ಚಳ್ಳಕೆರೆ ತಾಲೂಕಿನ ಸಾಣೀಕೆರೆಯ ವೇದ ಸಮೂಹ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಸಮಾರಂಭವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಗುಣಾತ್ಮಕ ಶಿಕ್ಷಣ ಪಡೆದರೆ ಮಾತ್ರ ಅಭಿವೃದ್ಧಿ ಪಥದತ್ತ ನಡೆಯಬಹುದಾಗಿದೆ. ಎಲ್ಲರ ಅಭಿವೃದ್ಧಿಗೆ ಶಿಕ್ಷಣವೇ ಮಾನದಂಡ, ಶಿಕ್ಷಣ ರಹಿತ ಸಮಾಜವನ್ನು ಊಹೆ ಮಾಡುವುದು ಕಷ್ಟ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಸಾಣಿಕೆರೆಯ ವೇದಸಮೂಹ ಶಿಕ್ಷಣ ಸಂಸ್ಥೆಯೂ ಸಹ ಒಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಗುರುವಾರ ಸಾಣೀಕೆರೆಯ ವೇದಸಮೂಹ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಹಲವಾರು ವರ್ಷಗಳಿಂದ ವೇದ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯಚಟುವಟಿಕೆಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ಈ ಭಾಗದ ಗ್ರಾಮೀಣ ಯುವಕರಿಗೆ ಈ ಶಿಕ್ಷಣ ಸಂಸ್ಥೆ ಕಾಮಧೇನುವಾಗಿದೆ. ಕಾರಣ ಯಾವುದೇ ರೀತಿಯ ತೊಂದರೆ ಇಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವಂತಹ ಶಿಕ್ಷಣವನ್ನು ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪಡೆಯಬಹುದು. ಪ್ರಧಾನಿ ನರೇಂದ್ರ ಮೋದಿಯವರು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣದ ಮೂಲಕವೇ ಉಜ್ವಲ ಭವಿಷ್ಯ ಪಡೆಯುವ ಅವಕಾಶವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಮಾಡಿದ್ದಾರೆ ಎಂದು ಹೇಳಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಇಂದು ನಮ್ಮೆಲ್ಲರಿಗೂ ಬದುಕನ್ನು ರೂಪಿಸಿಕೊಳ್ಳಲು ಶಿಕ್ಷಣ ಮಾತ್ರವೇ ಆದ್ಯತೆಯಾಗಿದೆ. ಶಿಕ್ಷಣ ಕಲಿತವ ಜಗತ್ತನ್ನೇ ಆಳಬಹುದು ಎಂಬ ಪ್ರತೀತಿ ನಮ್ಮಲ್ಲಿದೆ. 20 ವರ್ಷಗಳ ಹಿಂದೆ ಹಳ್ಳಿಯಲ್ಲಿ ಒಬ್ಬರೋ, ಇಬ್ಬರೋ ಉನ್ನತ್ತ ಶಿಕ್ಷಣ ಕಲಿತವರು ಸಿಗುತ್ತಿದ್ದರು. ಆದರೆ ಇಂದು ಪ್ರತಿ ಗ್ರಾಮದಲ್ಲೂ ಉನ್ನತ ಶಿಕ್ಷಣ ಪಡೆದ ಪ್ರತಿಭಾವಂತರು ಸಿಗುತ್ತಿದ್ದಾರೆ. ಅವರೆಲ್ಲರೂ ಸಹ ಇಂತಹ ಶಿಕ್ಷಣ ಸಂಸ್ಥೆಗಳ ಮೂಲಕ ಶಿಕ್ಷಣ ಪಡೆದು ಹೊರಹೊಮ್ಮಿದ್ದಾರೆ.

ಕೆಲವು ವಿದ್ಯಾರ್ಥಿಗಳು ಉನ್ನತ ಹುದ್ದೆಗಳಾದ ಎಂಜಿನಿಯರಿಂಗ್, ಡಾಕ್ಟರ್ ಪದವಿ ಪಡೆದು ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ. ಯಾವುದೇ ವಿದ್ಯಾರ್ಥಿ ತನ್ನ ಜೀವನದ ಗುರಿಸಾಧಿಸಲು ಶಿಕ್ಷಣ ಮತ್ತು ಗುರುವನ್ನು ನಂಬಲೇಬೇಕು. ಅನೇಕ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಯಶಸ್ಸಿನ ಮೆಟ್ಟಿಲಾಗಿವೆ. ವೇದ ಸಮೂಹ ಶಿಕ್ಷಣ ಸಂಸ್ಥೆಯೂ ಸಹ ಈ ನಿಟ್ಟಿನಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.

ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಡಿ.ಆರ್.ಕಿರಣ್, ವೇದ ಸಮೂಹ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮ ಸ್ವಾಮಿಗಳು ಹಾಗೂ ರಾಜಕೀಯ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಸ್ವಾಮೀಜಿಯವರ ಕಾಯಕ ಯಡಿಯೂರಪ್ಪನಂತಹ ನಾಯಕರ ಮಾರ್ಗದರ್ಶನ ಫಲವಾಗಿ ಇಂದು ನಾವು ದಶಮಾನೋತ್ಸವ ಆಚರಿಸುತ್ತಿದ್ದೇವೆ. ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಎಲ್ಲಾ ರೀತಿಯ ಸಹಕಾರ ನೀಡಿದ ಗ್ರಾಮಸ್ಥರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಆಡಳಿತ ಮಂಡಳಿಯ ಸದಸ್ಯರು, ಪೋಷಕರು, ಬೋಧನಾ ಸಿಬ್ಬಂದಿ ಮತ್ತು ಶಿಕ್ಷಣವನ್ನು ವಿನಯದಿಂದ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ವೇದ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಟಿ.ರವೀಂದ್ರ ಮಾತನಾಡಿ, ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲ್, ಪಿಯು ಮತ್ತು ಪ್ರಸ್ತುತ ಪದವಿ ಕಾಲೇಜಿನತ್ತ ಹೆಜ್ಜೆ ಇಟ್ಟಿದೆ. ಗ್ರಾಮೀಣ ಭಾಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಸವಾಲಿನ ಕೆಲಸವೇ ಸರಿ. ಪ್ರಾರಂಭದಲ್ಲಿ ನನಗೂ ಈ ವಿಚಾರದಲ್ಲಿ ಗೊಂದಲಗಳಿದ್ದವು. ಆದರೆ, ಪ್ರತಿ ವರ್ಷವೂ ಎಲ್ಲರೂ ತೋರಿಸಿದ ಅಭಿಮಾನ, ವಿಶ್ವಾಸದಿಂದ ವೇದ ಸಮೂಹ ಶಿಕ್ಷಣ ಸಂಸ್ಥೆ ಇಂದು ದಶಮಾನೋತ್ಸವ ಆಚರಣೆಯಲ್ಲಿದೆ. ಇದರ ಎಲ್ಲಾ ರೀತಿಯ ಅಭಿವೃದ್ಧಿ, ಪ್ರಗತಿಗೆ ಕೈಜೋಡಿಸಿದ ಎಲ್ಲರಿಗೂ ಅಭಿನಂದಿಸುವುದಾಗಿ ತಿಳಿಸಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಬೆಂಗಳೂರಿನ ಬೇಲಿಮಠ ಮಹಾ ಸಂಸ್ಥಾನದ ಶಿವರುದ್ರ ಸ್ವಾಮೀಜಿ ಮಾತನಾಡಿ, ಇಂದಿನ ಕಾಲದಲ್ಲಿ ಶಿಕ್ಷಣವನ್ನು ಪಡೆಯಬೇಕಾದರೆ ಆರ್ಥಿಕ ಶಕ್ತಿ ಇದ್ದವರಿಂದ ಮಾತ್ರ ಸಾಧ್ಯವಾಗುತ್ತದೆ. ಆದರೆ ವೇದ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬಡ ವಿದ್ಯಾರ್ಥಿಗಳೇ ತುಂಬಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೇರಕವಾಗುವ ವಾತಾವರಣವನ್ನು ನಿರ್ಮಾಣಮಾಡಿರುವುದು ಹೆಮ್ಮೆಯ ವಿಷಯವೆಂದರು.

ತುಮಕೂರು ಸಿದ್ದರ ಬೆಟ್ಟ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೇವಲ ಧಾರ್ಮಿಕ ವಿಚಾರಗಳನ್ನು ಮಾತ್ರ ಬೋಧನೆ ಮಾಡುವ ಸ್ವಾಮೀಜಿಯವರು ರಾಜ್ಯದಲ್ಲಿ ಅನೇಕ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ಜ್ಞಾನವನ್ನು ನೀಡಿದ್ದಾರೆ. ವೇದ ಸಂಸ್ಥೆಯೂ ಸಹ ಅದೇ ಹಾದಿಯಲ್ಲಿ ನಡೆಯಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಎಚ್‌ಒಡಿ ಗೀತಾ, ಗುರುರಾಜ್, ಡಾ.ವೀರಣ್ಣ, ವಾಣಿಜ್ಯೋದ್ಯಮಿ ಪ್ರಕಾಶ್, ಸತೀಶ್‌ ಬಾಬು, ಆನಂದ ಕುಲಕರ್ಣಿ, ಬಿ.ಪ್ರಸನ್ನಕುಮಾರ್, ಎಂ.ಆನಂದಪ್ಪ, ಜಿ.ಟಿ.ಶಶಿಧರ, ಗ್ರಾಪಂ ಅಧ್ಯಕ್ಷ ನಾಗರಾಜು, ಪಿಡಿಒ ವಿಜಯ್, ಪತ್ರಕರ್ತ ಕರ‍್ಲಕುಂಟೆ ತಿಪ್ಪೇಸ್ವಾಮಿ ಭಾಗವಹಿಸಿದ್ದರು.