ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಹೀಟ್‌ವೇವ್‌ ವಾರ್ಡ್‌ ಸ್ಥಾಪನೆ

| Published : May 03 2024, 01:00 AM IST

ಸಾರಾಂಶ

ಹಿಂದೆ ಕೊರೋನಾ ದಾಳಿ ನಡೆಸಿದಾಗ ಅದಕ್ಕಾಗಿಯೇ ಕೋವಿಡ್-19 ವಾರ್ಡ್ಗಳನ್ನು ಈ ಹಿಂದೆ ರೂಪಿಸಲಾಗಿತ್ತು. ಅದರಂತೆ ಈಗ ಉಷ್ಣಗಾಳಿಗೆ ತುತ್ತಾಗುತ್ತಿರುವವರ ರಕ್ಷಣೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಸಿಸಹಿತವಾಗಿ ಹೀಟ್ವೇವ್ ವಾರ್ಡ್ಗಳನ್ನು ರೂಪಿಸಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಹಿಂದೆ ಕೊರೋನಾ ದಾಳಿ ನಡೆಸಿದಾಗ ಅದಕ್ಕಾಗಿಯೇ ಕೋವಿಡ್‌-19 ವಾರ್ಡ್‌ಗಳನ್ನು ಈ ಹಿಂದೆ ರೂಪಿಸಲಾಗಿತ್ತು. ಅದರಂತೆ ಈಗ ಉಷ್ಣಗಾಳಿಗೆ ತುತ್ತಾಗುತ್ತಿರುವವರ ರಕ್ಷಣೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಸಿಸಹಿತವಾಗಿ ಹೀಟ್‌ವೇವ್‌ ವಾರ್ಡ್‌ಗಳನ್ನು ರೂಪಿಸಿದೆ.

ಉತ್ತರ ಕರ್ನಾಟಕದಲ್ಲಿ ಉಷ್ಣ ಗಾಳಿ ತೀವ್ರತೆಯಿಂದಾಗಿ ಬಿಸಿಲಿನ ತಾಪ ಕೂಡ ಏರಿಕೆಯಾಗಿದೆ. ಪರಿಣಾಮ ಈಗಾಗಲೇ ರಾಜ್ಯದ ಮೂರು ಕಡೆ (ಶಹಾಪುರ, ಚಿತ್ರದುರ್ಗ, ಬೈಲಹೊಂಗಲ) ಮೂವರು ಈಗಾಗಲೇ ಜೀವ ತೆತ್ತಿದ್ದಾರೆ. ಬಿಸಿಲಿನ ತೀವ್ರತೆ ಕೂಡ ಹೆಚ್ಚಾಗಿರುವುದರಿಂದ ಜನರ ಆರೋಗ್ಯದಲ್ಲಿಯೂ ವ್ಯತ್ಯಾಸವಾಗುತ್ತಿದ್ದು, ಏರುಪೇರಾಗುತ್ತಿದೆ.

ಇದನ್ನು ಮನಗಂಡ ವಿಜಯಪುರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಎಸಿ ಸಹಿತವಾಗಿ ಹೀಟ್ ವ್ಹೇವ್ ವಾರ್ಡ್ ಸ್ಥಾಪಿಸಿದೆ. ಕಳೆದ ಮೂರು ದಿನಗಳಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಉಷ್ಣಗಾಳಿ ಬರುತ್ತಿದೆ. ಶಿಶುಗಳು, ಮಕ್ಕಳು, ಗರ್ಭಿಣಿಯರು, ವೃದ್ಧರು ತೀವ್ರ ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅನಾರೋಗ್ಯ ಕಾಡಿದರೆ ತಕ್ಷಣ ಅವರಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯಲ್ಲಿ ಅಂತಹವರಿಗೆ ಪ್ರತ್ಯೇಕವಾಗಿ 10 ಬೆಡ್‌ಗಳ ಹೀಟ್ ವ್ಹೇವ್ ವಾರ್ಡ್‌ ಸ್ಥಾಪನೆ ಮಾಡಲಾಗಿದೆ. ಬಿಸಿಲಾಘಾತದಿಂದ ಬಳಲಿದವರಿಗೆ ಅಡ್ಮಿಟ್ ಮಾಡಿಕೊಂಡ ತಕ್ಷಣ ಇಸಿಜಿ, ಬಿಪಿ, ಶುಗರ್ ತಪಾಸಣೆ ಮಾಡಲಾಗುತ್ತದೆ. ಅಗತ್ಯ ಬಿದ್ದರೆ ಹೃದಯ ಹಾಗೂ ಮೆದುಳು ತಪಾಸಣೆ ಮಾಡಲಾಗುತ್ತದೆ.

