ಯಾವುದೇ ಕ್ಷೇತ್ರ ಅಭಿವೃದ್ಧಿಗೆ ಸಮಯಾವಕಾಶ ಅಗತ್ಯ

| Published : Dec 22 2024, 01:31 AM IST

ಸಾರಾಂಶ

ಮಗು ಜನಿಸಲು 9 ತಿಂಗಳು ಕಾಯಬೇಕು, ಅಂತಹುದರಲ್ಲಿ ಕ್ಷೇತ್ರವೊಂದರ ಸಮಗ್ರ ಅಭಿವೃದ್ಧಿಗೆ ಸೂಕ್ತವಾದ ಯೋಜನೆಯನ್ನು ರೂಪಿಸಿ ತನ್ಮೂಲಕ ಅಭಿವೃದ್ಧಿ ಕೈಗೊಳ್ಳಲು ಸಮಯಾವಕಾಶ ಬೇಕಾಗುತ್ತದೆ. ಚಿಂತಾಮಣಿ ನಗರದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಐಟಿಐ ಕಾಲೇಜು ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ್ದು ಸದರಿ ಸಂಸ್ಥೆಗಳ ಕಾಮಗಾರಿ ಆರಂಭಗೊಂಡಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ರೂಪುರೇಷೆ ನೀಲನಕ್ಷೆಗಳನ್ನು ತಯಾರಿಸಿದ್ದು, ಸರ್ಕಾರದಿಂದ ಅನುದಾನ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದೆಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ತಾಲೂಕಿನ ಕಸಬಾ ಕಲ್ಲಹಳ್ಳಿಯ ಎಂಪಿಸಿಎಸ್‌ನ ಮೊದಲ ಅಂತಸ್ತಿನ ಕಟ್ಟಡದ ಪ್ರಾರಂಭೋತ್ಸವದಲ್ಲಿ ಮಾತನಾಡಿ, ಅಭಿವೃದ್ಧಿಯಾಗಿಲ್ಲವೆಂದು ವಿರೋಧಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಕೋಟಿ ಕೋಟಿ ಹಣ ಮಂಜೂರಾಗಿರುವುದು ಕೇವಲ ದಾಖಲೆಗಳಿಗೆ ಸಿಮೀತವೆಂಬ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಮಗು ಜನಿಸಲು 9 ತಿಂಗಳು ಕಾಯಬೇಕು, ಅಂತಹುದರಲ್ಲಿ ಕ್ಷೇತ್ರವೊಂದರ ಸಮಗ್ರ ಅಭಿವೃದ್ಧಿಗೆ ಸೂಕ್ತವಾದ ಯೋಜನೆಯನ್ನು ರೂಪಿಸಿ ತನ್ಮೂಲಕ ಅಭಿವೃದ್ಧಿ ಕೈಗೊಳ್ಳಲು ಸಮಯಾವಕಾಶ ಬೇಕಾಗುತ್ತದೆ ಎಂದು ನುಡಿದರು.

ವಸ್ತು ಸ್ಥಿತಿ ಅರ್ಥಮಾಡಿಕೊಳ್ಳಿ

ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ವಿರೋಧಪಕ್ಷದವರು ಇಲ್ಲಸಲ್ಲದ, ಕಪೋಲಕಲ್ಪಿತ ವಿಚಾರಗಳನ್ನು ಮುನ್ನಲೆಗೆ ತಂದು ರಾಜ್ಯ ಸರ್ಕಾರದ ಪ್ರತಿಷ್ಠೆಗೆ ಮಸಿಬಳಿಯುವ ಕಾಯಕಕ್ಕೆ ಮುಂದಾಗಿರುವುದು ಸರಿಯಲ್ಲ. ಇದಕ್ಕೆ ಯಾರು ತಲೆಗೆಡಿಸಿಕೊಳ್ಳಬಾರದು ವಾಸ್ತವಾಂಶ ಮತ್ತು ವಸ್ತುಸ್ಥಿತಿಯನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಚಿಂತಾಮಣಿ ನಗರದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಐಟಿಐ ಕಾಲೇಜು ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ್ದು ಸದರಿ ಸಂಸ್ಥೆಗಳ ಕಾಮಗಾರಿ ಆರಂಭಗೊಂಡಿದೆ ಎಂದರು.

ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಕೆರೆಗಳಿಗೆ ನೀರು ತುಂಬಿಸಿದ ಹಿನ್ನಲೆಯಲ್ಲಿ ಅಂತರ್ಜಲಮಟ್ಟ ಪರಿಣಾಮಕಾರಿಯಾಗಿ ಏರಿಕೆಯಾಗಿದ್ದು ಅಲ್ಲಿನ ಕೃಷಿಕರು ಹೈನುಗಾರಿಕೆಯಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡ ಹಿನ್ನಲೆಯಲ್ಲಿ ರಾಜ್ಯದಲ್ಲೇ ಪ್ರತಿನಿತ್ಯ ೨.೮ಲಕ್ಷ ಲೀಟರ್‌ಗೂ ಅಧಿಕ ಹಾಲು ಉತ್ಪತ್ತಿ ಮಾಡುವ ಮೂಲಕ ಅತಿ ಹೆಚ್ಚು ಹಾಲು ಉತ್ಪತ್ತಿ ಮಾಡುವ ತಾಲ್ಲೂಕು ಎನಿಸಿಕೊಂಡಿರುವುದು ಅಭಿನಂದನೀಯ ವಿಚಾರ ಎಂದರು.

ರಾಸುಗಳಿಗೆ ಲಸಿಕೆ ಹಾಕಿಸಿ

ಹೈನುಗಾರರು ತಮ್ಮ ಬದುಕಿಗೆ ಆಧಾರವಾಗಿರುವ ರಾಸುಗಳಿಗೆ ತಪ್ಪದೆ ಲಸಿಕೆ ಹಾಕಿಸುವುದು ಹಾಗೂ ವಿಮೆಯನ್ನು ಕಡ್ಡಾಯವಾಗಿ ಮಾಡಿಸುವ ಮೂಲಕ ಆರ್ಥಿಕ ನಷ್ಟದಿಂದ ಪಾರಗಬೇಕೆಂದ ಅವರು ನೀವು ಸರಬರಾಜು ಮಾಡುವ ಗುಣಮಟ್ಟದ ಹಾಲಿನಿಂದ ನಿಮ್ಮ ಅಭಿವೃದ್ಧಿಯ ಜೊತೆಗೆ ಸಂಘದ ಹಾಗೂ ಒಕ್ಕೂಟದ ಅಭಿವೃದ್ಧಿ ಅಡಗಿದೆಯೆಂಬುದನ್ನು ಮನಗಾಣಬೇಕೆಂದರು.

ಶಾಶ್ವತ ನೀರಾವರಿಗೆ ಒತ್ತು

ಅವಿಭಜಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಕೆಸಿ ಮತ್ತು ಹೆಚ್‌ಎನ್ ವ್ಯಾಲಿಗಳ ಸಂಸ್ಕರಿಸಿದ ನೀರನ್ನು ಈ ಭಾಗದ ಕೆರೆಗಳಿಗೆ ನೀರನ್ನು ಮರುಪೂರಣ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರವು ಮುಂಚೂಣಿಯಲ್ಲಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣಬಾಬು, ಕಲ್ಲಹಳ್ಳಿ ಎಂಪಿಸಿಎಸ್‌ನ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಕೆ.ಎನ್.ಮಂಜುನಾಥ್, ಸಂಘದ ನಿರ್ದೇಶಕರುಗಳಾದ ಕೆ.ಎನ್.ಕೃಷ್ಣಾರೆಡ್ಡಿ, ಕೆ.ವಿ.ಶ್ರೀನಿವಾಸರೆಡ್ಡಿ, ಆರ್.ಬೈರೆಡ್ಡಿ, ಜಿ.ರೆಡ್ಡಿ, ಕೆ.ಎಸ್.ನಾರಾಯಣಸ್ವಾಮಿ, ಮುನಿಯಪ್ಪ, ರತ್ನಮ್ಮ, ಪಾಪಮ್ಮ, ಸಿಇಒ ದೇವರಾಜ್, ಪದ್ಮಮ್ಮ ಅಧಿಕಾರಿಗಳಾದ ಡಾ.ಎಂ.ಸಿ.ಶ್ರೀನಿವಾಸಗೌಡ, ಡಾ.ಜಿ.ಮಾಧವ, ಡಾ.ಡಿ.ಎಂ. ಮಹೇಶ್, ಜಿ.ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.