ಮಾಗಡಿ: ಕೆಂಪಾಪುರದಲ್ಲಿರುವ ನಾಡಪ್ರಭು ಕೆಂಪೇಗೌಡರ ವೀರಭೂಮಿ ಸಮಾಧಿ ಸ್ಥಳವನ್ನು ಇನ್ನೆರಡು ವರ್ಷಗಳಲ್ಲಿ ಸಮಗ್ರ ಅಭಿವೃದ್ಧಿಪಡಿಸಿ ಸುಂದರ ಪ್ರವಾಸಿ ತಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಬಾಲಕೃಷ್ಣ ಹೇಳಿದರು

ಮಾಗಡಿ: ಕೆಂಪಾಪುರದಲ್ಲಿರುವ ನಾಡಪ್ರಭು ಕೆಂಪೇಗೌಡರ ವೀರಭೂಮಿ ಸಮಾಧಿ ಸ್ಥಳವನ್ನು ಇನ್ನೆರಡು ವರ್ಷಗಳಲ್ಲಿ ಸಮಗ್ರ ಅಭಿವೃದ್ಧಿಪಡಿಸಿ ಸುಂದರ ಪ್ರವಾಸಿ ತಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಬಾಲಕೃಷ್ಣ ಹೇಳಿದರು.

ಕೆಂಪಾಪುರದ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಬಿಡಿಎ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಗೆ ಸುಮಾರು ₹ 200 ಕೋಟಿ ರುಪಾಯಿ ವೆಚ್ಚವಾಗುವ ಅಂದಾಜಿದ್ದು ಇದರ ಸಂಪೂರ್ಣ ಜವಾಬ್ದಾರಿ ಬಿಡಿಎ ವಹಿಸಿಕೊಂಡಿದೆ. ಪ್ರವಾಸಿ ತಾಣವಾಗಿ ಈ ಹಿಂದೆ ಗ್ರಾಮಠಾಣಾ, ಗುಂಡುತೋಪು ಸೇರಿ 8 ಎಕರೆ ಚಿಲ್ಲರೆ ಜಾಗವಿತ್ತು. ಈಗ ಹೆಚ್ಚುವರಿಯಾಗಿ 10 ಎಕರೆ ಭೂಸ್ವಾಧೀನಪಡಿಸಿಕೊಳ್ಳುತ್ತಿದ್ದು, ಒಟ್ಟು 18 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೃಹತ್ ಯೋಜನೆ ರೂಪುಗೊಳ್ಳಲಿದೆ ಎಂದು ಹೇಳಿದರು.

ಪ್ರವಾಸಿ ಆಕರ್ಷಣೆಗಳು: ಬೆಂಗಳೂರಿನ ಜನರು ಒಂದು ದಿನದ ಪ್ರವಾಸಕ್ಕೆ ಬಂದು ಕಾಲ ಕಳೆಯುವಂತೆ ಈ ಸ್ಥಳವನ್ನು ರೂಪಿಸಲಾಗುತ್ತಿದೆ ಪಕ್ಕದಲ್ಲಿರುವ 30 ಎಕರೆ ಕೆರೆಯ ಅಭಿವೃದ್ಧಿ, ಮಕ್ಕಳ ಉದ್ಯಾನವನ ಮತ್ತು ಬೆಂಗಳೂರಿನ ಪೇಟೆಗಳ ಮಾದರಿಯಲ್ಲಿ ಸಣ್ಣಪುಟ್ಟ ಅಂಗಡಿಗಳನ್ನು ನಿರ್ಮಿಸುವ ಯೋಜನೆಯಿದೆ. ಇತ್ತೀಚೆಗೆ ನಡೆದ ಬಿಡಿಎ ಸಭೆಯಲ್ಲಿ ಯೋಜನೆಗೆ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳೇ ಆಗಮಿಸಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾತನಾಡಿ, ಸಮಾಧಿ ಸ್ಥಳದ ಅಭಿವೃದ್ಧಿಗಾಗಿ ಈ ಹಿಂದೆ 5 ಎಕರೆ ಜಾಗ ಗುರುತಿಸಲಾಗಿತ್ತು. ಆದರೆ ಆ ಜಾಗ ಕಿರಿದಾಗಿದ್ದು, ಯೋಜನೆಯ ವಾಸ್ತುಶಿಲ್ಪಿಗಳು ಹಾಗೂ ಯೋಜನಾಧಿಕಾರಿಗಳ ಸಲಹೆಯಂತೆ ಹೆಚ್ಚುವರಿ 10 ಎಕರೆ ಪ್ರದೇಶಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಕೆಲ ರೈತರು ಈಗಾಗಲೇ ಒಪ್ಪಿಗೆ ನೀಡಿದ್ದು ಇನ್ನು ಕೆಲವರು ತಮ್ಮ ಜಮೀನನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದಾರೆ. ಯಾರಿಗೂ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕಿಲ್ಲ. ಸಚಿವ ಬಾಲಕೃಷ್ಣ ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ರೈತರ ಮನವೊಲಿಸಿ, ಜಮೀನಿಗೆ ಬದಲಾಗಿ 3-4 ಕಿಮೀ ವ್ಯಾಪ್ತಿಯಲ್ಲಿ ಪರ್ಯಾಯ ಸರ್ಕಾರಿ ಜಮೀನು ಅಥವಾ ಸೂಕ್ತ ಹಣಕಾಸಿನ ಪರಿಹಾರ ನೀಡಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.

ಬಿಡಿಎದಿಂದಲೇ ಸಂಪೂರ್ಣ ಅನುದಾನ: ಮುಖ್ಯಮಂತ್ರಿಗಳ ಆಶಯ ಮತ್ತು ನಿರ್ದೇಶನದಂತೆ ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರು ಇತ್ತೀಚಿನ ಬೋರ್ಡ್ ಮೀಟಿಂಗ್‌ನಲ್ಲಿ ಈ ಸ್ಥಳವನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದ್ದಾರೆ. ಕಾಮಗಾರಿಯ ಸಂಪೂರ್ಣ ವೆಚ್ಚವನ್ನು ಬಿಡಿಎ ಭರಿಸಲಿದ್ದು, ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದೆ. ಮಾಗಡಿ ಕೆಂಪೇಗೌಡ ಕೋಟೆ ಅಭಿವೃದ್ಧಿಗೆ ಈಗಾಗಲೇ ₹ 100 ಕೋಟಿ ರು.ಗಳಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿ ಕಾಮಗಾರಿ ನಡೆಯುತ್ತಿದೆ. ಅಲ್ಲದೆ, ವೀರಾಪುರ ಪುಣ್ಯಕ್ಷೇತ್ರದ ಅಭಿವೃದ್ಧಿಗೂ ಹೆಚ್ಚುವರಿ ಅನುದಾನ ನೀಡಲು ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ ಎಂದು ಡಿ.ಕೆ.ಸುರೇಶ್ ಮಾಹಿತಿ ನೀಡಿದರು.

(ಫೋಟೋ ಕ್ಯಾಪ್ಷನ್‌)

ಮಾಗಡಿ ತಾಲೂಕಿನ ಕೆಂಪಾಪುರದ ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಾಲಕೃಷ್ಣ, ಬಮೂಲ್ ಅಧ್ಯಕ್ಷ ಡಿ.ಕೆ‌.ಸುರೇಶ್‌ ಹಾಗೂ ಬಿಡಿಎ ಆಯುಕ್ತರು, ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಿದರು.