ಹಾರೋಹಳ್ಳಿಯನ್ನು ಸುಂದರ ನಗರವನ್ನಾಗಿ ಅಭಿವೃದ್ಧಿಗೊಳಿಸುವೆ: ಡಿಕೆ ಸುರೇಶ್

| Published : Apr 17 2024, 01:28 AM IST

ಹಾರೋಹಳ್ಳಿಯನ್ನು ಸುಂದರ ನಗರವನ್ನಾಗಿ ಅಭಿವೃದ್ಧಿಗೊಳಿಸುವೆ: ಡಿಕೆ ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಈ ತಾಲೂಕಿನ ಮೇಲೆ ನಮಗಿರುವ ಪ್ರೀತಿ. ಇಂತಹ ಪ್ರೀತಿ 25 ವರ್ಷ ಆಡಳಿತ ಮಾಡಿದವರಿಗೆ, ಪ್ರಧಾನಿಯಾದವರಿಗೆ ಇರಲಿಲ್ಲ. ಅವರಿಗೆ ಇದ್ದ ಉದ್ದೇಶ ಅವರಿಗೆ ನೀವು ಮತ ಹಾಕಬೇಕು, ಅವರು, ಅವರ ಮಗ, ಮೊಮ್ಮಗನಿಗೆ ಒಳ್ಳೆಯದಾಗಬೇಕು ಎಂಬುದಷ್ಟೇ ಆಗಿತ್ತು.

ಕನ್ನಡಪ್ರಭ ವಾರ್ತೆ ಹಾರೋಹಳ್ಳಿ

ಕುಡಿಯುವ ನೀರು, ರಸ್ತೆ, ಚರಂಡಿ ಸೇರಿ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಹಾರೋಹಳ್ಳಿಯನ್ನು ಸುಂದರ ನಗರವನ್ನಾಗಿ ಅಭಿವೃದ್ಧಿ ಮಾಡುವುದಾಗಿ ಸಂಸದ ಡಿ.ಕೆ.ಸುರೇಶ್ ಭರವಸೆ ನೀಡಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ಅವರು, ಈ ಹಿಂದೆ ಶಾಸಕರಾಗಿದ್ದವರು ಹಾರೋಹಳ್ಳಿಯ ಅಭಿವೃದ್ಧಿಗಾಗಿ ನನಗೆ ಸಹಕಾರ ನೀಡಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಹಾರೋಹಳ್ಳಿಯ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದರು.

ಹಾರೋಹಳ್ಳಿ ತಾಲೂಕಾಗಿದ್ದರೂ ಕಚೇರಿ ಇರಲಿಲ್ಲ. ನಮ್ಮ ಸರ್ಕಾರ ಬಂದ ನಂತರ ತಾಲೂಕು ಕಚೇರಿಗೆ ಮೂರು ಎಕರೆ ಜಾಗ ಮಂಜೂರು ಮಾಡಿ 17 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಮಂಜೂರಾತಿಗೆ ಮನವಿ ಮಾಡಿದ್ದೇವೆ. ತಾಲೂಕು ಕಚೇರಿ ಇದ್ದರೆ, ರೈತರು ಬಂದು ಹೋಗಿ ಅವರ ಕಷ್ಟ ಕೇಳಲು ಅನುಕೂಲವಾಗುತ್ತದೆ. ಇಂದು ಏನೇ ಕಷ್ಟ ಇದ್ದರೂ ನೀವು ಕನಕಪುರಕ್ಕೆ ಹೋಗಬೇಕು. ಇಲ್ಲೇ ಕಚೇರಿ ಇದ್ದರೆ ಒಂದೇ ಕಡೆ ಎಲ್ಲಾ ವ್ಯವಸ್ಥೆ ಸಿಗಲಿದೆ. ಇಲ್ಲಿ ಪಟ್ಟಣ ಪಂಚಾಯ್ತಿ ಮಾಡಿಸಿದ್ದೇವೆ, ಅದಕ್ಕೂ ಜಾಗ ಇರಲಿಲ್ಲ. ಒಂದೂವರೆ ಎಕರೆ ಜಾಗದಲ್ಲಿ ಪಂಚಾಯ್ತಿ ಕಚೇರಿ ಮಾಡಿಸಿದ್ದೇವೆ ಎಂದರು.

