ಹಾವೇರಿ ನಗರದ ಈದ್ಗಾ ಮೈದಾನದಲ್ಲಿ ಪವಿತ್ರ ರಂಜಾನ್ ಆಚರಣೆ ನಿಮಿತ್ತ ಮುಸಲ್ಮಾನ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹಾವೇರಿ: ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯದ ಸಂಕೇತವಾಗಿರುವ ಪವಿತ್ರ ರಂಜಾನ್ ಹಬ್ಬವನ್ನು ಜಿಲ್ಲಾದ್ಯಂತ ಶನಿವಾರ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ನಗರದ ಅಂಜುಮನ್ ಏ-ಇಸ್ಲಾಂ ಕಮಿಟಿಯ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಗ್ಗೆಯಿಂದ ಹಿರಿಯರು ಕಿರಿಯರೆನ್ನದೇ ಎಲ್ಲಾ ವರ್ಗದ ವಯೋಮಾನದವರು ಹೊಸ ಬಟ್ಟೆ ಧರಿಸಿ ತಂಡೋಪ ತಂಡವಾಗಿ ಆಗಮಿಸಿ ಬೆಳಗ್ಗೆ 10ರಿಂದ 11 ಗಂಟೆಯವರೆಗೆ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಾಮೂಹಿಕ ಪ್ರಾರ್ಥನೆ ನಂತರ ಮೈದಾನದಿಂದ ಹೊರಬರುತ್ತಿದ್ದಂತೆಯೇ ಎದುರಾದ ಹಿಂದೂ ಬಾಂಧವರಿಗೆ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.ನಂತರ ಸಂಪ್ರದಾಯದಂತೆ ಸಾಮೂಹಿಕ ಪ್ರಾರ್ಥನೆ ಬಳಿಕ ತಮ್ಮ ಆದಾಯದಲ್ಲಿ ಒಂದಿಷ್ಟು ಭಾಗದ ದವಸ, ಧಾನ್ಯ, ಹಣ್ಣು-ಹಂಪಲು, ನಾಣ್ಯಗಳನ್ನು ದಾನ ಮಾಡುವುದರ ಮೂಲಕ ಅಲ್ಲಾಹನ ಕೃಪೆಗೆ ಪಾತ್ರರಾದರು. ಅತ್ತ ಮನೆಯಲ್ಲಿ ಮುಸ್ಲಿಂ ಮಹಿಳೆಯರು ಹೊಸ ಬಟ್ಟೆಗಳನ್ನು ತೊಟ್ಟು, ಬಂಧು ಬಾಂಧವರನ್ನು ಭೇಟಿ ಮಾಡಿ ಸಿಹಿ ಹಂಚುವುದರ ಮೂಲಕ ಹಬ್ಬಕ್ಕೆ ಹೊಸ ಮೆರುಗನ್ನು ತಂದರು. ಇದೇ ವೇಳೆಯಲ್ಲಿ ಸುರುಕುರುಮಾ, ಪಾನಕ ಸೇರಿದಂತೆ ಸಿಹಿ ಅಡುಗೆಯನ್ನು ತಯಾರಿಸಿ ಪರಸ್ಪರ ಹಂಚುವ ಮೂಲಕ ರಂಜಾನ್ ಹಬ್ಬವನ್ನು ಸಂಭ್ರಮಿಸಿದರು.ಹಬ್ಬದ ವಿಶೇಷ: ರಂಜಾನ್ ಮಾಸದ ಕೊನೆ ದಿನವನ್ನು ಈದ್ ಉಲ್-ಫಿತರ್ ಎಂದು ಆಚರಿಸಲಾಗುತ್ತಿದ್ದು, 29 ರಿಂದ 30 ದಿನಗಳ ಕಾಲ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಇಸ್ಲಾಂ ಧರ್ಮದ ಅನುಯಾಯಿಗಳು ಉಪವಾಸ ವ್ರತ ಕೈಗೊಂಡಿದ್ದರು. ಶಾಂತಿ, ಸಹನೆ ಮತ್ತು ಸಹಬಾಳ್ವೆಯ ಪ್ರತೀಕವಾಗಿರುವ ಈದ್-ಉಲ್-ಫಿತರ್‌ನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಆಚರಿಸಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಆತ್ಮ ಪರಿಶುದ್ಧತೆಯ ತತ್ವ ಸಾರುವ ವಿಶೇಷ ಹಬ್ಬ: ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಧರ್ಮಗುರುಗಳಾದ ಮನ್‌ಮಸೂತಿ ಮುಫ್ತಿ ನಿಹಾಲುದ್ದೀನ್, ಹಜರತ್ ಮೌಲಾಲಿ ಮುಲ್ಲಾ, ದಾದಾಪೀರ ಮುಲ್ಲಾ ಮಾತನಾಡಿ, ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿ, ನಿಷ್ಠೆಯಿಂದ ಆಚರಿಸುವ ಪವಿತ್ರ ಹಬ್ಬ ಇದಾಗಿದೆ. ಈ ಹಬ್ಬದಲ್ಲಿ ಇಡೀ ತಿಂಗಳು ಕಟ್ಟುನಿಟ್ಟಾಗಿ ಉಪವಾಸ ಆಚರಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಶಾಂತಿ, ಸೌಹಾರ್ದತೆಯ ಸಂಕೇತವಾಗಿರುವ ರಂಜಾನ್ ಪವಿತ್ರತೆಯ ಸಂಕೇತ. ಆತ್ಮ ಪರಿಶುದ್ಧತೆಯ ತತ್ವ ಸಾರುವ ವಿಶೇಷ ಹಬ್ಬವಾಗಿದೆ ಎಂದು ತಿಳಿಸಿದರು. ಕಳೆದ ವರ್ಷದಂತೆ ಈ ವರ್ಷವೂ ಸಕಾಲಕ್ಕೆ ಉತ್ತಮ ಮಳೆಯಾಗಿ, ರೈತರು ಸಮೃದ್ಧ ಫಸಲುಗಳನ್ನು ಬೆಳೆಯುವಂತಾಗಲಿ. ಜನ ಜಾನುವಾರುಗಳು ಆರೋಗ್ಯದಿಂದ ಇರುವಂತೆ ಸಾಮೂಹಿಕವಾಗಿ ಪ್ರಾರ್ಥಿಸಿದರು. ಗಣ್ಯರಿಂದ ಮುಸ್ಲಿಂ ಬಾಂಧವರಿಗೆ ಶುಭಾಶಯ: ರಂಜಾನ ಹಬ್ಬದ ಪ್ರಯುಕ್ತ ಧರ್ಮಗುರುಗಳು ಜಿಲ್ಲೆಯ ಮಠಾಧೀಶರು, ಸಚಿವರು, ಸಂಸದರು, ಶಾಸಕರು, ವಿಪ ಸದಸ್ಯರು, ಜಿಲ್ಲಾಡಳಿತದ ಅಧಿಕಾರಿಗಳು, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಹೀಗೆ ಸಮಸ್ತ ಜನಪ್ರತಿನಿಧಿಗಳು, ಅಧಿಕಾರಿ ಸಿಬ್ಬಂದಿಗಳು ಎಲ್ಲರಿಗೂ ಸಾಮೂಹಿಕವಾಗಿ ಶುಭಾಶಯ ಕೋರಿದರು. ಈದ್ಗಾ ಮೈದಾನಕ್ಕೆ ಆಗಮಿಸಿದ ಶಾಸಕ ರುದ್ರಪ್ಪ ಲಮಾಣಿ, ಪ್ರಾಧಿಕಾರ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ. ಮೈದೂರ ಸೇರಿದಂತೆ ಪಕ್ಷಾತೀತ ರಾಜಕೀಯ ಮುಖಂಡರು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯಗಳನ್ನು ಕೋರಿದರು. ಪ್ರಾರ್ಥನೆಯಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ್, ಉಪಾಧ್ಯಕ್ಷ ಇಮಾಮಹುಸೇನ ಬಾಲೆಬಾಯಿ, ಕಾರ್ಯದರ್ಶಿ ಮುಜಾಫರ ಕೊಟ್ಟಿಗೇರಿ, ಖಜಾಂಚಿ ಚಮನಶರೀಫ ಮುಲ್ಲಾ, ಕಮಿಟಿ ಸದಸ್ಯ ಜಮೀರ ಜಿಗರಿ, ಸಮಾಜದ ಮುಖಂಡರಾದ ಅನ್ವರ್ ಕಡೇಮನಿ, ನಾಸೀರಖಾನ ಪಠಾಣ, ನಜೀರ ಹುಸೇನ ನದಾಫ, ಬಾಬುಸಾಬ ಮೋಮಿನಗಾರ, ನಜೀರ್‌ಅಹ್ಮದ್ ಪಟೇಲ, ಅನ್ವರಸಾಬ ಕೊಟ್ಟಿಗೇರಿ, ಸಿ.ಎಸ್. ಹತ್ತಿಕಾಳ, ಸೈಯ್ಯದ್ ಬಿಲೋರಿ, ಉಸ್ಮಾನಸಾಬ ಪಟವೇಗಾರ, ಸುಲೇಮಾನ್ ಭಾಷಾ ಮೇಲ್ಮುರಿ, ಎಸ್.ಎ. ಪಠಾಣ, ಖಲೀಲಹ್ಮದ್ ಪಟವೇಗಾರ ಸೇರಿದಂತೆ 12 ಮಸೀದಿಗಳ ಗುರುಗಳು, ಅಂಜುಮನ್ ಕಮಿಟಿ ಪದಾಧಿಕಾರಿಗಳು ಹಾಗೂ ಸಮಸ್ತ ಮುಸಲ್ಮಾನ್ ಬಾಂಧವರು ಪಾಲ್ಗೊಂಡಿದ್ದರು.