ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾದ ಅನುದಾನ, ಸರ್ಕಾರದ, ಸಾರ್ವಜನಿಕರ ಹಣವಾಗಿದೆ. ಅದರ ಸದ್ಬಳಕೆಯಾಗಬೇಕು. ಸರ್ಕಾರದ ಹಣಕ್ಕೆ ಸಂರಕ್ಷಣೆ ನೀಡುವ ಜವಾಬ್ದಾರಿಯು ಜನಪ್ರತಿನಿಧಿಗಳದ್ದು ಹಾಗೂ ಅಧಿಕಾರಿಗಳದ್ದಾಗಿದೆ.
ಹಳಿಯಾಳ: ನನ್ನನ್ನು ಬಿಟ್ಟು ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಯಾರೂ ಜನಪ್ರತಿನಿಧಿಗಳಿಲ್ಲ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಪೌರ ಸಂಸ್ಥೆಗಳಲ್ಲಿ ಯಾರೂ ಜನಪ್ರತಿನಿಧಿಗಳೇ ಇಲ್ಲ. ಇಂತಹ ಸಮಯದಲ್ಲಿ ಅಧಿಕಾರಿಗಳ ಜವಾಬ್ದಾರಿಯು ಹೆಚ್ಚಾಗುತ್ತದೆ. ಯಾರೂ ವಿಚಾರಿಸುವರೇ ಇಲ್ಲವೆಂದು ಭಾವಿಸಿ ಮನಸೋ ಇಚ್ಛೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಡಿ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆಯವರು ತಾಕೀತು ಮಾಡಿದ್ದಾರೆ.
ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣಧಲ್ಲಿ ಆಯೋಜಿಸಿದ್ದ ಹಳಿಯಾಳ ವಿಧಾನಸಭಾ ಕ್ಷೇತ್ರ ಮಟ್ಟದ ಮೂರು ತಾಲೂಕುಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಮಂಜೂರಾದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾದ ಅನುದಾನ, ಸರ್ಕಾರದ, ಸಾರ್ವಜನಿಕರ ಹಣವಾಗಿದೆ. ಅದರ ಸದ್ಬಳಕೆಯಾಗಬೇಕು. ಸರ್ಕಾರದ ಹಣಕ್ಕೆ ಸಂರಕ್ಷಣೆ ನೀಡುವ ಜವಾಬ್ದಾರಿಯು ಜನಪ್ರತಿನಿಧಿಗಳದ್ದು ಹಾಗೂ ಅಧಿಕಾರಿಗಳದ್ದಾಗಿರುತ್ತದೆ. ನಿಮ್ಮ ಸ್ವಂತ ಹಣ ಇದ್ದರೆ ಹೀಗೆ ಅಭಿವೃದ್ಧಿ ಕಾಮಗಾರಿಗಳನ್ನು ಮನಸ್ಸಿಗೆ ಬಂದಂತೆ ವರ್ಷಾನುಗಟ್ಟಲೇ ಮಾಡುತ್ತಿದ್ದಿರಾ ಎಂದು ಮಾತಿನಲ್ಲಿಯೇ ತಿವಿದ ದೇಶಪಾಂಡೆ, ಕಾಮಗಾರಿ ತಡವಾದಷ್ಟು ಸಾಮಗ್ರಿಗಳ ದರ ಹೆಚ್ಚಾಗುತ್ತದೆ. ಈ ಕನಿಷ್ಠ ಜ್ಞಾನ ಅಧಿಕಾರಿಗಳಿರಬೇಕು.
ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ವರ್ಷಗಳಾದರೂ ಮುಕ್ತಾಯಗೊಳ್ಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.ತಹಸೀಲ್ದಾರ್ ಹಾಗೂ ತಾಪಂ ಇಒಗಳು ತಾಲೂಕು ಮಟ್ಟದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಯನ್ನು ಮಾಡಬೇಕು. ಕಾಮಗಾರಿಯಲ್ಲಿ ಲೋಪ ಕಂಡುಬಂದರೆ ವಿಚಾರಿಸಬೇಕು ಎಂದರು.
ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಮಂಜೂರಾದ ಕಾಮಗಾರಿಗಳ ಪ್ರಗತಿ ವರದಿಯನ್ನು ಅಧಿಕಾರಿಗಳು ಮಂಡಿಸಿದರು. ಹಳಿಯಾಳ ಪುರಸಭೆ ವ್ಯಾಪ್ತಿಯಲ್ಲಿ ₹3.37 ಕೋಟಿ ಅಂದಾಜು ಅನುದಾನದಲ್ಲಿ ಪಟ್ಟಣದಲ್ಲಿ ಕೈಗೊಳ್ಳಲಾಗುವ ಅಲಂಕಾರಿಕ ದೀಪಗಳ ಲೋಕಾರ್ಪಣೆ ಕಾಮಗಾರಿಯನ್ನು ಜ. 26ರಂದು ನಡೆಸುವುದಾಗಿ ಪುರಸಭೆಯವರು ತಿಳಿಸಿದರು. ಹಳಿಯಾಳ ಮತ್ತು ದಾಂಡೇಲಿಯಲ್ಲಿ ಕುಡಿಯುವ ನೀರಿನ ಯೋಜನೆಯು ನವೆಂಬರನಲ್ಲಿ ಮುಕ್ತಾಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು.ದೇಶಪಾಂಡೆ ಗರಂ: ಒಳಚರಂಡಿ ಯೋಜನೆಗೆ ಸಂಬಂಧಿಸ ಕಾಮಗಾರಿಯ ಪೈಪ್ ಅಳವಡಿಸುವ ಕಾರ್ಯಕ್ಕೆ ಸಕ್ಕರೆ ಕಾರ್ಖಾನೆಯವರು ಆಕ್ಷೇಪಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾಗ, ತೀವ್ರ ಸಿಟ್ಟಿಗೆದ್ದ ದೇಶಪಾಡೆಯವರು ಸಭೆಯಲ್ಲಿಯೇ ಕಾರ್ಖಾನೆಯ ಘಟಕ ಮುಖ್ಯಸ್ಥರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.