ಇಲ್ಲಿ ಬಡವರು ನಿವೇಶನ ಪಡೆಯಲು ಬಹಳ ಕಷ್ಟವಿದೆ. ಆದರೆ ನಮ್ಮ ಸರ್ಕಾರ 60 ಎಕರೆ ಭೂಮಿ ವಶಪಡಿಸಿಕೊಂಡಿದ್ದು, ಇಲ್ಲಿ ಬಡಾವಣೆ ರೂಪಿಸುತ್ತಿದ್ದು ಸುಮಾರು 3-4 ಸಾವಿರ ನಿವೇಶನಗಳನ್ನು ಬಡವರಿಗೆ ಮುಂದಿನ ಒಂದು ವರ್ಷದಲ್ಲಿ ಹಂಚುತ್ತೇವೆ.ಇಲ್ಲಿ ಚಾಮುಂಡಿ ದೇಗುಲವನ್ನು ಕಟ್ಟಬಾರದು ಎಂದು ಬಿಜೆಪಿಯವರು ಅಡ್ಡಬರುತ್ತಿದ್ದರು. ಈ ರಸ್ತೆಯನ್ನು ಕೂಡ ಅಭಿವೃದ್ಧಿಪಡಿಸಿದ್ದು ನಿಮ್ಮ ಮಾಜಿ ಮುಖ್ಯಮಂತ್ರಿಯಲ್ಲ, ನಾನು. ಈ ತಾಯಿ ಆಶೀರ್ವಾದದಿಂದ ನಾವು ನಿಮ್ಮ ಸೇವೆ ಮಾಡುತ್ತಿದ್ದೇವೆ. ನೀವು ಇಂದಿರಾ ಕ್ಯಾಂಟೀನ್ ಬೇಕು ಎಂದು ಕೇಳಿದಿರಿ, ಅದರ ಕಟ್ಟಡ ಪೂರ್ಣಗೊಳ್ಳುತ್ತಿದ್ದು ಮುಂದಿನ ತಿಂಗಳು ಉದ್ಘಾಟನೆಯಾಗಲಿದೆ ಎಂದು ಹೇಳಿದರು.

ಈ ಚುನಾವಣೆಯಲ್ಲಿ ನಿಂತಿರುವ ಈ ಜಿಲ್ಲೆಯವನು ಎಂದರೆ ನಾನು ಮಾತ್ರ. ಬೇರೆಯವರು ನಾಟಕವಾಡಿಕೊಂಡು ಬಂದಿದ್ದಾರೆ. ಕೋವಿಡ್ ಸಮಯದಲ್ಲಿ ಯಾರೂ ನಿಮ್ಮ ಕಷ್ಟಕ್ಕೆ ಬರಲಿಲ್ಲ. ಎಲ್ಲರೂ ಬೀಗ ಹಾಕಿಕೊಂಡು ತೋಟದ ಮನೆ ಸೇರಿಕೊಂಡರು. ನಾನು ಬೀದಿಗೆ ಇಳಿದು ನಿಮಗೆ ಆಹಾರ, ತರಕಾರಿ, ಔಷಧಿ, ಆಸ್ಪತ್ರೆಗಳಲ್ಲಿ ಬೆಡ್ ಕೊಡಿಸಿದೆ. ಕೊನೆಗೆ ಅನಾಥ ಶವಗಳಿಗೆ ಅಂತ್ಯಸಂಸ್ಕಾರವನ್ನೂ ಮಾಡಿದೆ. ಪ್ರತಿ ನಿತ್ಯ ನಿಮ್ಮ ಕೆಲಸ ಮಾಡಿದ್ದೇನೆ. ನನ್ನ ಈ ಕೆಲಸಕ್ಕೆ ಕೂಲಿ ಕೊಡಿ ಎಂದು ಕೇಳಲು ಬಂದಿದ್ದೇನೆ ಎಂದರು.

