ದಲಿತರು, ಕಾರ್ಮಿಕರು ಸಂಘಟಿತರಾಗದೆ ಅಭಿವೃದ್ಧಿ ಅಸಾಧ್ಯ: ಅಶೋಕ್‌ ಛಲವಾದಿ

| Published : May 03 2024, 01:00 AM IST

ದಲಿತರು, ಕಾರ್ಮಿಕರು ಸಂಘಟಿತರಾಗದೆ ಅಭಿವೃದ್ಧಿ ಅಸಾಧ್ಯ: ಅಶೋಕ್‌ ಛಲವಾದಿ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತರು ಮತ್ತು ಕಾರ್ಮಿಕರು ಸಂಘಟಿತರಾಗದ ಹೊರತು ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್‌ ಎನ್‌.ಛಲವಾದಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ಬೆಂಗಳೂರು

ದಲಿತರು ಮತ್ತು ಕಾರ್ಮಿಕರು ಸಂಘಟಿತರಾಗದ ಹೊರತು ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್‌ ಎನ್‌.ಛಲವಾದಿ ಅಭಿಪ್ರಾಯಪಟ್ಟರು.

ಗುರುವಾರ ದಲಿತ ಸಾಹಿತ್ಯ ಪರಿಷತ್ತು ಮಲ್ಲೇಶ್ವರದಲ್ಲಿರುವ ಗಾಂಧಿ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಕಾರ್ಮಿಕರ ಹಿತರಕ್ಷಣೆಯಲ್ಲಿ ಬಾಬಾ ಸಾಹೇಬರ ಪಾತ್ರ’ ಕುರಿತ ಚಿಂತನಾಗೋಷ್ಠಿ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಬಾಬಾ ಸಾಹೇಬರ ವಿಚಾರಗಳು ದಲಿತ ಕೇರಿ, ಹಿಂದುಳಿದ ವರ್ಗಗಳಿಗೆ ಮಾತ್ರ ಸೀಮಿತವಾಗದೆ ದೇಶದಲ್ಲಿರುವ ಪ್ರತಿ ಮನೆ ಮನೆಗೂ ಮುಟ್ಟಿಸಬೇಕು. ಭಾರತ ಕೃಷಿ ಪ್ರಧಾನ ರಾಷ್ಟ್ರ. ರೈತರು ದೇಶದ ಬೆನ್ನೆಲುಬು. ಆದರೆ ಕಾರ್ಮಿಕರು ಹೃದಯವಿದ್ದಂತೆ. ಹೃದಯ ಕೆಲಸ ನಿಲ್ಲಿಸಿತ್ತೆಂದರೆ ದೇಹದ ಎಲ್ಲ ಕೆಲಸಗಳು ನಿಲ್ಲುತ್ತವೆ. ಹಾಗೆಯೇ ಕಾರ್ಮಿಕರು ಕೆಲಸ ನಿಲ್ಲಿಸಿದರೆ, ರಾಜ್ಯ, ರಾಷ್ಟ್ರ ಅಧೋಗತಿಯತ್ತ ಸಾಗುತ್ತದೆ. ರೈತರಷ್ಟೇ ಕಾರ್ಮಿಕರು ಇಲ್ಲಿ ಮುಖ್ಯ ಎಂದರು.

ದೇಶ ಇಷ್ಟೊಂದು ಮುಂದುವರೆಯಲು ಅಂಬೇಡ್ಕರ್‌ ನೀಡಿದ ಸಂವಿಧಾನದ ಮೂಲಕ ಕೊಟ್ಟಂತ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ವಿಚಾರಗಳು ಕಾರಣ. ಕಾರ್ಮಿಕರು ಈ ಹಿಂದೆ 12ರಿಂದ 15 ಗಂಟೆ ಕೆಲಸ ಮಾಡುತ್ತಿದ್ದರು. ಆದರೆ, ಕಾರ್ಮಿಕರಿಗೂ ಬದುಕಿದೆ. ಅವರ ಆರೋಗ್ಯ ಸ್ಥಿರತೆಗೆ ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡಬೇಕೆಂಬ ಕಾನೂನು ಜಾರಿಗೊಳಿಸುವಲ್ಲಿಯೂ ಅಂಬೇಡ್ಕರ್‌ ಕೊಡುಗೆ ಅಪಾರ ಎಂದು ಹೇಳಿದರು.

ದಲಿತ ಸಾಹಿತ್ಯ ಪರಿಷತ್ತಿನ ಎಂ.ಎಸ್‌.ಕೃಷ್ಣಮೂರ್ತಿ ಮಾತನಾಡಿ, ಸ್ವಾತಂತ್ರ್ಯ ನಂತರದಲ್ಲಿ ಬಿ.ಆರ್‌.ಅಂಬೇಡ್ಕರ್‌ ಅವರು, ಕಾರ್ಮಿಕರಿಗಾಗಿ ಕೊಟ್ಟಂತ ಕೊಡುಗೆ ಮತ್ತು ಹಕ್ಕುಗಳನ್ನು ನಾವು ಸ್ಮರಿಸಬೇಕಾಗುತ್ತದೆ. ಭಾರತದಲ್ಲಿರುವ ಹಲವು ವರ್ಗದ ಕಾರ್ಮಿಕರು ಯಾವುದೇ ಹಕ್ಕುಗಳನ್ನು ಪಡೆದಿದ್ದಾರೆ ಮತ್ತು ಇಂದಿಗೂ ಹಕ್ಕುಗಳನ್ನು ಪಡೆಯುತ್ತಿದ್ದಾರೆ ಎಂಬುದಕ್ಕೆ ಕಾರಣ ಅಂಬೇಡ್ಕರ್‌. ದಲಿತರು, ಹಿಂದುಳಿದವರಿಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಗಟ್ಟಿಯಾಗಲು ಅಂಬೇಡ್ಕರ್‌ ಅವರು ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡ ಡಾ। ಕೆ.ಪ್ರಕಾಶ್‌, ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗೌಡಗೆರೆ ಮಾಯುಶ್ರೀ, ಮಹಿಳಾ ಹೋರಾಟಗಾರ್ತಿ ಟಿ.ಎಚ್‌.ಯಶೋಧ ಇದ್ದರು.