ಚಿಕ್ಕಾಡೆ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ದೇವಿರಮ್ಮನ ಹೆಬ್ಬಾರೆ ಉತ್ಸವ

| Published : Feb 12 2025, 12:34 AM IST

ಸಾರಾಂಶ

ವರ್ಷದಲ್ಲಿ ಒಂದು ದಿನ ಮಾತ್ರ ದೇವಸ್ಥಾನದ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡಲು ಅವಕಾಶ ನೀಡುವ ದೇವಿರಮ್ಮನ ಹೆಬ್ಬಾರೆ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವಿ ದರ್ಶನಪಡೆದು ಬಾಳೆಹಣ್ಣಿನ ಗೊನೆಯನ್ನು ದೇವಿಗೆ ಅರ್ಪಿಸುವ ಮೂಲಕ ಪುನೀತರಾದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಗ್ರಾಮದೇವತೆ ದೇವಿರಮ್ಮನ ಹೆಬ್ಬಾರೆ ಉತ್ಸವವು ಸೋಮವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.

ವರ್ಷದಲ್ಲಿ ಒಂದು ದಿನ ಮಾತ್ರ ದೇವಸ್ಥಾನದ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡಲು ಅವಕಾಶ ನೀಡುವ ದೇವಿರಮ್ಮನ ಹೆಬ್ಬಾರೆ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವಿ ದರ್ಶನಪಡೆದು ಬಾಳೆಹಣ್ಣಿನ ಗೊನೆಯನ್ನು ದೇವಿಗೆ ಅರ್ಪಿಸುವ ಮೂಲಕ ಪುನೀತರಾದರು.

ಉತ್ಸವದ ಅಂಗವಾಗಿ ಗ್ರಾಮದಲ್ಲಿ ಸಂಪೂರ್ಣ ಎಲ್ಲಾ ಬೀದಿಗಳಲ್ಲೊ ರಂಗೋಲಿ ಹಾಕಿ ಬಗೆಬಗೆಯ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಪುರೋಹಿತರು, ಎಲ್ಲಾ ಸಮುದಾಯದ ಯಜಮಾನರು, ಮುಖಂಡರ ನೇತೃತ್ವದಲ್ಲಿ ದೇವಸ್ಥಾನದ ಬಾಗಿಲು ತೆಗೆದು ದೇವಿಗೆ ಅಭಿಷೇಕ ಸಲ್ಲಿಸಿ ಪೂಜೆಸಲ್ಲಿಸಿದರು.

ಉತ್ಸವದಲ್ಲಿ ಗಂಡು ಹೆಬ್ಬಾರೆ ಮತ್ತು ಹೆಣ್ಣು ಹೆಬ್ಬಾರೆಯನ್ನು ಮೆರವಣಿಗೆ ಮೂಲಕ ತಂದು ಗ್ರಾಮದ ಹೊರವಲಯದ ಚಿಕ್ಕಬೆಟ್ಟದಲ್ಲಿ ದಲಿತರು ಹೆಬ್ಬಾರೆಯನ್ನು ಕಟ್ಟಿ ಹೂಲಂಕಾರಗೊಸಿದರು. ಬಳಿಕ ಕುಂತಿಬೆಟ್ಟದ ತಪ್ಪಲ್ಲಿನ ಹೆಬ್ಬಾರೆ ಹಿರೇಮರಳಿ ಗ್ರಾಮಸ್ಥರಿಂದ ಮೊದಲು ಪೂಜೆಸಲ್ಲಿಸಿದರು.

ನಂತರ ದೇವೇಗೌಡನಕೊಪ್ಪಲು ಬಳಿ ಇರುವ ದೇವಿರಮ್ಮನ ತಂಗಿಯಾದ ಕಾಚೇನಹಳ್ಳಿ ಅಮ್ಮನವರ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಪೂಜೆಸಲ್ಲಿಸಿ ನಂತರ ರಾತ್ರಿ ವೇಳಗೆ ಅದ್ದೂರಿ ಮೆರವಣಿಗೆ ಮೂಲಕ ಚಿಕ್ಕಾಡೆ ಗ್ರಾಮಕ್ಕೆ ಕರೆತಂದರು. ಚಿಕ್ಕಾಡೆ ಗ್ರಾಮದಲ್ಲಿ ಎರಡು ಗಂಟೆಗೂ ಅಧಿಕ ಕಾಲ ಹೆಬ್ಬಾರೆ ಉತ್ಸವವನ್ನು ಮೆರವಣಿಗೆ ನಡೆಸಿದರು. ಮೆರವಣಿಗೆ ಮೇಳೆ ಪಟಾಕಿ, ಮದ್ದುಗಳನ್ನು ಸಿಡಿಸಿ ಸಂಭ್ರಮಿಸಿದರು. ನಂತರ ಗ್ರಾಮದ ಹೆಬ್ಬಾರೆ ಉತ್ಸವವನ್ನು ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಇರಿಸಲಾಯಿತು. ಭಕ್ತರು ಅಲ್ಲಿ ದೇವರಿಗೆ ಪೂಜೆಸಲ್ಲಿಸಿ ಬಾಯಿಬೀಗ ಹಾಕಿಸಿಕೊಂಡರು.

ಮಂಗಳವಾರ ಬೆಳಗ್ಗೆ ದೇವರನ್ನು ಮತ್ತೆ ಮೆರವಣಿಗೆ ಮೂಲಕ ದೇವಿರಮ್ಮನ ದೇವಸ್ಥಾನದ ಬಳಿಕೆ ತೆಗೆದುಕೊಂಡು ಬಂದಿ ಇರಿಸಿ ಪೂಜೆಸಲ್ಲಿಸಿದರು. ಸಂಜೆ ವೇಳೆ ಗ್ರಾಮಸ್ಥರ, ಯಜಮಾನರ ನೇತೃತ್ವದಲ್ಲಿ ದೇವಸ್ಥಾನದ ಬಾಗಿಲು ಮುಚ್ಚುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು.

ದೇವಿರಮ್ಮನ ಜಾತ್ರಾ ಮಹೋತ್ಸವದಲ್ಲಿ ಅಕ್ಕಪಕ್ಕದ ಗ್ರಾಮಸೇರಿದಂತೆ ವಿವಿಧಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನಪಡೆದು ಪುನೀತರಾದರು.