ಈ ಭಾಗದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಾಡುತ್ತೇವೆ. ಚುನಾವಣೆ ಬಳಿಕ ಕೆಲಸ ಆರಂಭವಾಗಲಿದೆ. ಕುಮಾರಸ್ವಾಮಿ ಅವರಿಗೆ ಬಡವರ ಕಷ್ಟ ಗೊತ್ತಿಲ್ಲ. ಅವರ ಬಗ್ಗೆ ಚಿಂತನೆ ಇಲ್ಲ. ಅವರು ಕೇವಲ ಮತ ಹಾಕಿಸಿಕೊಂಡು ಪ್ರತಿಯೊಬ್ಬರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಡಿ.ಕೆ.ಸುರೇಶ್ ಟೀಕಿಸಿದರು.

ಶಾಸಕ ಇಕ್ಬಾಲ್ ಹುಸೇನ್ , ಬಮೂಲ್ ನಿರ್ದೇಶಕ ಹರೀಶ್, ಮುಖಂಡರಾದ ಅಶೋಕ್ ,ಕೋಟೆ ಕುಮಾರ್ , ರಾಮಕೃಷ್ಣ ಮತ್ತಿತರರು ಭಾಗವಹಿಸಿದ್ದರು.

ಹಾರೋಹಳ್ಳಿ ನಮ್ಮ ನಡುವಿನ ಬಾಂಧವ್ಯ 25 ವರ್ಷಗಳದ್ದು:

ಹಾರೋಹಳ್ಳಿ ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಇಲ್ಲಿನ ಬೈಪಾಸ್ ನಿರ್ಮಾಣ ಬಹುತೇಕ ಮುಕ್ತಾಯವಾಗಿದೆ. ಹಾರೋಹಳ್ಳಿ ಬೆಳೆಯಲು ಈ ರಸ್ತೆ ಅಗಲೀಕರಣಕ್ಕೆ 10 ಕೋಟಿ ಹಣ ಮಂಜೂರಾತಿ ಮಾಡಿಸಿದ್ದೇವೆ. ಈ ಭಾಗದ ಕೆರೆಗೆ ಕೊಳಚೆ ನೀರು ಬರುತ್ತಿತ್ತು. ಈ ಕೆರೆ ಶುದ್ಧೀಕರಣ ಮಾಡಿ ಅಭಿವೃದ್ಧಿಪಡಿಸಲು 10 ಕೋಟಿ ನೀಡಿ, ಹಾರೋಹಳ್ಳಿಯಲ್ಲಿ ಒಳಚರಂಡಿ ವ್ಯವಸ್ಥೆಗೆ 33 ಕೋಟಿ ಮಂಜೂರಾತಿ ಮಾಡಿಸಲಾಗಿದೆ. ಈ ಹಾರೋಹಳ್ಳಿ ಪಟ್ಟಣವನ್ನು ಸುಂದರ ಪಟ್ಟಣವಾಗಿ ಅಭಿವೃದ್ಧಿಪಡಿಸುವ ಕಾರ್ಯ ಡಿಕೆ ಶಿವಕುಮಾರ್ ಹಾಗೂ ಶಾಸಕ ಇಕ್ಬಾಲ್ ಅವರ ನೇತೃತ್ವದಲ್ಲಿ ಆಗಲಿದೆ ಎಂದು ಹೇಳಿದರು.ಹಾರೋಹಳ್ಳಿಗೆ ಕಾವೇರಿ ನೀರು ನೀಡಲು ಈ ಹಿಂದೆ ಸರ್ಕಾರದಿಂದ 7.50 ಕೋಟಿ ಮಂಜೂರು ಮಾಡಿಸಿದ್ದೆ. ನಂತರ ಬಂದವರು ಇದಕ್ಕೆ ಸಹಕಾರ ನೀಡಲಿಲ್ಲ. ಡಿ.ಕೆ. ಶಿವಕುಮಾರ್ ಡಿಸಿಎಂ ಆದ ನಂತರ ಹಾರೋಹಳ್ಳಿ, ಮರಳವಾಡಿಯ ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಲು 300 ಕೋಟಿ ಮಂಜೂರು ಮಾಡಿದ್ದಾರೆ. ಇದು ಈ ತಾಲೂಕಿನ ಮೇಲೆ ನಮಗಿರುವ ಪ್ರೀತಿ. ಇಂತಹ ಪ್ರೀತಿ 25 ವರ್ಷ ಆಡಳಿತ ಮಾಡಿದವರಿಗೆ, ಪ್ರಧಾನಿಯಾದವರಿಗೆ ಇರಲಿಲ್ಲ. ಅವರಿಗೆ ಇದ್ದ ಉದ್ದೇಶ ಅವರಿಗೆ ನೀವು ಮತ ಹಾಕಬೇಕು, ಅವರು, ಅವರ ಮಗ, ಮೊಮ್ಮಗನಿಗೆ ಒಳ್ಳೆಯದಾಗಬೇಕು ಎಂಬುದಷ್ಟೇ ಆಗಿತ್ತು. ಈಗ ಅವರ ಅಳಿಯನಿಗೆ ಒಳ್ಳೆಯದಾಗಬೇಕು ಎಂದು ಆಲೋಚಿಸುತ್ತಿದ್ದಾರೆ. ಅವರಿಂದ ನಿಮಗೆ ಒಳ್ಳೆಯದಾಗುವುದಿಲ್ಲ. ಇಲ್ಲಿ ಕಾರ್ಯಕರ್ತರಿಲ್ಲ. ನೀವು ದುಡಿಯುತ್ತೀರಿ ಎಂದು ನಿಮ್ಮನ್ನು ಕೂಲಿ ಕಾರ್ಮಿಕರಂತೆ ನೋಡುತ್ತಿದ್ದಾರೆ. ಹಾಸನದಿಂದ ಅಳಿಯನನ್ನು ಕರೆದುಕೊಂಡು ಬಂದಿದ್ದಾರೆ ಎಂದು ಟೀಕಿಸಿದರು.

