆಪಿಯ ಹೆಸರು ಮುನ್ನೆಲೆಗೆ ಬರುತ್ತದೆ ಎಂಬ ದುರ್ನೀತಿಯಿಂದಾಗಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಬಳಸಿಕೊಳ್ಳುತ್ತಿಲ್ಲ ಎಂದು ಆರೋಪ ಮಾಡಿದರು.

ಜಿಲ್ಲೆಯಲ್ಲಿರುವ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯೂ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲರ ವ್ಯಾಪ್ತಿಗೆ ಬರುತ್ತದೆ. ಬಬಲೇಶ್ವರ ತಾಲೂಕಿನಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಭಾವಿ ಸಚಿವ ಎಂ.ಬಿ.ಪಾಟೀಲರ ಕ್ಷೇತ್ರದಲ್ಲಿದೆ. ಆದರೂ ಅವರದ್ದೆ ಸರ್ಕಾರವಿದ್ದರೂ ಅವರು ಸಿಎಂ ಅವರ ಮನವೊಲಿಸಿ ಕೇಂದ್ರದಿಂದ ಸಾಲ ಪಡೆಯುವ ಪ್ರಯೋಜನ ಪಡೆದಿಲ್ಲ. ಬಬಲೇಶ್ವರ ಕ್ಷೇತ್ರದ ಶಾಸಕರಾಗಿ, ಮಂತ್ರಿಗಳಾಗಿರುವ ಎಂ.ಬಿ.ಪಾಟೀಲರು ಸಿಎಂ ಮನವೊಲಿಸಿ ಕೇಂದ್ರದ ಸಹಾಯ ಪಡೆದು ಕಾರ್ಖಾನೆಗಳನ್ನು ಪುನಶ್ಚೇತನ ಮಾಡಬೇಕು. ಇಲ್ಲದಿದ್ದರೆ ರಾಜೀನಾಮೆ‌ ಕೊಡಬೇಕು. ಇಷ್ಟೆ ಅಲ್ಲದೆ ಬಸವನಬಾಗೇವಾಡಿ ಶಾಸಕರಾಗಿರುವ ಶಿವಾನಂದ ಪಾಟೀಲರೇ ಸಕ್ಕರೆ ಸಚಿವರಿದ್ದಾರೆ. ಅವರೂ ಸಹ ಈ ಹಿಂದೆ ಬಬಲೇಶ್ವರ ಕ್ಷೇತ್ರದ ಜನರ ಆಶೀರ್ವಾದ ಪಡೆದಿರುವುದರಿಂದ ಸಿಎಂ ಅವರ ಮನವೊಲಿಸಿ ಈಗ ಕೇಂದ್ರದ ಎನ್‌ಸಿಡಿಸಿ ಯೋಜನೆಯನ್ನು ಉಪಯೋಗ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ರಾಜ್ಯದ ಎಲ್ಲ ಕಾಂಗ್ರೆಸ್ ಶಾಸಕರು, ಸಚಿವರು ಸಿಎಂ ಅವರ ಮೇಲೆ ಒತ್ತಡ ಹಾಕಿ ಇಲ್ಲವೇ ಅವರ ಮನವೊಲಿಸಿ ಕೇಂದ್ರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸಹಕಾರಿ ಸಕ್ಕರೆ ಕಾರ್ಖಾನೆಗಳ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಂಜಯ ಕನಮಡಿ, ಈರಣ್ಣ ರಾವೂರ ಉಪಸ್ಥಿತರಿದ್ದರು.

-------

ಕೋಟ್‌

ಸಿಎಂ ಸಿದ್ಧರಾಮಯ್ಯ ಹಾಗೂ ಅವರ ಸಂಪುಟ ಸಚಿವರ ಮೊಂಡುತನದಿಂದಾಗಿ ಇವರು ಈ ಯೋಜನೆ ಉಪಯೋಗಿಸಿಕೊಳ್ಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಕೇಂದ್ರ ಸಚಿವ ಅಮೀತ್ ಶಾ ನೇತೃತ್ವದಲ್ಲಿ ಕಡಿಮೆ ಬಡ್ಡಿಗೆ ಸಾಲ ಕೊಡುವ ಈ ಯೋಜನೆಯ ಲಾಭ ಪಡೆದುಕೊಂಡರೆ ತಮ್ಮ ಹೆಸರು ಗೌಣವಾಗಿ ಕೇಂದ್ರದಲ್ಲಿರುವ ಬಿಜೆಪಿಯ ಹೆಸರು ಮುನ್ನೆಲೆಗೆ ಬರುತ್ತದೆ ಎಂಬ ದುರ್ನೀತಿಯಿಂದಾಗಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಬಳಸಿಕೊಳ್ಳುತ್ತಿಲ್ಲ.

- ಗುರುಲಿಂಗಪ್ಪ ಅಂಗಡಿ, ಬಿಜೆಪಿ ಜಿಲ್ಲಾಧ್ಯಕ್ಷ