ಸಾರಾಂಶ
ಮುಂಡಗೋಡ: ಎಂಜಿನಿಯರ್ ಇಲ್ಲದೆ ಇರುವುದರಿಂದ ನಗರದ ಅಭಿವೃದ್ದಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಅನುದಾನ ಸದ್ಬಳಕೆಯಾಗದೆ ಪಟ್ಟಣಕ್ಕೆ ಗ್ರಹಣ ಹಿಡಿದಂತಾಗಿದೆ. ಮುಂಡಗೋಡ ಪಟ್ಟಣ ಪಂಚಾಯಿತಿಯಿಂದ ವೇತನ ಪಡೆದು ಡಾಂಡೇಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರರನ್ನು ಇಲ್ಲಿಗೆ ಕರೆತರಬೇಕೆಂದು ಪಪಂ ಸರ್ವ ಸದಸ್ಯರು ಸಾಮೂಹಿಕವಾಗಿ ಒತ್ತಾಯಿಸಿದರು.ಮಂಗಳವಾರ ಇಲ್ಲಿನ ಪಪಂ ಸಭಾಂಗಣದಲ್ಲಿ ಪಪಂ ಸಾಮಾನ್ಯ ಸಭೆಯಲ್ಲಿ ಧ್ವನಿ ಎತ್ತಿದ ಸದಸ್ಯರು, ಏನಾದರೂ ಕೆಲಸವಾಗಬೇಕಾದರೆ ಎಂಜಿನಿಯರ್ ಇಲ್ಲ ಎಂಬ ಸಬೂಬು ನೀಡಲಾಗುತ್ತದೆ. ಎಲ್ಲದಕ್ಕೂ ಎಂಜಿನಿಯರ್ ಇಲ್ಲ ಎನ್ನುವುದಾದರೆ ಆಡಳಿತ ಕಮಿಟಿ ಹಾಗೂ ಮುಖ್ಯಾಧಿಕಾರಿ ಏಕೆ ಇರಬೇಕು ಎಂದು ಪ್ರಶ್ನಿಸಿದ ಸದಸ್ಯರು, ಹಾಗಾದರೆ ಎಂಜಿನಿಯರ್ ಬರುವವರೆಗೆ ಪಟ್ಟಣ ಪಂಚಾಯಿತಿಗೆ ಬೀಗ ಹಾಕಿಬಿಡಿ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಈ ಹಿಂದೆ ಇಲ್ಲಿಂದ ವರ್ಗಾವಣೆಗೊಂಡ ಎಂಜಿನಿಯರ್ ಶಂಕರ ಅವರನ್ನು ಬೇರೆಯವರು ಇಲ್ಲಿಗೆ ಬರುವವರೆಗೆ ಕಾಯದೆ ಬಿಡುಗಡೆ ಮಾಡಲಾಗಿದೆ. ಅಂದಿನಿಂದ ಇದುವರೆಗೂ ಇಲ್ಲಿ ಆಗಬೇಕಾದ ಕೆಲಸಗಳು ಆಗುತ್ತಿಲ್ಲ. ತಕ್ಷಣ ಬೇರೆ ಕಡೆಯಿಂದ ಒಬ್ಬ ಎಂಜಿನಿಯರರನ್ನು ಇಲ್ಲಿಗೆ ಕರೆತರಬೇಕು ಎಂದು ಒತ್ತಾಯಿಸಿದರು.ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಅಳವಡಿಸಲಾದ ಅಲಂಕೃತ ವಿದ್ಯುತ್ ದೀಪಗಳು ಹಾಳಾಗಿದ್ದು, ಸಂಜೆಯಾದರೆ ಪಟ್ಟಣದಲ್ಲಿ ಕತ್ತಲು ಆವರಿಸುತ್ತದೆ. ಸಂಪೂರ್ಣ ಕಳಪೆ ಕಾಮಗಾರಿಯಾಗಿದ್ದು, ಕೋಟ್ಯಂತರ ರುಪಾಯಿ ಹಣ ನೀರಿನಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಕರೆಸಿ ವಿಚಾರಿಸಿ ಪರಿಹಾರ ಕಂಡುಕೊಳ್ಳಿ ಎಂದು ಸದಸ್ಯರು ಹೇಳಿದರು.ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಚಂದ್ರಶೇಖರ, ಅಲಂಕೃತ ವಿದ್ಯುತ್ ದೀಪಗಳ ಯೋಜನೆಯನ್ನು ಪಪಂಗೆ ಹಸ್ತಾಂತರ ಮಾಡಿಕೊಂಡಿಲ್ಲ. ಹಾಗಾಗಿ ಅದರ ವಿದ್ಯುತ್ ಸಂಪರ್ಕ ಕಡಿತಗೊಳಿಸಿ. ಮೊದಲಿನ ವಿದ್ಯುತ್ ಕಂಬಗಳಿಗೆ ಎಲ್‌ಇಡಿ ದೀಪ ಅಳಡಿಸಲಾಗುವುದು ಎಂದರು.