ಹಣದ ಕೊರತೆಯಿಂದ ಅಭಿವೃದ್ಧಿ ನಡೆಯುತ್ತಿಲ್ಲ: ಮಂಜುನಾಥ್‌ ಆರೋಪ

| Published : Feb 12 2024, 01:34 AM IST

ಹಣದ ಕೊರತೆಯಿಂದ ಅಭಿವೃದ್ಧಿ ನಡೆಯುತ್ತಿಲ್ಲ: ಮಂಜುನಾಥ್‌ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಣದ ಕೊರತೆ ಉಂಟಾಗಿ ರಾಜ್ಯದ ಯಾವುದೇ ವಿಧಾನ‌ಸಭಾ ಕ್ಷೇತ್ರದಲ್ಲಿ ನಯಾಪೈಸೆ ಅನುದಾನ‌ ದೊರಕದೆ ಅಭಿವೃದ್ಧಿ ಕುಂಠಿತವಾಗಿದೆ. ಹಾಲು ಉತ್ಪಾದಕರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನಕ್ಕೆ ಸರ್ಕಾರ ಕೋಕ್ ನೀಡಿದೆ. ಮೊದಲೇ ಮೇವಿನ ದರ ಏರಿಕೆ, ಬೇಸಿಗೆಯಿಂದ ತತ್ತರಿಸಿರುವ ರೈತರ ಜೀವನೋಪಾಯ ಕಷ್ಟವಾಗಿರುವ ಸಂದರ್ಭದಲ್ಲಿ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕಾದ್ದು ರಾಜ್ಯ ಸರ್ಕಾರದ ಕರ್ತವ್ಯ.

ಕನ್ನಡಪ್ರಭ ವಾರ್ತೆ ಟಿ. ನರಸೀಪುರಮುಖ್ಯಮಂತ್ರಿ‌ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಹಣದ ಕೊರತೆ ಉಂಟಾಗಿರುವುದರಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ವರುಣ ಕ್ಷೇತ್ರದ ಬಿಜೆಪಿ ಪ್ರಧಾನ‌ ಕಾರ್ಯದರ್ಶಿ ಮಂಜುನಾಥ್ ಆರೋಪಿಸಿದರು.

ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಣದ ಕೊರತೆ ಉಂಟಾಗಿ ರಾಜ್ಯದ ಯಾವುದೇ ವಿಧಾನ‌ಸಭಾ ಕ್ಷೇತ್ರದಲ್ಲಿ ನಯಾಪೈಸೆ ಅನುದಾನ‌ ದೊರಕದೆ ಅಭಿವೃದ್ಧಿ ಕುಂಠಿತವಾಗಿದೆ. ಹಾಲು ಉತ್ಪಾದಕರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನಕ್ಕೆ ಸರ್ಕಾರ ಕೋಕ್ ನೀಡಿದೆ. ಮೊದಲೇ ಮೇವಿನ ದರ ಏರಿಕೆ, ಬೇಸಿಗೆಯಿಂದ ತತ್ತರಿಸಿರುವ ರೈತರ ಜೀವನೋಪಾಯ ಕಷ್ಟವಾಗಿರುವ ಸಂದರ್ಭದಲ್ಲಿ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕಾದ್ದು ರಾಜ್ಯ ಸರ್ಕಾರದ ಕರ್ತವ್ಯ ಎಂದರು.

ಈ ಹಿಂದೆ ಯಡಿಯೂರಪ್ಪ ಹಾಗೂ ಕೇಂದ್ರದ ಮೋದಿ ಅವರ ಸರ್ಕಾರದಿಂದ ರೈತರಿಗೆ ಬರುತ್ತಿದ್ದ 10 ಸಾವಿರ ರು.ಗಳ ಪ್ರೋತ್ಸಾಹ ಧನ‌ ಮುಂದುವರೆಸಬೇಕೆಂದು ಒತ್ತಾಯಿಸಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ಕುಂಠಿತವಾಗಿವೆ. ಸರ್ಕಾರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಹಣವಿಲ್ಲದಂತಾಗಿದೆ. ಇದರಿಂದಾಗಿ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಅನೇಕ ಕೂಲಿ ಕಾರ್ಮಿಕರು ಕಾಮಗಾರಿಗಳನ್ನೇ ನಂಬಿ ಜೀವನ‌ಮಾಡುತ್ತಿದ್ದರು. ಆದರೆ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯದ ಹಿನ್ನೆಲೆಯಲ್ಲಿ ಜೀವನೋಪಾಯವೇ ಕಷ್ಟವಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರದ ನಡೆಯಿಂದ ರಾಜ್ಯದ ರೈತರು ಹಾಗೂ ಕ್ಷೇತ್ರಗಳು ತಬ್ಬಲಿಯಂತಾಗಿವೆ. ಕೆಲವೊಂದು ಶಾಲಾ ಕಟ್ಟಡದ ರಿಪೇರಿ‌ ಕೆಲಸ ಹೊರತುಪಡಿಸಿದರೆ ಬೇರೆ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದರು.

ಬೊಮ್ಮಾಯಿ‌ ನೇತೃತ್ವದ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ಸರ್ಕಾರ ಆರೋಪಿಸಿ ಬೊಮ್ಮಾಯಿ ಅವರನ್ನು ಪೇ ಸಿಎಂ ಎಂದು ಅಪಪ್ರಚಾರ ಮಾಡಿದ್ದರು. ಆದರೆ ಈಗ ಅದೇ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ರಾಜ್ಯ ಸರ್ಕಾರದ ಮೇಲೆ ಲಂಚದ ಆರೋಪ ಮಾಡಿದ್ದಾರೆ. ಇದಕ್ಕೆ ಸಿಎಂ‌ ಸಿದ್ದರಾಮಯ್ಯ ಏನು ಹೇಳುತ್ತಾರೆ? ಯಾರನ್ನು ಹೊಣೆ ಮಾಡುತ್ತಾರೆ?, ಸಚಿವ ಸಂಪುಟ ಅಥವಾ ಸ್ವತಃ ಸಿಎಂ ಅವರೇ ರಾಜೀನಾಮೆ ನೀಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು ಕೂಡಲೇ ಲಂಚ ಪ್ರಕರಣದ ತನಿಖೆ ಮಾಡಿಸಿ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ವರುಣ ಕ್ಷೇತ್ರದ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಕುಪ್ಪೇಗಾಲ ಶಿವಬಸಪ್ಪ, ಯುವ ಮೋರ್ಚಾ ಅಧ್ಯಕ್ಷ ಮೋಹನ್, ಕಾರ್ಯಕಾರಿಣಿ ಸಮಿತಿ ಸದಸ್ಯ ಹುಣಸೂರು ಮಹದೇವಸ್ವಾಮಿ ಇದ್ದರು.