ತಾಲೂಕಿನ ನಂದೊಳ್ಳಿ ಹಾಗೂ ಚಂದಗುಳಿ ಗ್ರಾಮೀಣ ಭಾಗದ ಅನೇಕ ರಸ್ತೆಗಳ ಅಭಿವೃದ್ಧಿ ಹಂತಹಂತವಾಗಿ ಆಗಬೇಕಿದ್ದು, ಆ ನಿಟ್ಟಿನಲ್ಲಿ ವಿಶೇಷವಾಗಿ ಪ್ರಯತ್ನಿಸಲಾಗುವುದು.
₹೯.೯೦ ಕೋಟಿ ವೆಚ್ಚದಲ್ಲಿ ಅಣಲಗಾರ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ ಯಲ್ಲಾಪುರತಾಲೂಕಿನ ನಂದೊಳ್ಳಿ ಹಾಗೂ ಚಂದಗುಳಿ ಗ್ರಾಮೀಣ ಭಾಗದ ಅನೇಕ ರಸ್ತೆಗಳ ಅಭಿವೃದ್ಧಿ ಹಂತಹಂತವಾಗಿ ಆಗಬೇಕಿದ್ದು, ಆ ನಿಟ್ಟಿನಲ್ಲಿ ವಿಶೇಷವಾಗಿ ಪ್ರಯತ್ನಿಸಲಾಗುವುದು ಎಂದು ಶಾಸಕ ಶಿವರಾಮ ಹೆಬ್ಬಾರ ಭರವಸೆ ನೀಡಿದರು.
ಸೋಮವಾರ ತಾಲೂಕಿನ ಅಣಲಗಾರದಲ್ಲಿ ಮಾಗೋಡಕ್ರಾಸ್‌ನಿಂದ ಅಣಲಗಾರ ದೇವಸ್ಥಾನದವರೆಗಿನ ₹೯.೯೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಕ್ಷೇತ್ರದ ಅಭಿವೃದ್ಧಿ ಮಾಡುವುದು ಜನಪ್ರತಿನಿಧಿಯಾದವನ ಕರ್ತವ್ಯ. ಅಭಿವೃದ್ಧಿ ಮಾಡಿದಾಗ ಕೃತಜ್ಞತೆಯಿಂದ ನೆನಪಿಸಿಕೊಳ್ಳುವ ಸೌಜನ್ಯವನ್ನೂ ಜನರು ಹೊಂದಿರಬೇಕು. ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಯಾರ ಸಹಾಯ ಬೇಕೋ ಅವರ ಶಕ್ತಿ, ಸಾಮರ್ಥ್ಯವನ್ನು ಬಳಸಿಕೊಂಡು ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದೇನೆ. ಈ ಕಾರ್ಯದಲ್ಲಿ ಉಪಕರಿಸಿದವರನ್ನು ಸ್ಮರಿಸದೇ ಇರುವಷ್ಟು ಸಣ್ಣತನ ನನ್ನಲ್ಲಿಲ್ಲ ಎಂದರು.
ಎಲ್ಲಾ ವಿಷಯಕ್ಕೂ ರಾಜಕಾರಣ ಸರಿಯಲ್ಲ. ನಾನು ಅಂತಹ ಚಿಲ್ಲರೆ ರಾಜಕಾರಣ ಮಾಡುವುದೂ ಇಲ್ಲ ಎಂದ ಅವರು, ಕಾಮಗಾರಿ ಗುಣಮಟ್ಟದಿಂದ ಆಗುವ ಬಗ್ಗೆ ಗುತ್ತಿಗೆದಾರರಿಗೆ ಸೂಚಿಸಿದ್ದು, ಸ್ಥಳಿಯರೂ ಸಹಕಾರ ನೀಡಬೇಕು ಎಂದರು.ಇದೇ ವೇಳೆ ಶಾಸಕರನ್ನು ದೇವಸ್ಥಾನದ ಆಡಳಿತ ಸಮಿತಿಯಿಂದ ಗೌರವಿಸಲಾಯಿತು.
ಹಿರಿಯರಾದ ರಾಮಕೃಷ್ಣ ಭಟ್ಟ ಬಿದ್ರೆಪಾಲ್, ತಿಮ್ಮಣ್ಣ ಭಾಗ್ವತ್ ನಂದೊಳ್ಳಿ, ಸೀಮಾಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಗ್ರಾಪಂ ಆಡಳಿತಾಧಿಕಾರಿ ಅರವಿಂದ ಪಾಟೀಲ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ ದೇಸಾಯಿಮನೆ, ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ದೇವಸ್ಥಾನದ ಪುರೋಹಿತ ಡಾ. ಶಂಕರ ಭಟ್ಟ ಬಾಲಿಗದ್ದೆ, ಗ್ರಾಪಂ ಮಾಜಿ ಸದಸ್ಯ ಟಿ.ಆರ್. ಹೆಗಡೆ ತೊಂಡೆಕೆರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ ಉಪಳೇಶ್ವರ, ಗುತ್ತಿಗೆದಾರ ಪರೀಕ್ಷಿತ ನಾಯಕ, ಉದ್ಯಮಿ ವಿಶ್ವನಾಥ ಭಟ್ಟ ಭಾಗವಹಿಸಿದ್ದರು.ನಂದೊಳ್ಳಿ ಸೊಸೈಟಿ ಅಧ್ಯಕ್ಷ ಟಿ.ವಿ. ಭಾಗ್ವತ ಸ್ವಾಗತಿಸಿದರು. ದೇವಸ್ಥಾನ ಅಧ್ಯಕ್ಷ ಎನ್.ಆರ್. ಭಟ್ಟ ಬಿದ್ರೆಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಕೋಪಯೋಗಿ ಇಲಾಖೆಯ ಎಇಇ ಸಂಜೀವ ಪಾತ್ರೋಟ ರಸ್ತೆ ಕಾಮಗಾರಿ ಕುರಿತು ವಿವರಿಸಿದರು. ಪತ್ರಕರ್ತ ಶ್ರೀಧರ ಅಣಲಗಾರ ನಿರ್ವಹಿಸಿದರು. ಗಣೇಶ ಹೆಗಡೆ ನಂದೊಳ್ಳಿ ವಂದಿಸಿದರು.