ಸಾರಾಂಶ
ಕನ್ನಡಪ್ರಭ ವಾರ್ತೆ ತರೀಕೆರೆ
ಸಹಕಾರಿ ಚಳುವಳಿ ಅರ್ಥ ಮಾಡಿಕೊಂಡರೆ ಬೆಳವಣಿಗೆ ಖಂಡಿತ ಎಂದು ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಡಿ.ಎಸ್. ಸುರೇಶ್ ಹೇಳಿದರು.ಅವರು, ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಚಿಕ್ಕಮಗಳೂರು ಜಿಲ್ಲಾ ಸಹಕಾರ ಯೂನಿಯನ್ ನಿ., ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ. ಸಹಕಾರ ಇಲಾಖೆ ಹಾಗೂ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ ಎಲ್ಲಾ ಸಹಕಾರ ಸಂಘ, ಬ್ಯಾಂಕ್.ಗಳ ಸಹಯೋಗದೊಂದಿಗೆ ಪಟ್ಟಣದ ಆರಮನೆ ಹೋಟೆಲ್ ಸಭಾಂಗಣದಲ್ಲಿ ಏರ್ಪಡಾಗಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವ ದಿನ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಪ್ರಧಾನ ಮಂತ್ರಿ ಪಂಡಿತ್ ಜವಹರ್ ಲಾಲ್ ನೆಹರು ಅವರು ಸಹಕಾರ ಚಳುವಳಿಗೆ ಹೆಚ್ಚು ಒತ್ತು ಕೊಟ್ಟಿದ್ದರು. ಮಾಜಿ ಪುರಸಭಾಧ್ಯಕ್ಷರಾದ ಎಂ. ನರೇಂದ್ರ ಅವರಿಗೆ ಸಹಕಾರ ರತ್ನ ಪ್ರಶಸ್ತಿ ದೊರಕಿರುವುದು ಸಂತೋಷ ತಂದಿದೆ. ತರೀಕೆರೆ ಮತ್ತು ಕಡೂರು ತಾಲೂಕುಗಳಿಗೆ ₹100 ಕೋಟಿ ಹೆಚ್ಚು ಸಾಲ ಕೊಡಲಾಗಿದೆ ಎಂದು ಹೇಳಿದರು.ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ನೆಡೆಯುತ್ತಿದೆ. ಮಾಜಿ ಪ್ರಧಾನ ಮಂತ್ರಿ ಪಂಡಿತ್ ಜವಹರ್ ಲಾಲ್ ನೆಹರು ಸಹಕಾರ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟರು. ಸಹಕಾರ ಚಳುವಳಿ ಪ್ರಗತಿಪರವಾಗಿ ಹೋಗಲು ನೆಹರು ಅವರೇ ಕಾರಣ. ಸಹಕಾರ ಸಂಘಗಳು ರೈತರಿಗೆ ಬೇಕಾದ ಎಲ್ಲಾ ಉಪಕರಣಗಳನ್ನು ವ್ಯವಹಾರ ನಡೆಸಬೇಕು ಎಂದು ಹೇಳಿದರು.
ಚಿಕ್ಕಮಗಳೂರು ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕೆ.ಆರ್. ಆನಂದಪ್ಪ ಮಾತನಾಡಿ, ಸಹಕಾರ ಚಳುವಳಿ ಹೇಗೆ ನೆಡೆಯುತ್ತಿದೆ ಎನ್ನುವುದರ ಬಗ್ಗೆ ಚರ್ಚೆ ಆಗಬೇಕು. ಒಂದಕ್ಕೊಂದು ಸಂಘಗಳು ಸಹಕಾರ ನೀಡಿದರೆ ಮಾತ್ರ ಸಹಕಾರ ಸಂಘಗಳು ಬೆಳೆಯುತ್ತವೆ. ಡಿ.ಸಿ.ಸಿ. ಬ್ಯಾಂಕ್ನಲ್ಲೂ ಡಿಪಾಸಿಟ್ ಹಣವನ್ನು ಇಡಬೇಕು ಎಂದು ಅವರು ಮನವಿ ಮಾಡಿದರು.ಚಿಕ್ಕಮಗಳೂರು ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಟಿ.ಎಚ್.ಎಲ್. ರಮೇಶ್ ಮಾತನಾಡಿ ಡಿ.ಸಿ.ಸಿ.ಬ್ಯಾಂಕ್ ನಿಂದ ರೈತರಿಗೆ ಹೊಸ ಸಾಲಗಳನ್ನು ನೀಡಲಾಗಿದೆ. ಸಾಲ ಮರುಪಾವತಿ ಕೂಡ ಆಗಿದೆ. ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರು ಡಿ.ಎಸ್. ಸುರೇಶ್ ನಾಯಕತ್ವದಲ್ಲಿ ಬ್ಯಾಂಕಿಗೆ ಬೃಹತ್ ಆದ ಕಟ್ಟಡ ಕೂಡ ನಿರ್ಮಾಣವಾಗಿದೆ. ಹೆಚ್ಚು ಡಿಪಾಸಿಟ್ ಹಣವನ್ನು ಡಿ.ಸಿ.ಸಿ. ಬ್ಯಾಂಕಿನಲ್ಲಿಡಬೇಕು ಎಂದರು.
ಚಿಕ್ಕಮಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರು (ನಿವೃತ್ತ) ಎಸ್.ವಿ. ಬಸವರಾಜಪ್ಪ ಅವರು ದಿನದ ಮಹತ್ವ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾ ಮಂಡಳ ನಿ. ಮಾಜಿ ಉಪಾಧ್ಯಕ್ಷರು ಟಿ.ವಿ. ಶಿವಶಂಕರರಪ್ಪ ಅವರು ಮಾತನಾಡಿದರು.ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಎಂ. ನರೇಂದ್ರ ಅವರನ್ನು ಸನ್ಮಾನಿಸಲಾಯಿತು.ಮಾಜಿ ಪುರಸಭಾಧ್ಯಕ್ಷರು ಟಿ.ಎಸ್.ಪ್ರಕಾಶ್ ವರ್ಮ, ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷರು ಎಲ್.ಎಸ್. ಶಿವಯೋಗಿ, ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಕೆ.ಆರ್. ಗಂಗಾಧರಪ್ಪ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.