ಸಂಘಗಳ ಬೆಳವಣಿಗೆಯಿಂದ ಸಹಕಾರ ಕ್ಷೇತ್ರ ಅಭಿವೃದ್ಧಿ

| Published : Nov 21 2025, 01:30 AM IST

ಸಾರಾಂಶ

ರಾಜ್ಯದಲ್ಲಿ ಸಹಕಾರ ಸಂಘಗಳ ಸರ್ವತೋಮುಖ ಬೆಳವಣಿಗೆಯಿಂದ ಮಾತ್ರ ಸಹಕಾರ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ರಾಜ್ಯದಲ್ಲಿ ಸಹಕಾರ ಸಂಘಗಳ ಸರ್ವತೋಮುಖ ಬೆಳವಣಿಗೆಯಿಂದ ಮಾತ್ರ ಸಹಕಾರ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದ ಡಾ. ಬಿ.ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಗಣದಲ್ಲಿ ಗುರುವಾರ ಆಯೋಜಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರ ಕ್ಷೇತ್ರ ಬೆಳವಣಿಗೆಗೆ ಕೃಷಿ, ರೇಷ್ಮೆ, ಪಶುಸಂಗೋಪನೆ ಕ್ಷೇತ್ರಗಳು ವಿಶೇಷವಾಗಿ ಪ್ರಗತಿ ಸಾಧಿಸಿದರೆ ಗ್ರಾಮೀಣ ಭಾಗದ ಜನರು ಆರ್ಥಿಕವಾಗಿ ಸದೃಢರಾಗಲಿದ್ದಾರೆ. ಹೈನುಗಾರಿಕೆ ಗ್ರಾಮೀಣ ಜನರ ಉಪ ಕಸುಬಾಗಿದೆ. ಪ್ರಸ್ತುತ ರಾಜ್ಯದಲ್ಲಿ ೧೬ ಹಾಲು ಒಕ್ಕೂಟಗಳಿದ್ದು, ಪ್ರತಿದಿನ ೧ ಕೋಟಿ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಗುಜರಾತ್ ರಾಜ್ಯ ಹೊರತುಪಡಿಸಿ ಇಡೀ ದೇಶದಲ್ಲಿಯೇ ಕರ್ನಾಟಕ ಹಾಲು ಉತ್ಪಾದನೆಯಲ್ಲಿ ೨ನೇ ಸ್ಥಾನ ಪಡೆದಿದೆ. ಇದಕ್ಕೆ ರಾಜ್ಯದ ಎಲ್ಲಾ ಸಹಕಾರಿಗಳೇ ಕಾರಣರಾಗಿದ್ದಾರೆ ಎಂದರು.

ರೈತರ ಅನುಕೂಲಕ್ಕಾಗಿ ೨ ಬಾರಿ ಹಾಲಿನ ಪ್ರೋತ್ಸಾಹಧನ ಹೆಚ್ಚಿಸಿದೆ. ಕ್ಷೀರಧಾರೆ ಯೋಜನೆಯಡಿ ಒಂದು ಲೀ. ಹಾಲಿಗೆ ೫ ರು. ಪ್ರೋತ್ಸಾಹಧನವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಹಾಲು ಒಕ್ಕೂಟಗಳಿಲ್ಲದ ಜಿಲ್ಲೆಗಳಲ್ಲಿ ಒಕ್ಕೂಟ ತೆರೆಯುವಂತೆ ಪ್ರಸ್ತಾವನೆಗಳು ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಹಾಲು ಒಕ್ಕೂಟ ತೆರೆಯಲಾಗುವುದು ಎಂದು ತಿಳಿಸಿದರು.

