ಸಾರಾಂಶ
೨೦ ಕೋಟಿ ವೆಚ್ಚದಲ್ಲಿ ಸಂಪಿಗೆ ದೇವಾಲಯ ಅಭಿವೃದ್ದಿ
ಕನ್ನಡಪ್ರಭವಾರ್ತೆ ತುರುವೇಕೆರೆ
ತಾಲೂಕಿನ ಸಂಪಿಗೆ ಗ್ರಾಮದೇವತೆಯಾಗಿರುವ ಇತಿಹಾಸ ಪ್ರಸಿದ್ಧ ಶ್ರೀ ಶ್ರೀನಿವಾಸಸ್ವಾಮಿ ದೇವಾಲಯದ ಸಮಗ್ರ ಅಭಿವೃದ್ದಿ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧಿಸಿದಂತೆ ನೀಲ ನಕ್ಷೆ ತಯಾರಾಗಿದ್ದು ಕೇಂದ್ರ ಸರ್ಕಾರದ ಎನ್ ಡಿ ಆರ್ ಎಫ್ ಯೋಜನೆಯಡಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ತಾಲೂಕಿನ ಸಂಪಿಗೆ ಶ್ರೀನಿವಾಸ ಸ್ವಾಮಿ ದೇವಾಲಯದ ಬಳಿ ಇರುವ ಕಲ್ಯಾಣಿಗೆ ಮುಜರಾಯಿ ಇಲಾಖೆಯಿಂದ ಬಿಡುಗಡೆಯಾಗಿರುವ ಸುಮಾರು ೧೦ ಲಕ್ಷ ರು ವೆಚ್ಚದಲ್ಲಿ ನಿರ್ಮಿಸಲಿರುವ ತಡೆಗೋಡೆಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇವಾಲಯದ ಕಮಿಟಿಯವರು ಸರ್ವೆ ಮಾಡಿಸಿ ನೀಲ ನಕ್ಷೆ ತಯಾರು ಮಾಡಿಸಿದ್ದಾರೆ. ಈ ಸಂಬಂಧಪಟ್ಟ ಕೇಂದ್ರ ಸಚಿವರ ಬಳಿ ಮಾತನಾಡಿ ಅನುದಾನ ಮುಂಜೂರು ಮಾಡಿಸಿಕೊಡುತ್ತೇನೆ. ತಾಲೂಕಿನ ಸುಪ್ರಸಿದ್ದ ದೇವಾಲಯವಾಗಿರುವ ಶ್ರೀ ಶ್ರೀನಿವಾಸ ದೇವಾಲಯ ಒಂದು ಪ್ರೇಕ್ಷಣೀಯ ಸ್ಥಳವಾಗಬೇಕು ಎಂಬುದು ತಮ್ಮ ಅಭಿಲಾಷೆಯಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಕೇವಲ ೧೦ ಲಕ್ಷ ರುಗಳ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮುಂಬರುವ ದಿನಗಳಲ್ಲಿ ತಮ್ಮ ಪಾಲಿಗೆ ಬರುವ ಶಾಸಕರ ಅನುದಾನದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಇನ್ನೂ ೧೦ ಲಕ್ಷ ರುಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಮಾಜಿ ಶಾಸಕ ಸೊಗಡುಶಿವಣ್ಣ ಮಾತನಾಡಿ ಇತ್ತೀಚಿನ ರಾಜಕಾರಣಿಗಳಲ್ಲಿ ಪ್ರಾಮಾಣಿಕತೆ ಎಂಬುದು ಕಾಣೆಯಾಗಿದೆ. ಶೇಕಡಾ ೧೦ ರಷ್ಟು ರಾಜಕಾರಣಿಗಳು ಮಾತ್ರ ಉತ್ತಮರಾಗಿದ್ದಾರೆ. ಈ ೧೦ ರಷ್ಟು ಭಾಗದವರಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಸಹ ಓರ್ವರು. ಅವರು ಹೋರಾಟಗಾರರು, ಪ್ರಾಮಾಣಿಕ ರಾಜಕಾರಣಿಯಾಗಿದ್ದು ೪ ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿ ಶ್ರಮಿಸುತ್ತಿದ್ದಾರೆ ಎಂದರು. ಈ ಸಂಧರ್ಭದಲ್ಲಿ ದೇವಾಲಯ ಸಮಿತಿ ವತಿಯಿಂದ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಮಾಜಿ ಶಾಸಕರಾದ ಸೊಗಡು ಶಿವಣ್ಣನವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದೇವಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಿ.ಪಿ.ಭಗವಾನ್, ವ್ಯವಸ್ಥಾಪನಾ ಸಮಿತಿಯ ಸದಸ್ಯ ಸಂಪಿಗೆ ಶ್ರೀಧರ್, ಜೆಡಿಎಸ್ ತಾಲೂಕು ಅಧ್ಯಕ್ಷ ದೊಡ್ಡೇಗೌಡ, ಚೌದ್ರಿ ಆಸ್ಪತ್ರೆಯ ಡಾ.ಚೌದ್ರಿನಾಗೇಶ್, ಗುತ್ತಿಗೆದಾರ ಮಾಸ್ತಿಗೊಂಡನಹಳ್ಳಿ ನಂದೀಶ್ ಸೇರಿದಂತೆ ಹಲವಾರು ಮುಖಂಡರು ಇದ್ದರು. ಭೂಮಿ ಪೂಜಾ ಕಾರ್ಯಕ್ಕೆ ಬಂದಿದ್ದ ಶಾಸಕ ಎಂ.ಟಿ.ಕೃಷ್ಣಪ್ಪನವರನ್ನು ಗ್ರಾಮಸ್ಥರು ಪೂರ್ಣಕುಂಭ ಸ್ವಾಗತ ನೀಡಿ ಭವ್ಯ ಮೆರವಣಿಗೆ ಮಾಡಿದರು.