ಭಗವತ್ ಪ್ರೇರಣೆಗೆ ಶ್ರದ್ಧೆ, ನಿಷ್ಠೆ ಬೇಕು: ಅಮರೇಶ್ವರ ಶ್ರೀ

| Published : Feb 23 2024, 01:52 AM IST

ಭಗವತ್ ಪ್ರೇರಣೆಗೆ ಶ್ರದ್ಧೆ, ನಿಷ್ಠೆ ಬೇಕು: ಅಮರೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ತಾಲೂಕಿನ ಬಾಡದಬೈಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ರಾಮೇಶ್ವರ ಹಾಗೂ ಬಸವಣ್ಣ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ವನ್ನು ನಂದಿಗುಡಿ ಮಠದ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಶರಣ ಪರಂಪರೆಯಲ್ಲಿ ಭಕ್ತಿಗೆ ವಿಶೇಷವಾದ ಅರ್ಥವಿದೆ. ಧ್ಯಾನ, ತಪಸ್ಸು, ಪೂಜೆಗಳಿಂದ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಶ್ರದ್ಧಾ-ಭಕ್ತಿಯಿಂದ ಮಾತ್ರ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ ಎಂದು ಜಡೆ ಹಿರೇಮಠದ ಘನ ಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಬುಧವಾರ ತಾಲೂಕಿನ ಬಾಡದಬೈಲು ಗ್ರಾಮದಲ್ಲಿ ಗ್ರಾಮಾಭಿವೃದ್ಧಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀರಾಮೇಶ್ವರ ಹಾಗೂ ಬಸವಣ್ಣ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇಂದಿನ ಕಲುಷಿತ ವಾತಾವರಣದಲ್ಲಿ ಅಧ್ಯಾತ್ಮದ ಅರಿವು ಹೊಂದುವುದು ಪ್ರತಿಯೊಬ್ಬರಿಗೂ ಮುಖ್ಯವಾಗಿದೆ. ಭಗವತ್ ಪ್ರೇರಣೆ ಲಭ್ಯವಾಗಬೇಕಾದರೆ ಶ್ರದ್ಧೆ, ನಿಷ್ಠೆ ಬೇಕು. ಧ್ಯಾನ, ತಪಸ್ಸು, ಪೂಜಾ ವಿಧಾನ ಧಾರ್ಮಿಕ ಚಟುವಟಿಕೆಯ ಒಂದು ಭಾಗ ಮಾತ್ರ. ದೇವಾಲಯಗಳ ನಿರ್ಮಾಣದಿಂದ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ ಎಂದ ಅವರು ಬಾಡದಬೈಲು ಗ್ರಾಮ ಸಮಾಜದಲ್ಲಿ ನೊಂದವರ ಬಾಳಿನಲ್ಲಿ ಬೆಳಕು ನೀಡುವ ಆದರ್ಶ ಗ್ರಾಮವಾಗಿ ಬೆಳೆಯಲಿ ಎಂದರು.

ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ.ರಾಮಪ್ಪ ಹೊಳೆಕೊಪ್ಪ ಆಶೀರ್ವಚನ ನೀಡಿ ಮಾತನಾಡಿ, ಭಕ್ತರಲ್ಲಿ ಧಾರ್ಮಿಕ ಚಿಂತನೆಯೊಂದಿಗೆ ಆಧ್ಯಾತ್ಮದ ಬೀಜ ಬಿತ್ತುವ ಕಾರ್ಯದಲ್ಲಿ ಮಠ ಮಾನ್ಯಗಳ ಪಾತ್ರ ಹಿರಿದು. ಈ ಮೂಲಕ ಸಮಾಜದ ಉನ್ನತಿಗೆ ಕಾರಣವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ದೇವರು, ದೈವತ್ವದ ಬಗ್ಗೆ ಹೆಚ್ಚಿನ ಒಲವು ಹೊಂದಬೇಕು ಎಂದು ಹೇಳಿದರು.

ನಂದಿಗುಡಿ ಮಠದ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರವೇ ಗಜಸೇನೆಯ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಹೆಚ್.ಗಣಪತಿ, ಮಾಜಿ ಸದಸ್ಯರಾದ ಜೆ. ಪ್ರಕಾಶ್, ಎಂ. ಮಾರ್ಯಪ್ಪ, ಪ್ರದೀಪ್, ತಿರುಪತಿ, ಸೈದಪ್ಪ ಗುತ್ತೇದಾರ್, ಶ್ರೀಧರ್ ಹುಲ್ತಿಕೊಪ್ಪ, ಮಂಜುನಾಥ್ ಓಲೇಕಾರ್, ಎ.ಜಿ.ನಾಯ್ಕ, ಇಂದೂಧರ ಕೆ. ಪಾಟೀಲ್, ಸಗೀರ್‌ ಅಹಮದ್, ಶಿವಪ್ರಸಾದ್, ಚಂದ್ರಶೇಖರ ಗೌಡ, ಗುರುನಾಥ ಭಟ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.