ಏನೇನು ಚಿಕಿತ್ಸೆ ನೀಡಲಾಗುತ್ತದೆ?:

ಹೀಟ್‌ವೇವ್‌ ವಾರ್ಡ್‌ನಲ್ಲಿ ಹಲವು ರೀತಿಯ ಚಿಕಿತ್ಸೆ ನೀಡಲಾಗುತ್ತದೆ. ಆ ಪೈಕಿ ಕೂಲ್‌ಸಲೈನ್, ಐಸ್‌ಬಾಕ್ಸ್‌, ಸನ್‌ಬರ್ನ್‌ ಕ್ರೀಮ್‌, ಓಆರ್‌ಎಸ್‌ ಸೇರಿದಂತೆ ಚಿಕಿತ್ಸೆಗೆ ಬೇಕಾದ ಎಲ್ಲ ಪರಿಕರಗಳು ಇಲ್ಲಿ ಸಿದ್ಧವಾಗಿವೆ. ಬಿಸಿಲು ಹೆಚ್ಚಾಗಿರುವ ಬಾಗಲಕೋಟೆ, ಕಲಬುರ್ಗಿ, ರಾಯಚೂರು, ಯಾದಗಿರಿ, ವಿಜಯಪುರ ಸೇರಿದಂತೆ 10 ಜಿಲ್ಲೆಗಳಲ್ಲಿ ಹೀಟ್ ವ್ಹೇವ್ ವಾರ್ಡ್‌ ಸ್ಥಾಪನೆ ಮಾಡಿ ಚಿಕಿತ್ಸೆ ನೀಡಬೇಕು ಎಂದು ಆರೋಗ್ಯ ಇಲಾಖೆ ಮಾರ್ಚ್‌ನಲ್ಲೇ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಹೀಟ್ ವ್ಹೇವ್ ವಾರ್ಡ್‌ ಸ್ಥಾಪನೆ ಮಾಡಲಾಗಿದೆ.

44 ರಿಂದ 45 ಡಿಗ್ರಿ ಸೆಲ್ಸಿಯಸ್ ತಾಪ:

ವಿಜಯಪುರ ಜಿಲ್ಲೆಯಲ್ಲಿ ಸದ್ಯ 44 ರಿಂದ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದೆ. ಮೇ 3ರ ಹೊತ್ತಿಗೆ ಎರಡರಿಂದ ಮೂರು ಡಿಗ್ರಿ‌ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಈಗಾಗಲೇ ತಾಪಕ್ಕೆ ಹೆದರಿ ಜನರು ಮನೆ ಬಿಟ್ಟು ಹೊರಗಡೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ತಾಪ ಹೆಚ್ಚಳದ ಬಗ್ಗೆ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಜನರನ್ನು ಮತ್ತಷ್ಟು ಬೆವರುವಂತೆ ಮಾಡಿದೆ.

ತಾಪದಿಂದ ರಕ್ಷಿಸಿಕೊಳ್ಳಲು ನಾನಾ ತಂತ್ರ ಬಳಕೆ:

ಹಿಂದೆಂದೂ ಕಾಣದ ಬಿಸಿಲಿನ ತಾಪ ಈಗ ಹೆಚ್ಚಾಗಿದೆ. ಬಿಸಿಲಿನ ಜತೆಗೆ ಉಷ್ಣ ಗಾಳಿ ಕೂಡ ಕೂಡಿಕೊಂಡಿದೆ. ತೀವ್ರ ಉಷ್ಣ ತಡೆದುಕೊಳ್ಳಲಾಗದೆ ಕಂದಮ್ಮಗಳು ಮನೆಯಲ್ಲಿ ಘೀಳಿಡುತ್ತಿವೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಇಳಿ ವಯಸ್ಕರು ಗೋಳಾಡುತ್ತಿದ್ದಾರೆ. ಬಡ ಹಾಗೂ ಮಧ್ಯಮವರ್ಗದ ಜನತೆ ಪ್ರತಿಯೊಬ್ಬರ ಮನೆಯ ಚಾವಣಿ ಮೇಲೆ ತೆಂಗಿನ ಗರಿ, ಪ್ಲಾಸ್ಟಿಕ್ ಹಾಕುವುದು, ಮನೆಯ ಒಳಗೆ ಎರಡ್ಮೂರು ಫ್ಯಾನ್‌ಗಳನ್ನು ಹಾಕುವುದು, ಹಾಸಿಗೆಯನ್ನು ನೀರಿನಲ್ಲಿ ಒದ್ದೆ ಮಾಡಿ ಮಲಗುವುದು ಸಾಮಾನ್ಯವಾಗಿದೆ.

