ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 720 ಕೆರೆಗಳ ಅಭಿವೃದ್ಧಿ: ಬಾಬು ನಾಯ್ಕ

| Published : May 02 2024, 12:22 AM IST

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 720 ಕೆರೆಗಳ ಅಭಿವೃದ್ಧಿ: ಬಾಬು ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ದೂರದೃಷ್ಟಿ ಮತ್ತು ಸಾಮಾಜಿಕ ಕಾಳಜಿಯ ಪ್ರತೀಕವಾಗಿ ಗ್ರಾಮೀಣ ಪ್ರದೇಶದ ಆರ್ಥಿಕ ಶಕ್ತಿ ಮತ್ತು ಸಂಘಟನೆಯನ್ನು ಬೆಳೆಸುವಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.

ಶಿರಸಿ: ಪ್ರಸ್ತುತ ಸ್ಥಿತಿಗೆ ನೀರಿನ ರಕ್ಷಣೆ ಅತ್ಯಂತ ಅಗತ್ಯವಾಗಿದ್ದು, ಅದಕ್ಕಾಗಿ ಹರಿದು ಹೋಗುವ ನೀರನ್ನು ಇಂಗಿಸುವ ಕೆರೆ, ಕಟ್ಟೆಗಳಲ್ಲಿ ಸಂಗ್ರಹಿಸಿ, ಜೀವಜಲದ ರಕ್ಷಣೆಗಾಗಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಪ್ರಯತ್ನ ನಡೆಸುತ್ತದೆ ಎಂದು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ತಿಳಿಸಿದರು.

ಬುಧವಾರ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯಿತಿ ಕೆರೆಕೊಪ್ಪದಲ್ಲಿ ಶಿವಪೂಜೆ ಕೆರೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ದೂರದೃಷ್ಟಿ ಮತ್ತು ಸಾಮಾಜಿಕ ಕಾಳಜಿಯ ಪ್ರತೀಕವಾಗಿ ಗ್ರಾಮೀಣ ಪ್ರದೇಶದ ಆರ್ಥಿಕ ಶಕ್ತಿ ಮತ್ತು ಸಂಘಟನೆಯನ್ನು ಬೆಳೆಸುವಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. 2016ರಿಂದ ಕೆರೆಗಳ ಹೂಳೆತ್ತುವ ನಮ್ಮೂರ ನಮ್ಮ ಕೆರೆ ಯೋಜನೆಯಡಿ ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಹೊಳೆತ್ತುವ ಕಾರ್ಯವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಇದುವರೆಗೆ 720 ಕೆರೆಗಳ ಹೂಳು ತೆಗೆದು ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗಿದೆ.

ಈ ಕಾರ್ಯವನ್ನು ಮುಂದಿನ ದಿನದಲ್ಲಿಯೂ ಮುಂದುವರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಕೆರೆಗಳನ್ನುಮಾದರಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ವರ್ಷ ಮಾಳಂಜಿ, ಬ್ಯಾಗದ್ದೆ ಮತ್ತು ಕೆರೆಕೊಪ್ಪ ಕೆರೆಗಳನ್ನು ಹೂಳೆತ್ತಲು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದರು.

ಕೆರೆ ಸಮಿತಿ ಅಧ್ಯಕ್ಷ ಆರ್.ಜಿ. ನಾಯ್ಕ ಮಾತನಾಡಿ, ನಮ್ಮೂರಿನ ಕೆರೆ ಅಭಿವೃದ್ಧಿಗೆ ಗ್ರಾಮಸ್ಥರೇ ಪ್ರಯತ್ನಿಸುತ್ತಿದ್ದು, ಸಾಧ್ಯವಾಗಿದ್ದಿಲ್ಲ. ಇಂದು ಧರ್ಮಸ್ಥಳದ ನೆರೆವಿನೊಂದಿಗೆ ಸಾಧ್ಯವಾಗುತ್ತಿರುವುದು ಖುಷಿಯ ಸಂಗತಿಯಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವುದಾಗಿ ತಿಳಿಸಿದರು.

ತಾಲೂಕು ಯೋಜನಾಧಿಕಾರಿ ರಾಘವೇಂದ್ರ ನಾಯ್ಕ, ಊರಿನ ಪ್ರಮುಖರಾದ ಇಸ್ಮಾಯಿಲ್ ಸಾಬ್, ನವೀನ್, ಗಣಪತಿ ಹೆಗಡೆ, ಸುರೇಶ ಹೆಗಡೆ, ಅಬ್ದುಲ್ ರಜಾಕ್ , ಕೃಷಿ ಮೇಲ್ವಿಚಾರಕರಾದ ರಾಮು, ವಲಯ ಮೇಲ್ವಿಚಾರಕ ನಾಗರಾಜ, ಸೇವಾ ಪ್ರತಿನಿಧಿ ಭಾರತಿ ಉಪಸ್ಥಿತರಿದ್ದರು.