ಹರಪನಹಳ್ಳಿ ತಾಲೂಕಿನ ಅಭಿವೃದ್ಧಿ ಬದ್ಧ: ಗಾಯತ್ರಿ ಸಿದ್ದೇಶ್ವರ

| Published : Apr 17 2024, 01:15 AM IST

ಹರಪನಹಳ್ಳಿ ತಾಲೂಕಿನ ಅಭಿವೃದ್ಧಿ ಬದ್ಧ: ಗಾಯತ್ರಿ ಸಿದ್ದೇಶ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಎಲ್ಲ ಸೌಲಭ್ಯಗಳೂ ಹರಪನಹಳ್ಳಿ ತಾಲೂಕಿಗೆ ಸಿಗಬೇಕಿದ್ದು, ಈ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವುದಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹರಪನಹಳ್ಳಿಯಲ್ಲಿ ಹೇಳಿದ್ದಾರೆ.

- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸೌಲಭ್ಯ ಕಲ್ಪಿಸಲು ಪಣ: ಅಭ್ಯರ್ಥಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಎಲ್ಲ ಸೌಲಭ್ಯಗಳೂ ಹರಪನಹಳ್ಳಿ ತಾಲೂಕಿಗೆ ಸಿಗಬೇಕಿದ್ದು, ಈ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವುದಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.

ಹರಪನಹಳ್ಳಿ ತಾ. ಕುಂಚೂರು, ಹಲವಾಗಲು, ನಿಟ್ಟೂರು ಗ್ರಾಮಗಳಲ್ಲಿ ಮಂಗಳವಾರ ಮತಯಾಚಿಸಿ ಮಾತನಾಡಿದ ಅವರು, ಹರಪನಹಳ್ಳಿ ತಾಲೂಕಿನ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಬೇಕು. ಭೌತಿಕವಾಗಿ ಈ ತಾಲೂಕಿನ ಚಿತ್ರಣವೂ ಬದಲಾಗಬೇಕು. ಅದಕ್ಕಾಗಿ ಶಕ್ತಿ ಮೀರಿ ಶ್ರಮಿಸುವೆ ಎಂದರು.

ಕಲ್ಯಾಣ ಕರ್ನಾಟಕದ ಸಂಪೂರ್ಣ ಸೌಲಭ್ಯಗಳನ್ನು ಈ ತಾಲೂಕಿಗೆ ದೊರಕಿಸಿ ಕೊಡುವುದಕ್ಕೆ ನಾನು ಬದ್ಧಳಿದ್ದೇನೆ. ಉದ್ಯೋಗ ಮೀಸಲಾತಿ ಪಡೆಯಲು ಹರಪನಹಳ್ಳಿ ತಾಲೂಕು 371ಜೆ ಕಲಂನಡಿ ದಾವಣಗೆರೆಯಿಂದ ಬೇರ್ಪಟ್ಟು ಬಳ್ಳಾರಿ ಜಿಲ್ಲೆಗೆ, ನಂತರ ನೂತನ ವಿಜಯ ನಗರ ಜಿಲ್ಲೆಗೆ ಸೇರಿದೆ. ಉದ್ಯೋಗಕ್ಕಷ್ಟೇ ಸೀಮಿತವಾಗದೇ, ಹರಪನಹಳ್ಳಿ ತಾಲೂಕಿನ ಸಮಗ್ರ, ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದು ತಿಳಿಸಿದರು.

ರೈತರು, ಕೃಷಿ ಕಾರ್ಮಿಕರು, ಮಹಿಳೆಯರು, ಯುವಜನರು ಆರ್ಥಿಕವಾಗಿ ಸಬಲರಾಗಬೇಕು. ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ತರಲು ಶ್ರಮಿಸುತ್ತೇನೆ. ಈ ತಾಲೂಕಿನ ಅನೇಕ ತಾಂಡಾಗಳು ಕಂದಾಯ ಗ್ರಾಮಗಳಾಗಿ ಬದಲಾಗಿವೆ. ತಾಂಡಾಗಳನ್ನು ಗ್ರಾಮಗಳನ್ನಾಗಿ ಮಾಡಿದ ಕೀರ್ತಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಆರ್.ಅಶೋಕ್‌ಗೆ ಸಲ್ಲುತ್ತದೆ. ಈ ಭಾಗದಲ್ಲಿ ತರಕಾರಿ, ಚೆಂಡು ಹೂವುಗಳನ್ನು ಬೆಳೆಯುತ್ತಾರೆ. ಅದಕ್ಕೆ ಸೂಕ್ತ ಮಾರುಕಟ್ಟೆ ಒದಗಿಸುವ ಚಿಂತನೆ ನಡೆದಿದೆ ಎಂದು ಹೇಳಿದರು.

