ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಸ್ವಾತಂತ್ರ್ಯ ಪೂರ್ವದ ನಂತರ ಕನಕಪುರದ ಮೊದಲ ಶಾಸಕರಾದ ಎಂ.ಲಿಂಗೇಗೌಡರು ಮಳಗಾಳು ಗ್ರಾಮದಲ್ಲಿ ಜನಿಸಿ, ೧೨೪ ವರ್ಷದ ನಂತರ ಅವರ ಜೀವನ ಚರಿತ್ರೆ ಬಿಡುಗಡೆಗೊಳಿಸಲಾಗಿದೆ. ಅವರ ೬೩ ವರ್ಷದ ಜೀವಿತಾವಧಿಯ ಸಾಮಾಜಿಕ ಕಳಕಳಿಯ ಅಭಿವೃದ್ಧಿ ಕೆಲಸಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ ಎಂದು ಜಿಕೆವಿಕೆ ನಿವೃತ್ತ ಉಪನ್ಯಾಸಕ ಮಂಚೇಗೌಡ ಹೇಳಿದರು.ಭಾನುವಾರ ನಗರದ ಮಳಗಾಳು ಈಶ್ವರ ದೇವಾಲಯ ಆವರಣದಲ್ಲಿ ಎಂ.ಲಿಂಗೇಗೌಡರ ಜೀವನ ಪರಿಚಯದ ‘ಮರೆಯದ ಮಾಣಿಕ್ಯ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಕ್ಷೇತ್ರದ ಪ್ರಥಮ ಶಾಸಕರಾಗಿ ಸಮಾಜದ ದೂರದೃಷ್ಟಿ ಹೊಂದಿದ್ದ ದಿವಂಗತ ಎಂ.ಲಿಂಗೇಗೌಡರು ಕಾನಕಾನಹಳ್ಳಿಯನ್ನು ಕನಕಪುರ ನಗರವನ್ನಾಗಿ ನಿರ್ಮಿಸುವ ಗುರಿಹೊಂದಿದ್ದರು. ಅವರ ಕುರಿತ ಪುಸ್ತಕವು ದಿ.ಎಂ.ಲಿಂಗೇಗೌಡರ ಜೀವನ ಚರಿತ್ರೆ ಅವರ ತತ್ವ ಆದರ್ಶಗಳನ್ನು ಒಳಗೊಂಡಿದೆ ಎಂದು ಹೇಳಿದರು.
ಇಂದಿಗೆ ಅವರು ಮರಣ ಹೊಂದಿ ೬೦ ವರ್ಷ ಸಂದಿವೆ. ಜೀವಿತಾವಧಿಯಲ್ಲಿ ಅವರ ಸೇವೆಯ ಕೃತಜ್ಞತಾ ಭಾವದಿಂದ ರಚನಕಾರ ಆಕಾಶವಾಣಿ ಕಲಾವಿದ ಹಾಗೂ ನಿವೃತ್ತ ಶಿಕ್ಷಕ ಚಿಕ್ಕಮರಿಗೌಡರು ‘ಮರೆಯದ ಮಾಣಿಕ್ಯ’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಗೌಡರ ಸಮಾಜಮುಖಿ ಕೆಲಸಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಇದಾಗಿದೆ ಎಂದು ತಿಳಿಸಿದರು.ಶಿಕ್ಷಣ ಇಲಾಖೆಯ ಎಂ.ಸಿ.ನಾಗರಾಜು ಮಾತನಾಡಿ, ಪುಸ್ತಕದಲ್ಲಿ ಲಿಂಗೇಗೌಡರ ಸರಳ, ಸಜ್ಜನಿಕೆಯ ವ್ಯಕ್ತಿತ್ವ, ಸಾಧನೆ ಹಾಗೂ ಅಂದಿನ ಕಾಲದ ಅವರ ಅಭಿವೃದ್ಧಿ ಸಾಧನೆಗಳ ಕುರಿತು ಬರೆಯಲಾಗಿದೆ. ಅಂದು ನೇರ ನಡೆ-ನುಡಿಗೆ ಹತ್ತಿರವಾಗಿ ಸೇವಾ ಮನೋಭಾವದ ಶಾಸಕರಾಗಿದ್ದ ಲಿಂಗೇಗೌಡರ ಬಗ್ಗೆ ಸಾಕಷ್ಟು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಕಾನಕಾನಹಳ್ಳಿ ಅಭಿವೃದ್ಧಿಗಾಗಿ ಶ್ರಮಿಸಿದ ಕಾರಣಕರ್ತರಲ್ಲಿ ಇವರು ಮೊದಲಿಗರಾಗಿದ್ದಾರೆ, ಕನಕಪುರವನ್ನು ಮಾದರಿ ತಾಲೂಕನ್ನಾಗಿ ಮಾಡುವ ಕನಸನ್ನು ಕಂಡಿದ್ದ ಇವರು, ಅನುದಾನಗಳ ಕೊರತೆಯಿದ್ದರೂ ಪ್ರಪ್ರಥಮವಾಗಿ ಮಳಗಾಳು ಸೇತುವೆ, ಪುರಸಭಾ ಹೈಸ್ಕೂಲ್, ಕಾಂಕ್ರಿಟ್ ರಸ್ತೆ, ಚರಂಡಿಗಳ ಅಭಿವೃದ್ಧಿ ಅಲ್ಲದೆ ನಗರದಲ್ಲಿ ಶಾಶ್ವತ ಹೊಸ ಬಡಾವಣೆಗಳನ್ನು ಸ್ಥಾಪಿಸಿದ್ದರು, ಮೊಟ್ಟ ಮೊದಲು ಶೈಕ್ಷಣಿಕ, ಆರೋಗ್ಯಕ್ಕೆ ಒತ್ತು ನೀಡಿದವರಾಗಿದ್ದಾರೆ, ಸಾರಿಗೆ ಸಂಪರ್ಕಕ್ಕಾಗಿ ಮೊಟ್ಟಮೊದಲು ಖಾಸಗಿ ಸಾರಿಗೆ ಬಸ್ಸುಗಳ ಪ್ರಾರಂಭ ಮಾಡಿದ್ದರು ಎಂದು ಹೇಳಿದರು.
ಸ್ವತಃ ಕ್ರೀಡಾಪಟುವಾಗಿ, ಈಜುಗಾರರಾಗಿ ಗ್ರಾಮಾಂತರ ಜಿಲ್ಲೆಯಲ್ಲಿಯೇ ದೈಹಿಕ ದೃಢತೆ ಹೊಂದಿದ್ದ ಇವರು, ತಾಲೂಕಿಗೆ ಒಂದು ಬೃಹತ್ ಮೈದಾನವನ್ನು ನಿರ್ಮಿಸಬೇಕೆಂದು ಪುರಸಭಾ ಹೈಸ್ಕೂಲ್ ಬಳಿ ವಿಸ್ತಾರವಾದ ಮೈದಾನವನ್ನು ನಿರ್ಮಿಸಿದರು, ಪುರಸಭಾ ಹೈಸ್ಕೂಲ್, ಕಾಲೇಜು ಪ್ರಾರಂಭಿಸಿ ಅಂದಿನ ದೂರದೃಷ್ಟಿಯ ಫಲವಾಗಿ ಇಂಗ್ಲೀಷ್ ತರಗತಿಗಳನ್ನೂ ಸಹ ಪ್ರಾರಂಭಿಸಿದರು, ಅವರ ಸೇವಾ ಅವಧಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ, ಕ್ರಿಯಾಶೀಲತೆಗೆ ಮತ್ತೊಂದು ಹೆಸರಾಗಿ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದರು, ಇವರ ಕನಸು, ನೆನಪುಗಳು ಮಾತ್ರ ಮುಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು.ಆರ್.ಇ.ಎಸ್. ಸಂಸ್ಥೆಯ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಮಾತನಾಡಿದರು.
ಪುಸ್ತಕದ ಕತೃ ಚಿಕ್ಕಮರಿಗೌಡರವರು ಲಿಂಗೇಗೌಡರ ತತ್ವ ಆದರ್ಶಗಳನ್ನು ನೆನೆದರು, ಉದ್ಯಮಿ ಆರ್.ಇ.ಎಸ್. ಸಂಸ್ಥೆಯ ಮಾಜಿ ಉಪಾಧ್ಯಕ್ಷ ಲಕ್ಷ್ಮಣ್, ಉಪಪ್ರಾಂಶುಪಾಲ ದೇವರಾಜು, ಮಾಜಿ ಪುರಸಭಾಧ್ಯಕ್ಷ ಮಂಜುನಾಥ್, ಆರ್.ಇ.ಎಸ್ ಮಾಜಿ ಉಪಾಧ್ಯಕ್ಷ ಶಿವಕುಮಾರ್ ಎಂ.ಎಲ್.ಊರಗೌಡರು ಹಾಗೂ ಲಿಂಗೇಗೌಡರ ಕುಟುಂಬ ಸದಸ್ಯರು ಭಾಗವಹಿಸಿದ್ದರು.