ಸಾರಾಂಶ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಭಾರತವು ಮುಂದುವರಿದ ದೇಶಗಳ ಸಾಲಿಗೆ ಸೇರ್ಪಡೆಗೊಳ್ಳಬೇಕಾದರೆ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಮಹತ್ವ ನೀಡಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅಭಿಪ್ರಾಯಪಟ್ಟರು.ಹೋಬಳಿ ಕೇಂದ್ರದ ಗೋಕುಲ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ 29ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಶಿಕ್ಷಣ ಕ್ಷೇತ್ರ ಹೆಚ್ಚು ಪ್ರಬಲಗೊಳ್ಳುತ್ತಿದ್ದು, ಐಎಎಸ್, ಐಪಿಎಸ್, ಐಐಟಿ, ಮೆಡಿಕಲ್ ಕ್ಷೇತ್ರಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಸಾಧನೆ ಮಾಡುತ್ತಿದ್ದಾರೆ. ಇದರಿಂದ ದೇಶದಲ್ಲಿ ಆರ್ಥಿಕ ಪ್ರಗತಿ ಬೆಳವಣಿಗೆ ಆಗುವುದರ ಜೊತೆಗೆ ವಿದೇಶ ಮಟ್ಟದಲ್ಲಿ ಭಾರತ ದೇಶ ಹೆಚ್ಚು ಪ್ರಬಲಗೊಳ್ಳುತ್ತಿದೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.
ಗೋಕುಲ ವಿದ್ಯಾ ಸಂಸ್ಥೆ ಕಳೆದ 29 ವರ್ಷಗಳಿಂದ ಹೋಬಳಿ ಕೇಂದ್ರದಲ್ಲಿ ಈ ಭಾಗದ ಮಕ್ಕಳಿಗೆ ಕಡಿಮೆ ಹಣದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಶಾಲಾ ಆಡಳಿತ ಮಂಡಳಿಯವರ ಮನವಿ ಮೇರೆಗೆ ಶಾಲೆಗೆ ಉತ್ತಮದ ರಸ್ತೆ ಅವಶ್ಯಕತೆ ಇದ್ದು, ಈ ಸಂಬಂಧ ಎಂಎಂಎಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ರಸ್ತೆಗೆ ಎಂಎಂಎಲ್ ವ್ಯಾಪ್ತಿಯಲ್ಲಿರುವ ಜಾಗ ಬಿಡಿಸಲು ಸದ್ಯದಲ್ಲೇ ಕ್ರಮ ಕೈಗೊಳ್ಳಲಾಗುತ್ತದೆ. ಇದರ ಜೊತೆಗೆ ಕುಡಿಯುವ ನೀರು ಸಾಧ್ಯತೆ ನೀಡಲಾಗುತ್ತದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ, ಎಚ್. ಎನ್ ದೀಪ ಮಾತನಾಡಿ, ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕೂಡ ಕಳಿಸಬೇಕು. ಆಗ ಮಾತ್ರ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಇತ್ತೀಚಿನಗಳಲ್ಲಿ ಮೊಬೈಲ್ ಬಳಕೆಯಿಂದ ಮಕ್ಕಳು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಈ ಬಗ್ಗೆ ಎಚ್ಚರವಹಿಸುವುದು ಸೂಕ್ತವೆಂದರು.
ಗೋಕುಲ ವಿದ್ಯಾಸಂಸ್ಥೆ ಕಾರ್ಯದರ್ಶಿ ನಾರಾಯಣ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯದ ಬಗ್ಗೆಯೂ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕೇವಲ ಹಣ ಮಾಡುವ ಉದ್ದೇಶದಿಂದ ನಾನು ಶಾಲೆ ನಡೆಸುತ್ತಿಲ್ಲ, ಈ ಭಾಗದ ರೈತರ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಶಾಲೆ ನಡೆಸುತ್ತಿದ್ದೇವೆ, ಪೋಷಕರ ಸಹಕಾರವು ಮುಖ್ಯವಾಗಿದೆ ಎಂದರು.ಕಾರ್ಯಕ್ರಮದ ಗೋಧೂಳಿ ಪಯಣ ವೇದಿಕೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಪೋಷಕರಿಗೆ ಹಾಗೂ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಬಿಆರ್‌ಸಿ ಅನಿಲ್, ಗೋಕುಲ ವಿದ್ಯಾಸಂಸ್ಥೆ ಗೌರವ ಅಧ್ಯಕ್ಷ ಎಚ್ ಎಂ ಗೋಪಾಲ್, ಅಧ್ಯಕ್ಷ ಎನ್.ಬಿ. ಉಮೇಶ್, ಸಂಸ್ಥೆಯ ಉಪಾಧ್ಯಕ್ಷೆ ಪೂರ್ಣಿಮಾ ಬಿ. ಚಂದ್ರಪ್ಪ, ಸಂಸ್ಥೆಯ ನಿರ್ದೇಶಕರುಗಳಾದ ಎಚ್. ಎನ್ ಪೃಥ್ವಿ ಯಾದವ್, ಎಚ್ ಎನ್ ಮನೋಜ್ ಯಾದವ್, ಪ್ರಶಾಂತ್ ಯಾದವ್, ಎನ್ ಬಿ, ಶಿವಮ್ಮ ನಾರಾಯಣ ಮುಖ್ಯ ಶಿಕ್ಷಕಿ ಜಿ. ಭುವನೇಶ್ವರಿ, ಉದ್ಯಮಿ ಚಂದ್ರಪ್ಪ, ಕೃಷಿ ಪತ್ತಿನ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ದ್ರಾಕ್ಷಾಯಿಣಿ ಯಲ್ಲಪ್ಪ, ಶಿಕ್ಷಕ ನಂಜುಂಡಿ, ಮುಖಂಡರಾದ ಕುಳ್ಳೇಗೌಡ, ಪೊಲೀಸ್ ನಾರಾಯಣಗೌಡ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.