ತರಕಾರಿ ಬೆಳೆಯುವ ರೈತರಿಗೆ ಅನುಕೂಲ ಕಲ್ಪಿಸಲು ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಿಸಲು ಸಂಕಲ್ಪ ಮಾಡಿದ್ದೇವೆ. ಸಂಸದ ಜಿ.ಎಂ.ಸಿದ್ದೇಶ್ವರ ಈಗಾಗಲೇ ದಾವಣಗೆರೆ, ಚನ್ನಗಿರಿ ತಾಲೂಕಿನಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಿಸುತ್ತಿದ್ದಾರೆ. ನರೇಂದ್ರ ಮೋದಿ ಜಾರಿಗೆ ತಂದ ಅನೇಕ ಯೋಜನೆಗಳು ಜನರನ್ನು ಆರ್ಥಿಕವಾಗಿ ಬಲಪಡಿಸಿವೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹರಪನಹಳ್ಳಿ ತಾಲೂಕಿನ ಸಣ್ಣ ರೈತರಿಗೆ ಈ ವರ್ಷ ಮಧ್ಯಂತರ ಪರಿಹಾರವಾಗಿ 13 ಕೋಟಿ ರು. ವಿಮೆ ಹಣ ಬಂದಿದೆ. ಶೀಘ್ರವೇ ಇನ್ನೂ ₹20 ಕೋಟಿ ಹಣ ಬರಲಿದೆ ಎಂದು ವಿವರಿಸಿದರು.

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಬೇಕೆಂದು ಜನರೇ ಸ್ವಯಂ ಸಂಕಲ್ಪ ಮಾಡಿದ್ದಾರೆ. ಮೋದಿ 10 ವರ್ಷದ ಆಡಳಿತ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಈ ಸಲವೂ ಮೋದಿ ಪ್ರಧಾನಿ ಆಗಲೇಬೇಕೆಂಬುದು ಜನರ ಅಭಿಲಾಷೆಯಾಗಿದೆ. ನೀವು ನನಗೆ ಇಲ್ಲಿ ನೀಡುವ ಒಂದೊಂದು ಮತವೂ ನರೇಂದ್ರ ಮೋದಿಗೆ ಮತ ಹಾಕಿದಂತೆ. ನೀವು ಇಲ್ಲಿ ನನ್ನನ್ನು ಗೆಲ್ಲಿಸಿದರೆ, ಅಲ್ಲಿ ಮೋದಿ ಕೈಗಳು ಮತ್ತಷ್ಟು ಬಲಿಷ್ಠವಾಗುತ್ತದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಹೋದಿ ಕೇಂದ್ರ ಸರ್ಕಾರ, ಸಂಸದ ಸಿದ್ದೇಶ್ವರ ಸಾಧನೆ ತಿಳಿಸುವ ಮೂಲಕ ನನಗೆ ಮತ ಹಾಕಿಸುವಂತೆ ಗಾಯತ್ರಿ ಸಿದ್ದೇಶ್ವರ ಮನವಿ ಮಾಡಿದರು.

ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಮಾತನಾಡಿ, ನರೇಂದ್ರ ಮೋದಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ವಿಶ್ವಕ್ಕೆ ಮಾದರಿಯಾಗಿವೆ. ಕೋವಿಡ್ ವೇಳೆ 140 ಕೋಟಿ ಜನರಿಗೆ 2 ಸಲ ಲಸಿಕೆ, ಬೂಸ್ಟರ್ ಡೋಸ್ ಕೊಡಿಸಿ, ಕೋಟ್ಯಂತರ ಜೀವ ಉಳಿಸಿದ್ದಾರೆ. ಜನಧನ, ಸ್ವಚ್ಛ ಭಾರತ್, ಆಯುಷ್ಮಾನ್ ಭಾರತ್, ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್‌ ಇಂಡಿಯಾ, ಕೃಷಿ ಸಮ್ಮಾನ್, ಫಸಲ್ ಬಿಮಾ ಹೀಗೆ ಹತ್ತಾರು ಯೋಜನೆ ಜಾರಿಗೆ ತಂದ ನರೇಂದ್ರ ಮೋದಿ ದೇಶದ ಜನತೆಯ ನೆಚ್ಚಿನ, ಮೆಚ್ಚಿನ ಪ್ರಧಾನಿಯಾಗಿದ್ದಾರೆ ಎಂದರು.

ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವ ಕ್ಷಣ ಕಣ್ತುಂಬಿಕೊಳ್ಳಲು ವಿಶ್ವವೇ ಕಾದು ಕುಳಿತಿದೆ. ಇಂತಹ ಸನ್ನಿವೇಶನಕ್ಕೆ ನೀವು, ನಾವು ಕಾರಣೀಭೂತರಾಗಬೇಕು. ಅದಾಗಬೇಕೆಂದರೆ ದಾವಣಗೆರೆ ಕ್ಷೇತ್ರದಿಂದ ನಮ್ಮೆಲ್ಲರ ನೆಚ್ಚಿನ ಗಾಯತ್ರಿ ಸಿದ್ದೇಶ್ವರ ಅಕ್ಕನವರಿಗೆ ಭಾರೀ ಮತಗಳ ಅಂತರದಿಂದ ಗೆಲ್ಲಿಸಿ, ಸಂಸದೆಯಾಗಿ ಆಯ್ಕೆ ಮಾಡಬೇಕು. ಸ್ವತಃ ನರೇಂದ್ರ ಮೋದಿ ಹೇಳಿದಂತೆ 10 ವರ್ಷದಲ್ಲಿ ನೀವು ನೋಡಿರುವುದು ಬರೀ ಟ್ರೈಲರ್. ಇನ್ನೂ ಪಿಕ್ಚರ್ ಬಾಕಿ ಇದೆ. 10 ವರ್ಷದ ಟ್ರೈಲರ್‌ನಲ್ಲೇ ಇಷ್ಟು ಅಭಿವೃದ್ಧಿ ಕಂಡ ದೇಶ ಇನ್ನೂ 20 ವರ್ಷ ಮೋದಿ ಕೈಯಲ್ಲಿ ಅಧಿಕಾರ ಇದ್ದರೆ ಅದೆಷ್ಟು ಅಭಿವೃದ್ಧಿ ಹೊಂದಬಹುದೆಂಬುದನ್ನು ಯಾರಾದರೂ ಊಹಿಸಬಹುದು. ದಾವಣಗೆರೆಯಿಂದ ಗಾಯತ್ರಕ್ಕನಿಗೆ ಗೆಲ್ಲಿಸಿ, ಮತ್ತೆ ನರೇಂದ್ರ ಮೋದಿಯವರಿಗೆ 3ನೇ ಬಾರಿಗೆ ಪ್ರಧಾನಿಯಾಗಿಸಲು ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ಬಿಜೆಪಿ ಮುಖಂಡರಾದ ಲೋಕೇಶ, ಶೇಖರಪ್ಪ, ಕಲ್ಲಣ್ಣ ಗೌಡ, ಮಂಜುನಾಥ, ವೀರಭದ್ರಪ್ಪ, ಮಹಾಂತೇಶ, ಬಸವರಾಜ, ಹೇಮಣ್ಣ, ಅಂಜಿನಪ್ಪ, ನಾಗರಾಜ, ವೀರಣ್ಣ, ಮಂಡಲದ ಅಧ್ಯಕ್ಷ, ಸದಸ್ಯರು, ಗ್ರಾಪಂ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು, ಹರಪನಹಳ್ಳಿ ಕ್ಷೇತ್ರದ ಮುಖಂಡರು, ಗ್ರಾಮಸ್ಥರು ಇದ್ದರು.

- - - ಕೋಟ್‌ ಹರಪನಹಳ್ಳಿ ತಾಲೂಕಿನಿಂದ ಗಾಯತ್ರಿ ಸಿದ್ದೇಶ್ವರರಿಗೆ 30ರಿಂದ 50 ಸಾವಿರ ಲೀಡ್ ಕೊಡುತ್ತೇವೆ. ನಾನು, ನಮ್ಮೆಲ್ಲಾ ಕಾರ್ಯಕರ್ತರು, ಮುಖಂಡರು ಶ್ರಮಿಸುತ್ತಿದ್ದೇವೆ. ಪ್ರತಿ ಹಳ್ಳಿಯಲ್ಲೂ ನಮ್ಮ ಕಾರ್ಯಕರ್ತರು ಕೇಂದ್ರದ ಮತ್ತು ಸಂಸದ ಸಿದ್ದೇಶಣ್ಣನವರ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಮತ ಕೇಳುತ್ತಿದ್ದಾರೆ. ದಾವಣಗೆರೆ ಕ್ಷೇತ್ರದಲ್ಲಿ ಗಾಯತ್ರಿ ಅಕ್ಕನವರು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಪಕ್ಕಾ

- ಜಿ.ಕರುಣಾಕರ ರೆಡ್ಡಿ, ಮಾಜಿ ಸಚಿವ

- - - -16ಕೆಡಿವಿಜಿ11:

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಮಾಜಿ ಸಚಿವ ಕರುಣಾಕರ ರೆಡ್ಡಿ ಮತಯಾಚಿಸಿದರು.