ನಾನು ಬದುಕಿದರೂ ಇಲ್ಲೆ, ಸತ್ತರೂ ಇಲ್ಲೇ. ಬೇರೆಯವರಂತೆ ನನ್ನ ಒಂದು ಕಣ್ಣು ರಾಮನಗರ, ಮತ್ತೊಂದು ಕಣ್ಣು ಚನ್ನಪಟ್ಟಣ ಎಂದು ಹೇಳುವುದಿಲ್ಲ. ಹಾಗೆ ಹೇಳಿದವರು ಈಗ ಎರಡೂ ಕಣ್ಣುಗಳನ್ನೂ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಈಗ ಅವರು ನನ್ನ ಮೂರನೇ ಕಣ್ಣು ಎಂದು ಹೇಳುವ ಸಾಧ್ಯತೆ ಇದೆ. ಈ ಚಿತ್ರವನ್ನು ನೀವು ನೋಡಿ ಸಾಕಾಗಿದೆ. ಈ ತಾಲೂಕಿನ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಇಕ್ಬಾಲ್ ಹುಸೇನ್ ಜತೆ ಕೈ ಜೋಡಿಸಿ ಕೆಲಸ ಮಾಡುತ್ತೇನೆ.’

- ಡಿ.ಕೆ.ಸುರೇಶ್ , ಕಾಂಗ್ರೆಸ್ ಅಭ್ಯರ್ಥಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರ.

------------------------------------------

ಜನರ ಪ್ರೀತಿ ನೋಡಿ ಆತ್ಮವಿಶ್ವಾಸ ಹೆಚ್ಚಿದೆ: ಡಿ.ಕೆ.ಸುರೇಶ್

ಹಾರೋಹಳ್ಳಿ: ಬಿಸಿಲಿನಲ್ಲೂ ಜನ ನನಗಾಗಿ ಕಾಯುತ್ತಿದ್ದಾರೆ. ಅಪಾರ ಪ್ರೀತಿ ತೋರುತ್ತಿದ್ದಾರೆ. ಇವರನ್ನು ನೋಡಿ ನನಗೆ ಆತ್ಮಸ್ಥೈರ್ಯ ಹೆಚ್ಚಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅ‍ವರು, ಕಾಂಗ್ರೆಸ್ ಗ್ಯಾರಂಟಿ ಮೇಲೆ ಮತ ಕೇಳುತ್ತಿದ್ದರೆ, ಬಿಜೆಪಿ ಅಭ್ಯರ್ಥಿ ಮೋದಿ ಮತ್ತೆ ಪ್ರಧಾನಿ ಆಗಬೇಕು ಎಂದು ಮತ ಕೇಳುತ್ತಿದ್ದಾರೆ, ಪ್ರಧಾನಮಂತ್ರಿಗಳು ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಅವರು ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ನಮ್ಮ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿದೆ ಎಂದರು.

ಪ್ರಧಾನಮಂತ್ರಿಗಳು ನೂರಾರು ಭಾಷಣಗಳಲ್ಲಿ ಬೆಲೆ ಏರಿಕೆ ತಡೆಯುತ್ತೇನೆ, ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುತ್ತೇನೆ ಎಂದಿದ್ದರು, ಆದರೆ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಯುವಕರು ರಸ್ತೆಯಲ್ಲಿ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗಿದೆ. ಯುವಕರನ್ನು ಸೆಳೆಯಲು ಬಿಜೆಪಿಯ ಪ್ರಮುಖ ಅಜೆಂಡಾ ವಿಫಲವಾಗಿದ್ದು, ಹೀಗಾಗಿ ಭಾವನಾತ್ಮಕವಾಗಿ ಬಂಧಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನ ವಿಫಲವಾಗಿದ್ದು, ಕೇಂದ್ರದಲ್ಲಿ ಇಂಡಿಯಾ ಮೈತ್ರಿ ಒಕ್ಕೂಟ ಸರ್ಕಾರ ರಚಿಸಲಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿಯವರು ಹೋದ ಕಡೆಯಲ್ಲೆಲ್ಲಾ ನಿಮ್ಮ ಹೆಸರು ಪ್ರಸ್ತಾಪಿಸುತ್ತಿದ್ದಾರೆ ಎಂದು ಕೇಳಿದಾಗ, ಅವರು ಕನ್ನಡಿಗರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಬೇಕು. ಕನ್ನಡಿಗರ ತೆರಿಗೆ ಹಣ ಉತ್ತರ ಭಾರತಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಮ್ಮ ಹಣ ಗುಜರಾತ್, ಉತ್ತರ ಪ್ರದೇಶದ ಅಭಿವೃದ್ಧಿಗೆ ಬಳಕೆಯಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಕರ್ನಾಟಕಕ್ಕೆ ಯಾವುದೇ ರೀತಿಯ ವಿಶೇಷ ಅನುದಾನ ನೀಡಿಲ್ಲ. ಬೆಂಗಳೂರಿನ ಅಭಿವೃದ್ಧಿಗೆ ಅವರು ಕೊಟ್ಟಿರುವ ಕೊಡುಗೆಯನ್ನು ಪ್ರಸ್ತಾಪಿಸಬೇಕು ಎಂದರು.

