ಸಾರಾಂಶ
ಪುರಸಭೆಯಲ್ಲಿ ಸಾಮಾನ್ಯ ಸಭೆ ।
ಕನ್ನಡಪ್ರಭ ವಾರ್ತೆ, ಕಡೂರುಒಮ್ಮತದಿಂದ ಚರ್ಚಿಸಿ ಜನಪ್ರತಿನಿಧಿಗಳಾದ ನಾವೆಲ್ಲರೂ ಆಡಳಿತ, ಅಭಿವೃದ್ಧಿ ಮತ್ತು ಸೇವೆ ಎಂಬ ಸಂದೇಶಗಳೊಂದಿಗೆ ಸಾರ್ವಜನಿಕರ ಪರವಾಗಿ ಅಭಿವೃದ್ಧಿ ಮಾಡಲು ಬಂದಿದ್ದೇವೆ ಎಂಬುದನ್ನು ಮರೆಯಬಾರದು ಎಂದು ಪುರಸಭಾಧ್ಯಕ್ಷ ಭಂಡಾರಿಶ್ರೀನಿವಾಸ್ ತಿಳಿಸಿದರು.
ಶುಕ್ರವಾರ ಪುರಸಭೆ ಕನಕ ಸಭಾಂಗಣದಲ್ಲಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸಭೆ ಆರಂಭದಲ್ಲಿ ಸದಸ್ಯರು ಚರ್ಚೆ ನಡೆಯುವ ಸಂದರ್ಭದಲ್ಲಿ ಪುರಸಭಾ ಸದಸ್ಯ ತೋಟದ ಮನೆ ಮೋಹನ್ ಸಾಮಾನ್ಯ ಸಭೆಯಲ್ಲಿ ಗಮನಕ್ಕೆ ತಾರದೇ ಇದ್ದರೂ ತಮಗೆ ಬೇಕಾದ ಸದಸ್ಯರ ಕೆಲಸ ಕಾರ್ಯಗಳು ಆಗುತ್ತದೆ. ಆದರೆ ನಮ್ಮ1ನೇ ವಾರ್ಡಿನಲ್ಲಿ ಗುಂಡಿ ಬಿದ್ದು ರಸ್ತೆ ಹಾಳಾಗಿ ಜನ ಜಾನುವಾರುಗಳು ಗಾಯಗೊಂಡಿರುವ ಬಗ್ಗೆ ತಿಳಿಸಿ ಡಕ್ ನಿರ್ಮಾಣ ಮಾಡುವಂತೆ ಪದೇ ಪದೇ ಇಂಜಿನಿಯರ್ ಮತ್ತು ಮುಖ್ಯಾಧಿಕಾರಿಗಳ ಗಮನಕ್ಕೆ ತಂದರು ಕೂಡ ಕ್ರಮಕ್ಕೆ ಮುಂದಾಗದಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಆಗ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಮ್ಮ ಕೆಲಸದ ಬಗ್ಗೆ ಪತ್ರ ಮುಖೇನ ನೀಡುವಂತೆ ಸಾಕಷ್ಟು ಬಾರಿ ಹೇಳಿದ್ದೇವೆ. ನೀವೂ ಕೂಡ ಪತ್ರ ನೀಡಿ ನಿಮ್ಮ ವಾರ್ಡಿನಲ್ಲಿ ಆಗಬೇಕಾಗಿರುವ ಕೆಲಸದ ಬಗ್ಗೆ ನೀಡಿದ್ದರೆ ಕೆಲಸ ಆಗುತಿತ್ತು ಎಂದು ಉತ್ತರಿಸಿದಾಗ ಅಧಿಕಾರಿಗಳು ಸದಸ್ಯರಲ್ಲಿ ಗೊಂದಲ ಉಂಟಾಗಿ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಅವರ ಕೆಲಸಗಳನ್ನು ಕೂಡ ಮಾಡುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದಾಗ ವಾತಾವರಣ ತಿಳಿಯಾಯಿತು. ಸರ್ಕಾರದ ಆದೇಶದಂತೆ ಮೂರರಿಂದ ಐದು ಪರ್ಸೆಂಟ್ ಕಂದಾಯ ಹೆಚ್ಚು ಮಾಡುವ ಬಗ್ಗೆ ನಡೆದ ಚರ್ಚೆಯಲ್ಲಿ ಅಧಿಕಾರಿಗಳು ಕಳೆದ ವರ್ಷವೇ ಈ ಕುರಿತು ಸುತ್ತೋಲೆ ಬಂದಿದೆ. ಇದರಿಂದ ಪುರಸಭೆಗೂ ಹೆಚ್ಚಿನ ಆದಾಯ ಬರಲಿದೆ. 