ಸ್ವತಂತ್ರ ಭಾರತದ ಮೊದಲ ಪ್ರಧಾನಿ ನೆಹರು ಅವರು ಯಾವುದೇ ದೇಶದ ಪ್ರಗತಿಗೆ ಗ್ರಾಮಗಳಲ್ಲಿ ಶಾಲೆ, ಗ್ರಾಮ ಪಂಚಾಯಿತಿ ಹಾಗೂ ಸಹಕಾರಿ ಸಂಘಗಳು ನೆರವಾಗಲಿದೆ ಎಂದಿದ್ದರು. ಈಗ ಸಹಕಾರ ಚಳವಳಿಗೆ ೭೨ ವರ್ಷಗಳು ತುಂಬಿವೆ. ೧೯೦೪ರಲ್ಲಿ ಆರಂಭವಾದ ಸಹಕಾರ ಚಳವಳಿ ಈವರೆಗೂ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ಮೂಲಕ ಬಡವರ, ಸಾಮಾನ್ಯ ಜನರ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ ರಾಜಕೀಯ ಬೆಳವಣಿಗೆಗೆ ಪ್ರೇರಣಾ ಶಕ್ತಿಯಾಗಿದೆ. ಇಡೀ ಏಷ್ಯಾ ಖಂಡದಲ್ಲಿ ಮೊದಲಬಾರಿಗೆ ಸಹಕಾರ ಸಂಘ ಸ್ಥಾಪಿಸಿದ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದ ಸಿದ್ದನಗೌಡ ಪಾಟೀಲ ಕರ್ನಾಟಕದ ಸಹಕಾರಿ ಪಿತಾಮಹರಾಗಿದ್ದು, ಕಣಗಿನಹಾಳ ಗ್ರಾಮ ಸಹಕಾರ ಕ್ಷೇತ್ರದ ಹೆಬ್ಬಾಗಿಲು ಎಂದರೆ ತಪ್ಪಾಗಲಾರದು ಎಂದು ಹೇಳಿದರು.

ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡೂವರೆ ವರ್ಷಗಳನ್ನು ಪೂರೈಸಿದೆ. ಯಾವುದೇ ತಾರತಮ್ಯವಿಲ್ಲದೇ ಸಮಾಜದ ಎಲ್ಲಾ ಬಡವರ ಸೇವೆ ಮಾಡುವ ಅವಕಾಶ ನಮಗೆ ದೊರೆತಿದೆ. ಈ ಹಿಂದೆ ನಮ್ಮದೆ ಸರ್ಕಾರ ಅಧಿಕಾರಕ್ಕೆ ಬಂದಾಗ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದ್ದೆ. ನನ್ನದೇ ನಾಯಕತ್ವದಲ್ಲಿ ಸರ್ಕಾರ ೨ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು, ಸಾಮಾಜಿಕ ಅಸಮತೋಲನ ನಿವಾರಣೆಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಸಮಾಜದ ಎಲ್ಲರಿಗೂ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ, ರಾಜಕೀಯ ಶಕ್ತಿ ದೊರೆಯುವಂತಾಗಲು ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಲು ಬದ್ಧವಾಗಿದೆ ಎಂದು ತಿಳಿಸಿದರು.

ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಮಾತನಾಡಿ, ೭೨ನೇ ಸಹಕಾರ ಸಪ್ತಾಹದ ಸಮಾರೋಪ ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುತ್ತಿರುವುದು ಐತಿಹಾಸಿಕವಾಗಿದೆ. ನವೆಂಬರ್ ೧೪ರಿಂದ ೨೦ರವರೆಗೆ ರಾಜ್ಯಾದ್ಯಂತ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು. ಸರ್ಕಾರ ಸಾಕಷ್ಟು ಕಾರ್ಯಕ್ರಮ ಜಾರಿಗೊಳಿಸಿ ಬಡವರ, ಮಹಿಳೆಯರ, ರೈತರ ಪರವಾಗಿದೆ ಎಂದರು.

ಸಮಾಜ ಕಲ್ಯಾಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಸಹಕಾರ ಚಳವಳಿ ಕ್ರಿ.ಶ. ೫-೬ನೇ ಶತಮಾನದಲ್ಲಿ ಬೌದ್ದ ಬಿಕ್ಕುಗಳಿಂದ ಆರಂಭವಾಗಿ ಬಳಿಕ ೧೨ನೇ ಶತಮಾನದಲ್ಲಿ ಬಸವಣ್ಣನವರ ಅನುಭವಮಂಟಪದಲ್ಲಿ ಶಿವಶರಣದ ಧಾರ್ಮಿಕ ಚಳವಳಿ ರು.ಪ ಪಡೆಯಿತು. ನಂತರ ಗಾಂಧಿಜೀಯವರ ಸ್ವದೇಶಿ, ಅಸಹಕಾರ ಚಳವಳಿ ಅತ್ಯಂತ ಮಹತ್ವವಾದವು. ೧೯೦೪ರಲ್ಲಿ ಸಿದ್ದನಗೌಡದ ಸಹಕಾರ ಚಳವಳಿ ಸಹಕಾರ ಕ್ಷೇತ್ರ ಬೆಳವಣಿಗೆಗೆ ನಾಂದಿಯಾಯಿತು. ಕರ್ನಾಟಕದಲ್ಲಿ ೪೭ ಸಾವಿರ ಸಹಕಾರ ಸಂಘಗಳಿವೆ. ಇವೆಲ್ಲವೂ ಜನರ ಸ್ವಾವಲಂಬಿ ಪರಿಕಲ್ಪನೆ ಹೊಂದಿವೆ ಎಂದು ಹೇಳಿದರು.

ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ರೈತರು, ಮಹಿಳೆಯರು ಹಾಗೂ ಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಸಹಕಾರ ಸಂಘಗಳು ನರೆವಾಗುತ್ತಿವೆ. ರಾಜ್ಯದಲ್ಲಿ ಸಹಕಾರ ಕ್ಷೇತ್ರ ಮುಂಚೂಣಿಗೆ ಬರಲು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಪರಿಶ್ರಮ ಸಾಕಷ್ಟಿದೆ ಎಂದ ಅವರು ಮೈಸೂರು-ಚಾಮರಾಜನಗರ ಸಹಕಾರ ಕೇಂದ್ರ ಬ್ಯಾಂಕನ್ನು ಪ್ರತ್ಯೇಕವಾಗಿ ಚಾಮರಾಜನಗರದಲ್ಲಿ ತೆರೆಯುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಸಂಸದ ಸುನೀಲ್ ಬೋಸ್ ಮಾತನಾಡಿ, ಸಹಕಾರ ಕ್ಷೇತ್ರವು ೭೨ ವರ್ಷಗಳನ್ನು ಪೂರೈಸಿದೆ ಎಂದರೆ ಅದು ಸಾಮಾನ್ಯ ಸಂಗತಿಯಲ್ಲ. ಸಹಕಾರ ಕ್ಷೇತ್ರದ ಬೆಳವಣಿಗೆ ಸಾಕಷ್ಟು ಹಿರಿಯ ಸಹಕಾರಿಗಳು ದುಡಿದಿದ್ದಾರೆ. ಸಾಮಾಜಿಕ, ಅರ್ಥಿಕ ಸದೃಢತೆ ಸಾಧಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ. ಸಹಕಾರ ಸಂಘದ ಸದಸ್ಯರು ಬ್ಯಾಂಕ್ ಸಾಲ ಪಡೆದು ಕೃಷಿ ಚಟುವಟಿಕೆಗಳಲ್ಲಿ ಹಾಗೂ ಮಹಿಳೆಯರು ಹೈನುಗಾರಿಕೆ ನಡೆಸಿ ಸ್ವಾವಲಂಬನೆ ಸಾಧಿಸಬಹುದಾಗಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ ಹಾಗೂ ಶಾಸಕ ಜಿ.ಟಿ. ದೇವೇಗೌಡ, ಹಿರಿಯ ಮಾಜಿ ಸಹಕಾರ ಸಚಿವರು ಹಾಗೂ ಹಿರಿಯ ಸಹಕಾರಿ ಧುರೀಣ ಕೆ.ಎನ್. ರಾಜಣ್ಣ ಅವರು ಸಹಕಾರ ಕ್ಷೇತ್ರದ ಅಭಿವೃದ್ಧಿ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು. ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ, ಎಚ್.ಎಂ. ಗಣೇಶ್ ಪ್ರಸಾದ್, ಎಂ.ಆರ್‌. ಮಂಜುನಾಥ್, ದರ್ಶನ್ ಧುವ ನಾರಾಯಣ್, ವಿಧಾನ ಪರಿಷತ್ ಶಾಸಕ ಡಾ. ಡಿ. ತಿಮ್ಮಯ್ಯ, ಕೆ. ಶಿವಕುಮಾರ್‌, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ಮಾಜಿ ಶಾಸಕ ಆರ್‌. ನರೇಂದ್ರ, ಕಳಲೆ ಕೇಶವಮೂರ್ತಿ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾ ಸಹಕಾರ ಒಕ್ಕೂಟಗಳ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್, ಮುಖಂಡರಾದ ರಾಮಪ್ಪ, ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕ ಟಿ.ಎಚ್.ಎಂ. ಕುಮಾರ್, ಸಹಕಾರ ಇಲಾಖೆ ಕಾರ್ಯದರ್ಶಿ ಎಸ್.ಬಿ. ಶೆಟ್ಟಣ್ಣನವರ್‌, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.