ಮದಲಗಟ್ಟಿ ಪ್ರವಾಸಿ ತಾಣವಾಗಿ ಅಭಿವೃದ್ಧಿ: ಶಾಸಕ ಕೃಷ್ಣನಾಯ್ಕ

| Published : Jan 24 2024, 02:04 AM IST

ಮದಲಗಟ್ಟಿ ಪ್ರವಾಸಿ ತಾಣವಾಗಿ ಅಭಿವೃದ್ಧಿ: ಶಾಸಕ ಕೃಷ್ಣನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಭಕ್ತರ ಕೋರಿಕೆಯ ಮೇರೆಗೆ ರಾಮಾಂಜನೇಯರ ಆಲಿಂಗನದ ಮೂರ್ತಿ ನಿರ್ಮಿಸುವ ಜತೆಗೆ ₹6 ಕೋಟಿ ವೆಚ್ಚದಲ್ಲಿ ಸುಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಶಾಸಕ ಕೃಷ್ಣನಾಯ್ಕ ತಿಳಿಸಿದರು.

ಹೂವಿನಹಡಗಲಿ: ಅಯೋಧ್ಯೆ ರಾಮಮಂದಿರ ನಿರ್ಮಾಣದ ಜತೆಗೆ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ದಿನದ ಸ್ಮರಣೆ ಅಂಗವಾಗಿ ಮದಲಗಟ್ಟಿ ಸುಕ್ಷೇತ್ರದಲ್ಲಿ 30 ಅಡಿ ಎತ್ತರದ ರಾಮಾಂಜನೇಯ ಆಲಿಂಗನ ಮೂರ್ತಿಯನ್ನು ನಿರ್ಮಿಸಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಶಾಸಕ ಕೃಷ್ಣನಾಯ್ಕ ತಿಳಿಸಿದರು.

ತುಂಗಭದ್ರಾ ನದಿ ತೀರದ ಪಾವನ ಸುಕ್ಷೇತ್ರ ಮದಲಗಟ್ಟಿಯಲ್ಲಿ ಹೋಮ, ಹವನ, ವಿಶೇಷ ಪೂಜೆಗಳೊಂದಿಗೆ ರಾಮಾಂಜನೇಯ ಮೂರ್ತಿ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆಗೆ ಚಾಲನೆ ನೀಡಿ ಮಾತನಾಡಿದರು.

ಆಂಜನೇಯರ ಮೊದಲ ಭೇಟಿಯ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಮದಲಗಟ್ಟಿ ಸುಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.

ಭಕ್ತರ ಕೋರಿಕೆಯ ಮೇರೆಗೆ ರಾಮಾಂಜನೇಯರ ಆಲಿಂಗನದ ಮೂರ್ತಿ ನಿರ್ಮಿಸುವ ಜತೆಗೆ ₹6 ಕೋಟಿ ವೆಚ್ಚದಲ್ಲಿ ಸುಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.

ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಮನಾಮ ಜಪದ ಮೂಲಕ ಭವ್ಯ ಭಾರತ ಪುನರುತ್ಥಾನದ ಐತಿಹಾಸಿಕ ಸ್ಮರಣೆಯ ದಿನದಂದು ಸುಕ್ಷೇತ್ರದಲ್ಲಿ ಮಹತ್ವದ ಕಾರ್ಯಕ್ಕೆ ಚಾಲನೆ ನೀಡಿರುವುದು ಬಹಳ ಸಂತೋಷದ ಸಂಗತಿ ಎಂದರು.

ನೀಲಗುಂದ ಚನ್ನಬಸವ ಸ್ವಾಮೀಜಿ, ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ಕೊಂಬಳಿಯ ಗಾಡಿತಾತಾ, ಉತ್ತಂಗಿಯ ಸೋಮಶಂಕರ ಸ್ವಾಮೀಜಿ, ಅಂಗೂರಿನ ಶಿವಯೋಗೇಶ್ವರ ಸ್ವಾಮೀಜಿ, ರಾಮಸ್ವಾಮಿ ದೇವಸ್ಥಾನದ ರಾಕೇಶಯ್ಯ, ಹಿರೇಹಡಗಲಿ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ, ಹೊಳಲಿನ ಚನ್ನಬಸವ ದೇವರು, ಜಿತಾಮಿತ್ರಾಚಾರ್ಯ ಸಾನ್ನಿಧ್ಯ ವಹಿಸಿದ್ದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮುಖಂಡರಾದ ಎಚ್. ಪೂಜಪ್ಪ, ಎಂ. ಪರಮೇಶ್ವರಪ್ಪ, ಕೋಡಿಹಳ್ಳಿ ಮುದುಕಪ್ಪ, ಎಂ.ಪಿ. ಸುಮಾ ವಿಜಯ್, ತಳಕಲ್ ಕರಿಬಸಪ್ಪ, ಬಿ. ತೋಟಾನಾಯ್ಕ, ಈಟಿ ಲಿಂಗರಾಜ, ಕೆ.ಬಿ. ವೀರಭದ್ರಪ್ಪ, ಸಿ. ಮೋಹನರೆಡ್ಡಿ, ಎನ್. ಕೋಟೆಪ್ಪ, ಟಿ. ಪರಮೇಶ್ವರಪ್ಪ, ಬಸವರಾಜ ಅಂಗಡಿ, ಹಣ್ಣಿ ಶಶಿಧರ, ಹಕ್ಕಂಡಿ ಮಹಾದೇವ, ಸಿರಾಜ್ ಬಾವಿಹಳ್ಳಿ, ಡಾ. ಲಕ್ಷ್ಮಣನಾಯ್ಕ, ಯು. ಕೊಟ್ರೇಶನಾಯ್ಕ, ಲಂಕೇಶ್ವರ ಇತರರಿದ್ದರು.

ಮದಲಗಟ್ಟಿ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಪ್ರಾಣದೇವರಿಗೆ ರಜತ ಕವಚ ತೊಡಿಸಲಾಗಿತ್ತು. ತಾಲೂಕಿನ ನಾನಾ ಕಡೆಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿಯ ದರ್ಶನ ಪಡೆದು ಪುನೀತರಾದರು.