ಹಳಿಯಾಳದ ಹಿತರಕ್ಷಣೆಯ ದೃಷ್ಟಿಯಿಂದ ಕೈಗೊಳ್ಳುವ ಕಾಮಗಾರಿಗಳಿಗೆ ಕಾರ್ಖಾನೆಯವರು ಆಕ್ಷೇಪಿಸುವುದು ಸರಿ ಕಾಣುತ್ತಿಲ್ಲ. ಕಾರ್ಖಾನೆಯ ಆವರಣದ ಹೊರಗೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗೆ ಈ ರೀತಿ ಕಾಡಿಸಿದರೆ, ಮುಂದೆ ನನ್ನಿಂದ ಸಹ ನಿಮಗೆ ಯಾವುದೇ ಸಹಕಾರ ದೊರೆಯಲಾರದು ಎಂದು ಎಚ್ಚರಿಸಿ, ಕರೆ ಕಟ್ ಮಾಡಿ ಅಧಿಕಾರಿಗಳಿಗೆ ಪೈಪ್ ಅಳವಡಿಸುವ ಕಾಮಗಾರಿ ಆರಂಭಿಸಲು ಸೂಚಿಸಿ, ಅವರಿಂದ ಮತ್ತೇ ಆಕ್ಷೇಪಗಳು ಬಂದರೇ ನನಗೆ ತಿಳಿಸಿ. ನಾನೇ ಖುದ್ದು ಬರುತ್ತೇನೆ ಎಂದರು.ಸಭೆಯಲ್ಲಿ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ಇದ್ದರು.ವಯಸ್ಸಾದರೂ ನಾನು ಕ್ರಿಯಾಶೀಲ: ದೇಶಪಾಂಡೆ
ಹಳಿಯಾಳ: ಯಾರೂ ಹೇಗೆ ಎಂಬುವುದು ಕ್ಷೇತ್ರದ ಜನರಿಗೆ ಚೆನ್ನಾಗಿ ಗೊತ್ತು. ಅವರು ನನ್ನ ಬಗ್ಗೆ ಹೇಳಿ ಹೇಳಿ ಮಾತನಾಡಿ ಬಾರಿ ದಣಿದಿದ್ದಾರೆ. ನಾನು ಇಷ್ಟು ವಯಸ್ಸಾದರೂ ಕ್ರಿಯಾಶೀಲವಾಗಿದ್ದೇನೆ. ಅವರು ಯಾವತ್ತೂ ಸತ್ಯಕ್ಕೆ ದೂರವಾದ ವಿಚಾರ ಮಾತನಾಡಿ ಈ ಹಂತಕ್ಕೆ ಬಂದು ತಲುಪಿದ್ದಾರೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.ಪಿಎಸೈಗಳ ಆಡಿಯೋ ವೈರಲ್ ಪ್ರಕರಣ ಮತ್ತು ಹಳಿಯಾಳದಲ್ಲಿ ನಿರ್ಮಾಣವಾಗಿರುವ ವ್ಯವಸ್ಥೆಯ ದುಸ್ಥಿತಿಗೆ ದೇಶಪಾಂಡೆಯವರೇ ಕಾರಣ ಎಂದು ಕಾರವಾರದಲ್ಲಿ ಮಾಜಿ ಶಾಸಕರು ನೀಡಿದ ಹೇಳಿಕೆಗೆ ಈ ರೀತಿ ಉತ್ತರಿಸಿದರು.ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ಅದು ನನ್ನ ಕೆಲಸವೂ ಅಲ್ಲ. ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸುವುದು ಗೃಹ ಇಲಾಖೆಗೆ ಸಂಬಂಧಿಸಿದ್ದು, ಜಿಲ್ಲೆಯಲ್ಲಿ ಎಸ್ಪಿಯವರೇ ಇದಕ್ಕೆ ಜವಾಬ್ದಾರರು. ಆಡಿಯೋ ಪ್ರಕರಣದಲ್ಲಿ ಅವರು ಕೈಗೊಂಡ ತನಿಖೆಯನ್ನು ಆಧರಿಸಿ ಶಿಸ್ತಿನ ಕ್ರಮ ಕೈಗೊಂಡಿದ್ದಾರೆ. ಹೀಗಿರುವಾಗ ನಾನು ಈ ವಿಷಯದಲ್ಲಿ ಮೂಗು ತೂರಿಸುವುದಿಲ್ಲ. ನನಗೆ ಕಾನೂನು ಮತ್ತು ಆಡಳಿತ ಸುವ್ಯವಸ್ಥೆಯಿರಬೇಕು. ಸಾರ್ವಜನಿಕರಿಗೆ ರಕ್ಷಣೆ ದೊರೆಯಬೇಕು. ಆ ದೃಷ್ಟಿಯಲ್ಲಿ ಇಲಾಖೆಯು ಸೇವೆ ಸಲ್ಲಿಸಬೇಕೆಂಬುದು ನನ್ನ ಆಶಯವಾಗಿದೆ ಎಂದರು.