ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ ನಾಯಕ ದೇವರಭಾವಿ ಮಾತನಾಡಿ, ಸಂಘಟಿತ ಹೋರಾಟಕ್ಕೆ ಜಯ ದೊರಕುತ್ತದೆ ಎಂಬುದು ಇಲ್ಲಿನ ಜನಸ್ತೋಮವೇ ಸಾಕ್ಷಿ. ಎಲ್ಲರೂ ಜೊತೆಯಾಗಿ ಈ ಯೋಜನೆ ಕೈಬಿಡುವವರೆಗೆ ಹೋರಾಟ ಮುಂದುವರಿಸೋಣ ಎಂದರು.

ಗೋಕರ್ಣ: ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಗಂಗಾವಳಿ- ಕರಾವಳಿ ಉಳಿಸಿ ಅಭಿಯಾನದ ಜಾಗೃತಿ ಜಾಥಾ ಹಾಗೂ ಹಕ್ಕೊತ್ತಾಯದ ಮನವಿ ಸಲ್ಲಿಕೆ ಗುರುವಾರ ಇಲ್ಲಿ ನಡೆಯಿತು.ಘಟ್ಟದ ಮೇಲಿನ ತಾಲೂಕುಗಳಿಂದ ಬಂದ ಬೃಹತ್ ಜನಸ್ತೋಮದ ಜೊತೆ ಇಲ್ಲಿನ ಹಲವು ಸಂಘಟನೆ, ವಿವಿಧ ಪಕ್ಷದವರು, ಸಾರ್ವಜನಿಕರು ಜತೆಯಾಗಿ ಪುಣ್ಯಾಶ್ರಮದಿಂದ ಗ್ರಾಮ ಪಂಚಾಯಿತಿಯವರೆಗೆ ಜಾಥಾ ತೆರಳಿತು. ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಗೆ ಮಾರಕ ಯೋಜನೆ ಕೈಬಿಡುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ನಂತರ ಮಾತನಾಡಿದ ಪುಣ್ಯಾಶ್ರಮದ ವೇ. ರಾಜಗೋಪಾಲ ಅಡಿಗುರೂಜಿ, ಪುಣ್ಯ ಕ್ಷೇತ್ರದಿಂದ ಆರಂಭವಾದ ಈ ಹೋರಾಟಕ್ಕೆ ಯಶಸ್ಸಿಯಾಗುತ್ತದೆ ಎಂದ ಅವರು, ಪರಿಸರಕ್ಕೆ ಮಾರಕವಾದ ಯೋಜನೆಗಳನ್ನ ತಕ್ಷಣ ಕೈಬಿಡಬೇಕು ಆಗ್ರಹಿಸಿದರು. ಉತ್ತರ ಕನ್ನಡ ಜನರ ಶಾಂತ ಸ್ವಭಾವನ್ನು ಕೆಣಕಿದರೆ ಪರಿಣಾಮ ಬೇರೆಯಾಗುತ್ತದೆ ಎಂದು ಎಚ್ಚರಿಸಿ, ಈ ಹೋರಾಟಕ್ಕೆ ನಿರಂತರ ಬೆಂಬಲವಿದೆ ಎಂದರು.ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ನದಿ ತಿರುವು ಯೋಜನೆಯಿಂದ ಆಗುವ ಪರಿಣಾಮಗಳನ್ನು ವಿವರಿಸಿ ನಮ್ಮ ಗಂಗಾವಳಿ, ಬೇಡ್ತಿ ನದಿಗಳ ಹರಿಯುವ ಸುತ್ತಮುತ್ತಲಿನ ಹಳ್ಳಿಯಲ್ಲಿ ಸಹ ಜನರ ಸಂಘಟಿಸಿ ಯೋಜನೆ ಕೈಬಿಡಲು ಹೋರಾಟ ತೀವ್ರಗೊಳಿಸುತ್ತೇವೆ ಎಂದರು.ಮಹಾಬಲೇಶ್ವರ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ ನಾಯಕ ದೇವರಭಾವಿ ಮಾತನಾಡಿ, ಸಂಘಟಿತ ಹೋರಾಟಕ್ಕೆ ಜಯ ದೊರಕುತ್ತದೆ ಎಂಬುದು ಇಲ್ಲಿನ ಜನಸ್ತೋಮವೇ ಸಾಕ್ಷಿ. ಎಲ್ಲರೂ ಜೊತೆಯಾಗಿ ಈ ಯೋಜನೆ ಕೈಬಿಡುವವರೆಗೆ ಹೋರಾಟ ಮುಂದುವರಿಸೋಣ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮುರಳಿಧರ ಪ್ರಭು ಮಾತನಾಡಿದರು. ಈ ವೇಳೆ ಸಮಿತಿ ಸಂಚಾಲಕ ವಿಶ್ವನಾಥ ಶೀಗೇಹಳ್ಳಿ, ವಿಧಾನಪರಿಷತ್ ಮಾಜಿ ಸದಸ್ಯ ಶಾಂತಾರಾಮ ಸಿದ್ದಿ, ಹರಿಪ್ರಕಾಶ ಕೋಣೆಮನೆ, ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹರಿಪ್ರಕಾಶ, ಎಂ.ಜಿ. ಭಟ್, ಬೇಡ್ತಿ ಅಘನಾಶಿನಿ ಕೊಳ್ಳಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಸ್ಥಳೀಯರಾದ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಜನ್ನು, ಆನಂದ ಕವರಿ, ತಾಪಂ ಮಾಜಿ ಮಹೇಶ ಶೆಟ್ಟಿ, ಗ್ರಾಪಂ ಮಾಜಿ ಸದಸ್ಯರಾದ ಸುಜಯ ಶೆಟ್ಟಿ, ಗಣಪತಿ ನಾಯ್ಕ, ಶೇಖರ ನಾಯ್ಕ, ಬಿಜೆಪಿ ಗೋಕರ್ಣ ಮಂಡಲ ಅಧ್ಯಕ್ಷ ಗಣೇಶ ಪಂಡಿತ್ ಹಾಗೂ ವಿವಿಧ ಸಂಘಟನೆ, ಪಕ್ಷದ ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಪುಣ್ಯಾಶ್ರಮದಿಂದ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.