ಸಾರಾಂಶ
ಹೊಳೆಆಲೂರ: ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ಉದ್ದೇಶದಿಂದ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆಆದ್ಯತೆ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳು ಉತ್ತಮ ಹುದ್ದೆ ಅಲಂಕರಿಸಿ ಇಲ್ಲವೇ ಸಮಾಜ ಗುರುತಿಸುವಂತೆ ಒಳ್ಳೆಯ ಪ್ರಜೆಯಾಗಬೇಕು ಎಂದು ನರಗುಂದ ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಅವರು ಹೋಬಳಿ ಸಮೀಪದ ಹೊಳೆಮಣ್ಣೂರ ನವ ಗ್ರಾಮದಲ್ಲಿ ವಿವೇಕ ಯೋಜನೆಯಡಿ ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ಪ್ರೌಢ ಶಾಲೆ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಇಲ್ಲಿಯ ವಿದ್ಯಾರ್ಥಿಗಳು ರಾಜ್ಯ,ಜಿಲ್ಲೆ,ತಾಲೂಕು ಮಟ್ಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದುಕೊಳ್ಳುತ್ತಿದ್ದು, ರಾಜ್ಯ ಮಟ್ಟದಲ್ಲಿ ಹೊಳೆಮಣ್ಣೂರ ಪ್ರೌಢಶಾಲೆ ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರವಾಹ ಪೀಡಿತ ಈ ಗ್ರಾಮದ ಸಾಧನೆ ಮೆಚ್ಚುವಂತದ್ದು. ಇನ್ನೂ ಎರಡು ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದು, ಮುಂದೆ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ಉಮೇಶಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಸುಜಾತ ಮಠಪತಿ,ಗ್ರಾಪಂ ಉಪಾಧ್ಯಕ್ಷ ಮಂಜು ಹೂಗಾರ, ಮಹಾಂತಗೌಡ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ,ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಲವಂತ ನಾಯಕರ, ಎಸ್ ಡಿಎಂಸಿ ಅಧ್ಯಕ್ಷ ಈರಣ್ಣ ಗಡಿಗೌಡ್ರ, ಬಸವಂತಪ್ಪ ತಳವಾರ ಸೇರಿದಂತೆ ಗ್ರಾಪಂ ಸದಸ್ಯರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು, ಶಾಲೆಯ ಮುಖ್ಯೋಪಾಧ್ಯಾಯರು ಸಿಬ್ಬಂದಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.