ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ತಡೆ: ಬಿ.ಆರ್.ರಾಮಚಂದ್ರ

| Published : Feb 28 2024, 02:38 AM IST

ಸಾರಾಂಶ

ಚಿಕ್ಕಮಂಡ್ಯ ಕೆರೆಯಂಗಳದಲ್ಲಿ ಹಾದುಹೋಗಿರುವ ಹಳ್ಳಕ್ಕೆ ೫ ಕೋಟಿ ರು. ವೆಚ್ಚದ ಕಾಮಗಾರಿ ಮಾಡಲು ಬ್ರಹ್ಮಯ್ಯ, ಮೋಹನ್ ಸೇರಿ ನಾಲ್ಕು ಮಂದಿ ಗುತ್ತಿಗೆದಾರರು ಟೆಂಡರ್ ಸಲ್ಲಿಸಿದ್ದರು. ಆದರೆ, ಶಾಸಕರು ಗುತ್ತಿಗೆದಾರರಿಗೆ ಒತ್ತಡ ತಂದು, ಬೆದರಿಕೆಯೊಡ್ಡಿ ವಾಪಸ್ ತೆಗೆಸಿ ತಮ್ಮ ಕಡೆಯ ಸಿಂಗಲ್ ಟೆಂಡರ್‌ಅನ್ನು ಕಳುಹಿಸಿದ್ದಾರೆ. ಕೆಲಸದ ಆದೇಶ ನೀಡದೆ ಆಗಲೇ ಪೂಜೆ ಮಾಡಿ ಕೆಲಸ ಮಾಡಿಸಲು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳನ್ನು ತಡೆಹಿಡಿರುವ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಸುಖಾ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ ಎಂದು ಮನ್‌ಮುಲ್ ಮಾಜಿ ಅಧ್ಯಕ್ಷ, ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ಗಂಭೀರ ಆರೋಪ ಮಾಡಿದರು.

ಚಿಕ್ಕಮಂಡ್ಯ ಕೆರೆಯಂಗಳದಲ್ಲಿ ಹಾದುಹೋಗಿರುವ ಹಳ್ಳಕ್ಕೆ ೫ ಕೋಟಿ ರು. ವೆಚ್ಚದ ಕಾಮಗಾರಿ ಮಾಡಲು ಬ್ರಹ್ಮಯ್ಯ, ಮೋಹನ್ ಸೇರಿ ನಾಲ್ಕು ಮಂದಿ ಗುತ್ತಿಗೆದಾರರು ಟೆಂಡರ್ ಸಲ್ಲಿಸಿದ್ದರು. ಆದರೆ, ಶಾಸಕರು ಗುತ್ತಿಗೆದಾರರಿಗೆ ಒತ್ತಡ ತಂದು, ಬೆದರಿಕೆಯೊಡ್ಡಿ ವಾಪಸ್ ತೆಗೆಸಿ ತಮ್ಮ ಕಡೆಯ ಸಿಂಗಲ್ ಟೆಂಡರ್‌ಅನ್ನು ಕಳುಹಿಸಿದ್ದಾರೆ. ಕೆಲಸದ ಆದೇಶ ನೀಡದೆ ಆಗಲೇ ಪೂಜೆ ಮಾಡಿ ಕೆಲಸ ಮಾಡಿಸಲು ಮುಂದಾಗಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

೩ ಕೋಟಿ ರು. ವೆಚ್ಚದಲ್ಲಿ ಹೊಸಗಾವಿ ಮಹದೇಶ್ವರ ದೇವಾಲಯದಿಂದ ಮಾಚಗೌಡನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆ ಶಂಭು ಕನ್ಸ್‌ಟ್ರಕ್ಷನ್‌ನವರು ಟೆಂಡರ್ ಪಡೆದಿದ್ದಾರೆ. ಮಾಜಿ ಶಾಸಕ ಎಂ.ಶ್ರೀನಿವಾಸ್ ಪೂಜೆ ಮಾಡಿದ್ದರು. ನಂತರದ ದಿನಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾದ ಕಾರಣ ಕೆಲಸ ಮಾಡಲಾಗಲಿಲ್ಲ. ಈಗ ಕೆಲಸ ಮಾಡಲು ಮುಂದಾಗಿದ್ದರೂ ಸಹ ಅದಕ್ಕೆ ಶಾಸಕರು ಅಧಿಕಾರಿಗಳ ಮೂಲಕ ತಡೆಯೊಡ್ಡಿದ್ದಾರೆ. ಅಧಿಕಾರಿಗಳಿಗೆ ಈ ಬಗ್ಗೆ ಕೇಳಿದರೆ ಶಾಸಕರ ಬಳಿ ಮಾತನಾಡಿ ಎಂದು ಸಬೂಬು ಹೇಳುತ್ತಿದ್ದಾರೆ. ಈ ಬಗ್ಗೆ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲು ಮುಂದಾಗಿದ್ದೇವೆ. ಇದಕ್ಕೆ ನೇರ ಶಾಸಕರು ಮತ್ತು ಅಧಿಕಾರಿಗಳೇ ಕಾರಣ ಎಂದು ದೂರಿದರು.

ತುಂಬಕೆರೆ ಗ್ರಾಮದ ರಸ್ತೆ ಕಾಮಗಾರಿಯನ್ನೂ ಶಾಸಕರು ನಿಲ್ಲಿಸಿದ್ದಾರೆ. ಯಾವ ಉದ್ದೇಶಕ್ಕೆ ಕಾಮಗಾರಿ ಮಾಡಲು ತೊಂದರೆ ನೀಡುತ್ತಿದ್ದಾರೆಂಬುದು ತಿಳಿಯುತ್ತಿಲ್ಲ. ಆ ಭಾಗದ ಗ್ರಾಮಸ್ಥರಿಗೂ ಈ ವಿಚಾರ ತಿಳಿಸಿದ್ದೇನೆ. ನಾವು ಈಗಲೂ ರಸ್ತೆ ಮಾಡಲು ಸಿದ್ಧರಿದ್ದೇವೆ. ಅದಕ್ಕೆ ಶಾಸಕರು, ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಹೇಳಿದರು.

ಹಾಲಿ ಶಾಸಕರೇ ಹಿಂದಿನ ಎಲ್ಲಾ ಕಾಮಗಾರಿಗಳಿಗೆ ತಡೆಯೊಡ್ಡಿದ್ದು, ಕೇಳಿದರೆ ಜೆಡಿಎಸ್ ಗುತ್ತಿಗೆದಾರರು ಕಾಂಗ್ರೆಸ್ ಶಾಸಕರಿಗೆ ಕೆಟ್ಟ ಹೆಸರು ಬರುವಂತಾಗಲೆಂಬ ಕಾರಣಕ್ಕೆ ಕಾಮಗಾರಿ ನಿಲ್ಲಿಸಿದ್ದಾರೆ ಎಂದು ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಾರೆ. ಶಾಸಕರ ಹಸ್ತಕ್ಷೇಪವಿಲ್ಲದಿದ್ದಲ್ಲಿ ನಾವು ನಮ್ಮ ಕೆಲಸವನ್ನು ಪೂರ್ಣಗೊಳಿಸುತ್ತೇವೆ. ಇಂತಹ ರಾಜಕಾರಣದಿಂದಾಗಿ ಜನ ಹೈರಾಣಾಗುತ್ತಿದ್ದಾರೆ. ಇಂದು ಮುಂದುವರಿದಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.