ಕನ್ನಡಿಗರು ಕಳೆದ 10 ವರ್ಷಗಳಲ್ಲಿ ಕೇಂದ್ರಕ್ಕೆ 24 ಲಕ್ಷ ಕೋಟಿ ತೆರಿಗೆ ಪಾವತಿಸಿದ್ದು, ಕೇಂದ್ರ ಸರ್ಕಾರ ನಮಗೆ ಮರಳಿ ನೀಡಿರುವುದು ಕೇವಲ 2.92 ಲಕ್ಷ ಕೋಟಿ ಮಾತ್ರ. ಉಳಿದ 21 ಲಕ್ಷ ಕೋಟಿ ಯಾವ ರಾಜ್ಯಗಳಿಗೆ ಹೋಯಿತು? ನಮ್ಮ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಯಾಕೆ ಅನುಮತಿ ನೀಡಿಲ್ಲ. ಇಲ್ಲಿ ಉದ್ಯೋಗ ಸೃಷ್ಟಿಗೆ ಅವರು ಕೊಟ್ಟ ಕಾರ್ಯಕ್ರಮವೇನು? ಕೇವಲ ಭಾಷಣದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ, ಸ್ಟಾರ್ಟಪ್ ಇಂಡಿಯಾ ಎಂದು ಘೋಷಣೆ ಕೂಗಿದರೆ ಪ್ರಯೋಜನವಿಲ್ಲ. ಅದು ರೈತರಿಗೆ ಹೇಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಪ್ರಶ್ನಿಸಿ ನಾನು ನನ್ನ ತೆರಿಗೆ ನನ್ನ ಹಕ್ಕು ಹೋರಾಟ ಮಾಡಿದ್ದೇನೆ. ಹೀಗಾಗಿ ಅವರು ನನ್ನ ವಿರುದ್ಧ ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ರಾಜ್ಯದ ಜನ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಕೇವಲ ಒಂದು ಜಾತಿ, ಒಂದು ಧರ್ಮ, ಒಂದು ಭಾಷೆಯ ಜನರಿಲ್ಲ. ಅವರ ತೆರಿಗೆ ಹಣ ಪಡೆದು ಹೇಗೆ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಹೇಳಿದ್ದೇನೆ. 2008ರಲ್ಲಿ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಇದೇ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದರು. ಅವರು ಮಾತನಾಡಿದರೆ ದೇಶಪ್ರೇಮ, ನಾನು ಮಾತನಾಡಿದರೆ ದೇಶ ವಿರೋಧಿ ಎಂಬ ನೀತಿ ಎಷ್ಟು ಸರಿ? ನಾನು ನಮ್ಮ ಯುವಕರ ಭವಿಷ್ಯದ ದೃಷ್ಟಿಯಿಂದ ಈ ವಿಚಾರ ತಿಳಿಸಿದ್ದೇನೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರವನ್ನು ಪಿಕ್ ಪಾಕೆಟ್ ಸರ್ಕಾರ ಎಂದಿರುವ ಮಾಜಿ ಸಿಎಂ ಕುಮಾರಸ್ವಾಮಿರವರ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಈ ಹಿಂದೆ ಮಾಡಿದ್ದ ಸರ್ಕಾರ ಕಳ್ಳತನದ ಸರ್ಕಾರವಾಗಿತ್ತು ಎಂದು ಸುರೇಶ್ ತಿರುಗೇಟು ನೀಡಿದರು.

‘ಕರ್ನಾಟಕ ಚಿತ್ರರಂಗದ ಖ್ಯಾತ ನಿರ್ಮಾಪಕರು, ನಟರಾದ ದ್ವಾರಕೀಶ್ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಒಂದು ಕಾಲದಲ್ಲಿ ಅವರಿಲ್ಲದೆ ಸಿನಿಮಾಗಳೇ ನಡೆಯುತ್ತಿರಲಿಲ್ಲ. ಅವರು ಬಹಳ ಉತ್ತಮ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ, ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಚಿತ್ರಗಳಲ್ಲಿ ದ್ವಾರಕೀಶ್ ಅವರನ್ನು ನಾವು ಮೆಲುಕು ಹಾಕಬೇಕು. ಆ ವ್ಯಕ್ತಿ ಚಿಕ್ಕದಾಗಿದ್ದರೆ ಅವರ ಕೀರ್ತಿ ದೊಡ್ಡದಾಗಿತ್ತು. ಕನ್ನಡ ಚಿತ್ರರಂಗಕ್ಕೆ ಮತ್ತೆ ಇಂತಹ ವ್ಯಕ್ತಿ ಸಿಗುವುದು ಕಷ್ಟ.’

- ಡಿ.ಕೆ.ಸುರೇಶ್ , ಸಂಸದರು.