3-5 ಪರ್ಸೆಂಟ್ ಹೆಚ್ಚು ಮಾಡಬೇಕಾದ ಅನಿವಾರ್ಯತೆ ಇದೆ ಎಂದಾಗ ಸದಸ್ಯ ಈರಳ್ಳಿ ರಮೇಶ್ ವಿರೋಧ ವ್ಯಕ್ತಪಡಿಸಿ ಬಡವರಿಗೆ ತೊಂದರೆಯಾಗುತ್ತದೆ ಅದ್ದರಿಂದ ಪರಿಷ್ಕರಿಸಿ ಕಡಿಮೆ ಮಾಡಬೇಕು ಎಂದಾಗ ಅಧ್ಯಕ್ಷರು ಮತ್ತೆ ಚರ್ಚಿಸಿ ಕ್ರಮ ಕೈಗೊಳ್ಳೋಣ ಎಂದರು.ನಲ್ಮ್ ಯೋಜನೆ ಅಡಿ ರಚನೆಗೊಂಡ ಮಹಿಳಾ ಸ್ವಸಹಾಯ ಸಂಘಗಳಿಗೆ ಕಂದಾಯ ವಸೂಲಿ ಮಾಡುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಈರಳ್ಳಿ ರಮೇಶ್ ಸಭೆಗೆ ಮನವಿ ಮಾಡಿದರು. ಈ ನಡುವೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಹೊಸ ಬಡಾವಣೆಗಳಿಗೆ ಮೂಲ ಸೌಲಭ್ಯ ಮತ್ತು ಮಾಲೀಕತ್ವದ ಇ-ಸೊತ್ತು ಪಡೆಯಲು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಆದ ಇ-ಖಾತೆ ಚಾಲನೆ ಆಂದೋಲನಕ್ಕೆ ಸದಸ್ಯರು ಕೈ ಜೋಡಿಸುವ ಮೂಲಕ 23 ವಾಡ್ ಗಳಲ್ಲೂ ಕೂಡ ಆಂದೋಲನ ನಡೆಸಲಾಗುವುದು ಎಂದು ತಿಳಿಸಿದರು.ಒಟ್ಟು 15,163 ಖಾತೆದಾರರಿದ್ದು ಇದರಲ್ಲಿ 8,948 ಈ-ಸ್ವತ್ತು ಪಡೆದಿರುತ್ತಾರೆ. ಉಳಿದವರನ್ನು ಹುಡುಕಿ ಮಾಡಿಸುವುದೇ ಇ-ಖಾತಾ ಅಭಿಯಾನವಾಗಿದೆ ಎಂದಾಗ ಇದಕ್ಕೆ ಸದಸ್ಯರು ಒಪ್ಪಿಗೆ ನೀಡಿದರು. ಮನೆಯ ಕಂದಾಯ, ಉದ್ದಿಮೆ ಪರವಾನಗಿ, ನೀರಿನ ಕಂದಾಯ ಏರಿಕೆ ಮಾಡಲು ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ಕಾರಂಜಿ ನಿರ್ಮಿಸಲು, ವೇದಾ ಪಾರ್ಕನಲ್ಲಿ ರಾಷ್ಟ್ರಧ್ವಜ ನಿರ್ಮಾಣ ಮಾಡಲು, ರಾಜೀವ್ ಗಾಂಧಿ ಬಡಾವಣೆಯಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ, ಕೊಳಚೆ ಪ್ರದೇಶದ ಸರ್ಕಾರಿ ಶಾಲೆ ದತ್ತು ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಮಂಜುಳಾಚಂದ್ರು, ಮುಖ್ಯಾಧಿಕಾರಿ ಮಂಜುನಾಥ್, ಈರಳ್ಳಿ ರಮೇಶ್, ತೋಟದಮನೆ ಮೋಹನ್, ಶ್ರೀಕಾಂತ್,ಯಾಸೀನ್, ಇಕ್ಬಾಲ್,ಸೋಮಣ್ಣ, ಮರುಗುದ್ದಿ ಮನು, ಗೋವಿಂದರಾಜ್, ಯತೀಶ್, ಸುಧಾ, ಪದ್ಮಾ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.
28ಕೆಕೆಡಿಯು2. ಕಡೂರು ಪುರಸಭೆಯ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.ಉಪಾಧ್ಯಕ್ಷೆ ಮಂಜುಳಾಚಂದ್ರು ಇದ್ದರು.