ಗಾಂಧಿನಗರ ಬಡಾವಣೆಯನ್ನು ಸ್ಲಂ ಬೋರ್ಡ್ ಘೋಷಣೆ ಮಾಡಿ ವರ್ಷ ಕಳೆದರೂ ಈವರೆಗೆ ಫಾರಂ ನಂ. ೩ ನೀಡಲಾಗುತ್ತಿಲ್ಲ. ಇದರಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆ ಇರುವ ನಿವೇಶನಗಳನ್ನು ಹೊರತುಪಡಿಸಿ ಇನ್ನುಳಿದವರಿಗೆ ಫಾರಂ ನಂ. ೩ ಒದಗಿಸುವ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪಪಂ ಅಧ್ಯಕ್ಷೆ ಜಯಸುಧಾ ಭೋವಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಉಪಾಧ್ಯಕ್ಷೆ ರಹೀಮಾಬಾನು ಕುಂಕೂರ, ಸದಸ್ಯ ಶ್ರೀಕಾಂತ ಸಾನು, ಅಶೋಕ ಚಲವಾದಿ, ಫಣಿರಾಜ ಹದಳಗಿ, ರಝಾಖಾನ ಪಠಾಣ, ಮಂಜುನಾಥ, ಮಹ್ಮದಗೌಸ ಮಖಾಂದಾರ, ನಿರ್ಮಲಾ, ಕುಸುಮಾ ಹಾವಣಗಿ, ಬೀಬಿಜಾನ ಮುಲ್ಲಾನವರ, ವಿಶ್ವನಾಥ ಪವಾಡಶೆಟ್ಟರ, ಜಾಫರ್ ಹಂಡಿ, ಶೇಖರ ಲಮಾಣಿ, ಶಿವರಾಜ ಸುಬ್ಬಾಯವರ, ಜೈನು ಬೆಂಡಿಗೇರಿ, ನಾಗರಾಜ ಹಂಚಿನಮನಿ, ಚಂದ್ರಶೇಖರ ಕರಿಗಾರ ಮುಂತಾದವರು ಉಪಸ್ಥಿತರಿದ್ದರು.ಫಾರಂ ನಂ. 3 ನೀಡಲು ಶಾಸಕರ ಸೂಚನೆಎಲ್ಲ ದಾಖಲೆಗಳು ಸರಿಯಾಗಿದ್ದವರಿಗೆ ತಕ್ಷಣ ಫಾರಂ ನಂ. ೩ ನೀಡಬೇಕು. ಒಬ್ಬರಿಂದ ಎಲ್ಲರಿಗೂ ತೊಂದರೆ ನೀಡದಂತೆ ಶಾಸಕ ಶಿವರಾಮ ಹೆಬ್ಬಾರ ಪಪಂ ಅಧಿಕಾರಿ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸಿದರು. ಹೆಚ್ಚುವರಿ ೫೦೦ ಮನೆಗಳು ಮಂಜೂರಾಗಿದ್ದು, ಪ್ರತಿ ವಾರ್ಡ್‌ನಲ್ಲಿ ತಲಾ ೧೦ ಜನ ಫಲಾನುಭವಿಗಳ ಯಾದಿ ನೀಡುವಂತೆ ಶಾಸಕ ಶಿವರಾಮ ಹೆಬ್ಬಾರ ಸದಸ್ಯರಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಸದಸ್ಯರು, ಮನೆ ನಿರ್ಮಾಣಕ್ಕೆ ₹೧.೫೦ ಲಕ್ಷ ನೀಡುವುದಾದರೆ ಯಾರೂ ಮುಂದೆ ಬರುವುದಿಲ್ಲ. ₹೨.೭೦ ಲಕ್ಷ ನೀಡಿದರೆ ಮಾತ್ರ ಫಲಾನುಬವಿಗಳು ಮುಂದೆ ಬರುತ್ತಾರೆ. ಹಾಗಾಗಿ ಮನೆಯ ಯೋಜನೆಯ ಮೊತ್ತವನ್ನು ₹೨.೭೦ಕ್ಕೆ ಹೆಚ್ಚಿಸಬೇಕೆಂದು ಸದಸ್ಯರು ಶಾಸಕರಿಗೆ ತಿಳಿಸಿದರು.