17 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌:

ಉಷ್ಣ ಗಾಳಿಯ ತೀವ್ರತೆ ಹೆಚ್ಚಳವಾಗಿದೆ. ಮೇ 3ರವರೆಗೆ ತಾಪಮಾನ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ಈ ಭಾಗದ 17 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮಕ್ಕಳು ಹಾಗೂ ವಯೋವೃದ್ಧರು ಆರೋಗ್ಯದ ಕಡೆ ಗಮನ ಹರಿಸಬೇಕು. ಚಿಕ್ಕ‌ಮಕ್ಕಳಲ್ಲಿ ರೋಗ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮನೆಯಲ್ಲಿಯೇ ತಂಪಾದ ಪ್ರದೇಶದಲ್ಲಿ ಇರುವುದು ಉತ್ತಮ ಎಂದು ತಿಳಿಸಿದೆ.

----

ಬಾಕ್ಸ್‌

ವೈದ್ಯರ ಸಲಹೆಗಳು....

ಅತಿಯಾದ ಬಿಸಿಲಿಗೆ ತಿರುಗಾಡಿದಾಗ ತಲೆಸುತ್ತು, ಶುಗರ್, ಬಿಪಿಯಲ್ಲಿ ವ್ಯತ್ಯಾಸವಾಗಲಿದೆ. ಮೈಮೇಲೆ ತುರಿಕೆ, ಕೆಂಪು ಗುಳ್ಳೆಗಳು ಆಗಲಿವೆ. ಅತಿಹೆಚ್ಚು ಸಮಯ ಬಿಸಿಲಿಗೆ ಮೈಯೊಡ್ಡಿದರೆ ಹೀಟ್ ಸ್ಟ್ರೋಕ್ (ಪಾರ್ಶ್ವವಾಯು) ಆಗುವ ಸಂಭವ ಇದೆ. ಹೀಗಾಗಿ ತೆಳುವಾದ ಬಟ್ಟೆಗಳನ್ನು ಆದಷ್ಟು ಹತ್ತಿಬಟ್ಟೆಗಳನ್ನು ಧರಿಸುವುದು, ದಿನಕ್ಕೆ ಕನಿಷ್ಠ 4 ಲೀಟರ್ ನೀರು ಕುಡಿಯುವುದು, ಎಳನೀರು, ಮಜ್ಜಿಗೆ, ಪಾನಕ ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶವಿರುವ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಬೇಕು. ವಿಶೇಷವಾಗಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ಹೆಚ್ಚಿನ ಆರೈಕೆಯ ಅಗತ್ಯವಿದೆ. ಬೆಳಗ್ಗೆ 11ರಿಂದ ಸಂಜೆ 5ರ ವರೆಗೆ ಹೊರಗಡೆ ಓಡಾಡದೆ ಎಲ್ಲರೂ ಮನೆಯಲ್ಲೇ ಇರುವುದು ಒಳಿತು ಎಂದು ವೈದ್ಯರು ಸಲಹೆಗಳನ್ನು ನೀಡಿದ್ದಾರೆ.

-------------

ಕೋಟ್

ಬಿಸಿಲಿನ ಹೊಡೆತಕ್ಕೆ ತಲೆಸುತ್ತು, ವಾಂತಿ, ಭೇದಿ, ಶುಗರ್ ಹಾಗೂ ಬಿಪಿಯಲ್ಲಿ ವ್ಯತ್ಯಾಸವಾಗಿ ಆಸ್ಪತ್ರೆಗೆ ಬರುವ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಶಾಖಾಘಾತದಿಂದ ಬರುವವರಿಗಾಗಿಯೇ ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತವಾದ ಎಸಿ ಸೌಲಭ್ಯವುಳ್ಳ 10 ಹಾಸಿಗೆಗಳನ್ನು ಹೊಂದಿದ ಹೀಟ್ ವ್ಹೇವ್ ವಾರ್ಡ್ ನಿರ್ಮಿಸಲಾಗಿದೆ. ಉಷ್ಣಾಘಾತದಿಂದ ರೋಗಿಗಳು ಬಂದಲ್ಲಿ, ನಮ್ಮ ವೈದ್ಯರ ತಂಡ ಸಿದ್ಧವಾಗಿದ್ದು, ಯಾವುದೇ ತೊಂದರೆ ಆಗದಂತೆ ಚಿಕಿತ್ಸೆ ನೀಡಲಾಗುವುದು.

-ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾಸ್ಪತ್ರೆ.