ಶಿಕ್ಷಣ ಹಾಗೂ ಜ್ಞಾನಕ್ಕೆ ವಿಶೇಷ ಶಕ್ತಿ ಇದೆ. ನಮ್ಮಲ್ಲಿರುವ ವಿಶೇಷತೆ, ಶಕ್ತಿ ಅರಿತು ಮುಂದೆ ಸಾಗಿದರೆ ಗೆಲುವು. ಕಷ್ಟ ಸಾವಿರ ಬಂದರೂ ದೃಷ್ಟಿ ಗುರಿ ಕಡೆಗೆ ಇರಬೇಕು.

ಕನ್ನಡಪ್ರಭ ವಾರ್ತೆ ಕುಮಟಾ

ಶಿಕ್ಷಣ ಹಾಗೂ ಜ್ಞಾನಕ್ಕೆ ವಿಶೇಷ ಶಕ್ತಿ ಇದೆ. ನಮ್ಮಲ್ಲಿರುವ ವಿಶೇಷತೆ, ಶಕ್ತಿ ಅರಿತು ಮುಂದೆ ಸಾಗಿದರೆ ಗೆಲುವು. ಕಷ್ಟ ಸಾವಿರ ಬಂದರೂ ದೃಷ್ಟಿ ಗುರಿ ಕಡೆಗೆ ಇರಬೇಕು ಎಂದು ಪತ್ರಕರ್ತೆ ಜಯಶ್ರೀ ಮರಾಠಿ ಕಾನಸೂರ ಹೇಳಿದರು.

ತಾಲೂಕಿನ ಶೇಡಿಗದ್ದೆಯಲ್ಲಿ ತಾಲೂಕು ಮಟ್ಟದ ಕುಂಬ್ರಿ ಮರಾಠಿ ಸಮಾಜದ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಪಡೆದ ಒಟ್ಟು ೧೮ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಜ್ಞಾನಕ್ಕೆ ಸಾಟಿ ಬೇರೆ ಇಲ್ಲ. ಸಾಧನೆಯೆಡೆಗೆ ಪ್ರಯತ್ನಶೀಲ ವ್ಯಕ್ತಿ ನಿರಂತರ ಸಾಗುತ್ತಿದ್ದರೆ ಕಾಲಕೂಡಿ ಬಂದಾಗ ವಿಜಯಶಾಲಿಯಾಗುತ್ತಾನೆ. ಎಲ್ಲದಕ್ಕೂ ಇಚ್ಛಾಶಕ್ತಿ ಬೇಕು. ಸಾಧನೆಯ ಹಾದಿಯಲ್ಲಿ ನೆಪಗಳನ್ನು ಬದಿಗೊತ್ತಿ ಸಾಗಬೇಕು. ಕಷ್ಟಗಳನ್ನು ಮೀರಿ ಬೆಳೆಯುವ ಇಚ್ಛಾ ಶಕ್ತಿಯಿಂದ ಹೋರಾಡಿದರೆ ಗೆಲವು ನಮ್ಮನ್ನೇ ಹುಡುಕಿಕೊಂಡು ಬರುತ್ತದೆ. ಮುಖ್ಯವಾಗಿ ಶಿಕ್ಷಣವೆಂಬುದು ಮಹಿಳೆಯರಿಗೆ ಶಕ್ತಿ ಹಾಗೂ ಸಬಲ ಅಸ್ತ್ರ. ಮಾಡುವ ಕೆಲಸ ಯಾವುದಾದರೂ ವೃತ್ತಿಪರತೆ ಮುಖ್ಯ ಎಂದರು.

ಒಗ್ಗಟ್ಟು ಸಮುದಾಯದ ಅಭಿವೃದ್ಧಿಗೆ ಕಾರಣ. ನಮ್ಮ ಯೋಚನೆ, ಮಾತು, ವರ್ತನೆ ಮುಖ್ಯ ಮತ್ತು ಅದೇ ನಮ್ಮ ಗುರುತಿನ ಚೀಟಿಯಾಗಿದ್ದು, ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಿ, ನಮ್ಮ ಬೇರಿನ ಅಭಿಮಾನವೇ ನಮಗೆ ಶ್ರೀರಕ್ಷೆ. ಮಾನವೀಯತೆ ಮತ್ತು ತೃಪ್ತಿಯಿಂದ ಬದುಕು ಸುಂದರವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭಾರತಮಾತೆ ಹಾಗೂ ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಚಾಲನೆ ನೀಡಲಾಗಿದ್ದು ಶಿಕ್ಷಕ ದಿವಾಕರ ಮರಾಠಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಮರಾಠಿ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ವನವಾಸಿ ಯುವ ಆಯಾಮ ಪ್ರಮುಖರಾದ ಕೇಶವ ಮರಾಠಿ. ಗ್ರಾಪಂ ಸದಸ್ಯ ರಾಜೀವ ಭಟ್, ಕುಂಬ್ರಿ ಮರಾಠಿ ಸಂಘದ ಜಿಲ್ಲಾ ಉಪಾಧ್ಯಕ್ಷ ವೆಂಕಟ್ರಮಣ ಮರಾಠಿ, ಹರಿಚ್ಚಂದ್ರ ಮರಾಠಿ, ಸೋಮ ಮರಾಠಿ, ತ್ರಿವೇಣಿ ಮಾರಾಠಿ, ತಾಲೂಕಾ ಉಪಾಧ್ಯಕ್ಷರಾದ ಈಶ್ವರ ಮರಾಠಿ, ಜಯಂತ ಮರಾಠಿ, ಹೇಮಾವತಿ ಮರಾಠಿ ಇತರರಿದ್ದರು.

ದೀಪಾ ಸಂಗಡಿಗರು ಸ್ವಾಗತಗೀತೆ ಹಾಡಿದರು. ಸವಿತಾ ಮರಾಠಿ ಸ್ವಾಗತಿಸಿದರು. ತಾಲೂಕಾಧ್ಯಕ್ಷ ಪುರುಷೋತ್ತಮ ಮರಾಠಿ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಮರಾಠಿ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಹಾಗೂ ಯಕ್ಷಗಾನ ಕಾರ್ಯಕ್ರಮ ಗಮನ ಸೆಳೆಯಿತು.