ಸಾರಾಂಶ
ಕುಷ್ಟಗಿ:
ತಾಲೂಕಿನ ದೊಣ್ಣೆಗುಡ್ಡ ಗ್ರಾಮದ ದುರ್ಗಾದೇವಿ ಜಾತ್ರೆ ಭಾನುವಾರ ಹಾಗೂ ಸೋಮವಾರ ಸಡಗರ-ಸಂಭ್ರಮದಿಂದ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು.ದೇವಿಯ ಭಕ್ತರು ವಿವಿಧ ರೀತಿಯಲ್ಲಿ ಸಿಂಗರಿಸಿದ ಎತ್ತು ಚಕ್ಕಡಿಗಳ ಮೂಲಕ ಕುಟುಂಬ ಸಮೇತರಾಗಿ ಜಾತ್ರೆಗೆ ಬರುತ್ತಿದ್ದ ದೃಶ್ಯ ಕಂಡುಬಂದಿತು. ಜಾತ್ರೆಗೆ ಬಂದವರೆಲ್ಲ ದೇವಸ್ಥಾನದ ಬಳಿ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಸೇವೆ ನಡೆಸಿದರು. ಉಧೋ ಉಧೋ ಎನ್ನುವ ಮೂಲಕ ಭಕ್ತಿ ಮೆರೆದರು.
ಪ್ರಾಣಿಬಲಿ ನೀಡಿದ ಭಕ್ತರು:ದುರ್ಗಾದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಕುಂಬಳಕಾಯಿ ಒಡೆಯುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಗ್ರಾಮದ ಸುತ್ತಲೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಕಟ್ಟೆಚ್ಚರ ವಹಿಸಿದ್ದರು. ಬ್ಯಾರಿಕೇಡ ಹಾಕುವ ಮೂಲಕ ವಾಹನಗಳಲ್ಲಿ ಏರಿಕೊಂಡು ಬರುವಂತಹ ಪ್ರಾಣಿಗಳನ್ನು ತಪಾಸಣೆ ಮಾಡಿ ಒಳಗಡೆ ಬಾರದಂತೆ ವಾಪಸ್ ಕಳಿಸುತ್ತಿರುವ ದೃಶ್ಯಗಳು ಕಂಡು ಬಂದವು. ಆದರೂ ಸಹಿತ ಪೊಲೀಸ್ ಅಧಿಕಾರಿಗಳ ಕಣ್ಣು ತಪ್ಪಿಸುವ ಮೂಲಕ ದೇವಸ್ಥಾನದ ಆವರಣ ಹೊರತುಪಡಿಸಿ ದೂರದ ಜಮೀನುಗಳಲ್ಲಿ ಹಾಕಲಾಗಿರುವ ಪೆಂಡಾಲ ಟೆಂಟುಗಳಲ್ಲಿ ಕೆಲ ಭಕ್ತರು ಕುರಿ, ಟಗರು, ಮೇಕೆ ಬಲಿ ಕೊಡುತ್ತಿರುವುದು ಹಾಗೂ ಸಂಬಂಧಿಕರಿಗೆ ಬಾಡೂಟ ಬಡಿಸುತ್ತಿರುವುದು ಕಂಡು ಬಂದಿತು.
ನವಲಳ್ಳಿಯಲ್ಲಿ ದುರ್ಗಾದೇವಿ ಜಾತ್ರೆ:ತಾಲೂಕಿನ ನವಲಳ್ಳಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಉಚ್ಚಾಯ ಮೆರವಣಿಗೆ, ಮಹಾರಥೋತ್ಸವ ಜರುಗಿತು. ಜಾತ್ರಾ ಅಂಗವಾಗಿ ಬೆಳಗ್ಗೆ ದೇವಸ್ಥಾನದಲ್ಲಿ ಧಾರ್ಮಿಕ ವಿವಿಧ ಪೂಜಾ ವಿಧಾನಗಳು, ಗಂಗೆಪೂಜೆ, ಅಗ್ನಿಕುಂಡ, ದೇವಿಯ ಮೂರ್ತಿಪೂಜೆ ಕಾರ್ಯಕ್ರಮಗಳು ನಡೆದವು.ಹಂಚಿನಾಳ ಗ್ರಾಮಸ್ಥರು ಅಗ್ಗವನ್ನು ಮೆರವಣಿಗೆ ಮೂಲಕ ಕರೆತಂದರು. ನಂತರ ನಡೆದ ಮಹಾರಥೋತ್ಸವಕ್ಕೆ ಅಂಕಲಿಮಠದ ವೀರಭದ್ರೇಶ್ವರ ಸ್ವಾಮೀಜಿ, ತಾವರಗೇರಾ ಕುಮಾರ ಸಿದ್ಧಾರೂಢ ಸ್ವಾಮೀಜಿ ಚಾಲನೆ ನೀಡಿದರು. ಭಕ್ತರು ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ದೇವಸ್ಥಾನದಿಂದ ಪಾದಕಟ್ಟೆ ವರೆಗೆ ರಥೋತ್ಸವ ಎಳೆದು ಭಕ್ತಿ ಸೇವೆ ಸಲ್ಲಿಸಿದರು ಸಹಸ್ರರು ಭಕ್ತರು, ಜನಪ್ರತಿನಿಧಿಗಳು ದೇವಿ ದರ್ಶನ ಪಡೆದರು.