ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಭಕ್ತಾದಿಗಳು ವಾರಂತ್ಯದ ರಜೆ ಇದ್ದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು.ವಾರಂತ್ಯದ ದಿನಗಳಾದ ಶನಿವಾರ ಹಾಗೂ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ತಮ್ಮ ಹರಕೆ- ಕಾಣಿಕೆಗಳನ್ನು ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು.
ಭಾನುವಾರ ಮುಂಜಾನೆ ಮಹದೇಶ್ವರ ಸ್ವಾಮಿ ಮೂರ್ತಿಗೆ ಎಳನೀರಿನ ಅಭಿಷೇಕ, ಹಾಲು, ಪಂಚಾಮೃತ ಅಭಿಷೇಕ ಪೂಜೆ ನೆರವೇರಿತು. ನೈವೇದ್ಯ ಅರ್ಪಿಸಿದ ಬಳಿಕ ಮಹಾ ಮಂಗಳಾರತಿ ಮಾಡಲಾಯಿತು.ಉತ್ಸವಾದಿ ಸೇವೆಯಲ್ಲಿ ಭಾಗಿಯಾದ ಭಕ್ತರು:
ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಹರಕೆ ಹೊತ್ತ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆಯನ್ನು ಕೈಗೊಂಡಿದ್ದರು. ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ, ಬಸವ ವಾಹನ, ಹುಲಿ ವಾಹನ ರುದ್ರಾಕ್ಷಿ ಮಂಟಪ ಸೇವೆಗಳನ್ನು ಮಾಡುವ ಮೂಲಕ ತಮ್ಮ ಹರಕೆಯನ್ನು ಸಲ್ಲಿಸಿದರು. ಈ ವೇಳೆ ಭಕ್ತರು ಜಯಘೋಷವನ್ನು ಮೊಳಗಿಸಿದರು.540 ಟಿಕೆಟ್ ಬಿಕರಿ, ಚಿನ್ನದ ತೇರು ಎಳೆದು ದೈವಕೃಪೆಗೆ ಭಕ್ತರು:
ಚಿನ್ನದ ತೇರು ಎಳೆಸಲು ಹರಕೆ ಹೊತ್ತ ಭಕ್ತರು ವಾರಂತ್ಯದಲ್ಲಿ ದಾಖಲೆಯ ಟಿಕೆಟ್ ಖರೀದಿ ಮಾಡಿ ಚಿನ್ನದ ತೇರು ಎಳೆಸುವ ಮೂಲಕ ಮಾದಪ್ಪನ ಕೃಪೆಗೆ ಪಾತ್ರ ರಾಗಿದ್ದಾರೆ. ಇದೇ ಮೊದಲ ಬಾರಿಗೆ ವಾರಾಂತ್ಯದಲ್ಲಿ 540 ಟಿಕೆಟ್ ಖರೀದಿಯಾಗಿದ್ದು ಚಿನ್ನದ ತೇರಿನ ಟಿಕೆಟ್ ಬೃಹತ್ ಮಟ್ಟದಲ್ಲಿ ಖರೀದಿಯಾಗಿದೆ. ದಾಖಲೆ ಮೊತ್ತದಲ್ಲಿ ಹಣ ಪ್ರಾಧಿಕಾರಕ್ಕೆ ಹರಿದು ಬಂದಿದೆ.ಹರಿದು ಬಂದ ಜನ ಸಾಗರ:
ಕಾರ್ತಿಕ ಮಾಸದ ಪ್ರಯುಕ್ತ ಹಾಗೂ ಶನಿವಾರ, ಭಾನುವಾರ ರಜೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬೆಂಗಳೂರು, ರಾಮನಗರ, ಕನಕಪುರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ನಂಜನಗೂಡು, ತುಮಕೂರು, ಕೋಲಾರ ಹಾಗೂ ತಮಿಳುನಾಡು ರಾಜ್ಯದ ವಿವಿಧ ಗ್ರಾಮಗಳಿಂದ ಜನರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.ಇದಲ್ಲದೆ ನಂಜನಗೂಡು, ಗುಂಡ್ಲುಪೇಟೆ ಹಾಗೂ ಇನ್ನಿತರ ಕಡೆಗಳಿಂದ ಸಾವಿರಾರು ಮಲೆ ಮಹದೇಶ್ವರ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದಾರೆ.
ಪ್ರಾಧಿಕಾರದಿಂದ ಸಕಲ ವ್ಯವಸ್ಥೆ :ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ಭಕ್ತಾದಿಗಳ ಅನುಕೂಲಕ್ಕೆ ತಕ್ಕಂತೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ವಿಶೇಷಚೇತನರು ಹಾಗೂ ವಯೋವೃದ್ಧರಿಗೆ ರಾಜಗೋಪುರದ ಪ್ರತ್ಯೇಕ ಕ್ಯೂನಲ್ಲಿ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ನೂಕು ನುಗ್ಗಲು ಆಗದಂತೆ ಪ್ರತ್ಯೇಕವಾಗಿ ಅತಿಥಿ ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಪ್ರಾಧಿಕಾರದ ವತಿಯಿಂದ ಕುಡಿಯುವ ನೀರು, ವಿಶೇಷ ದಾಸೋಹ, ನೆರಳಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
;Resize=(128,128))
;Resize=(128,128))