ಚಿಕ್ಕಮಗಳೂರುಕಾಫಿನಾಡಿನ ಆರಾಧ್ಯ ದೇವತೆ, ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಚಂದ್ರದ್ರೋಣ ಪರ್ವತ ಶ್ರೇಣಿ ಯಲ್ಲಿರುವ ಐತಿಹಾಸಿಕ ಬಿಂಡಿಗ ದೇವಿರಮ್ಮನ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದುಬಂದಿದ್ದಾರೆ.

ದೇವಿ ದರ್ಶನದ ಪಡೆಯಲು ಮುಂಜಾನೆಯಿಂದಲೇ ಭಕ್ತರ ದಂಡು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾಫಿನಾಡಿನ ಆರಾಧ್ಯ ದೇವತೆ, ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಚಂದ್ರದ್ರೋಣ ಪರ್ವತ ಶ್ರೇಣಿ ಯಲ್ಲಿರುವ ಐತಿಹಾಸಿಕ ಬಿಂಡಿಗ ದೇವಿರಮ್ಮನ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದುಬಂದಿದ್ದಾರೆ.

ನರಕ ಚತುರ್ದಶಿ ಶುಭದಿನವಾದ ಶನಿವಾರ ದೇವಿ ದರ್ಶನ ಪಡೆಯಲು ಮುಂಜಾನೆಯಿಂದಲೇ ಭಕ್ತರು 3800 ಅಡಿ ಎತ್ತರದ ಕಡಿದಾದ ಬೆಟ್ಟವನ್ನು ಏರಲಾರಂಭಿಸಿದ್ದು, ಬೆಟ್ಟದ ಹಾದಿಯುದ್ದಕ್ಕೂ ಭಕ್ತರ ದಂಡೇ ಕಂಡುಬಂತು. ವರ್ಷದಲ್ಲಿ ಒಮ್ಮೆ ಮಾತ್ರ ಬೆಟ್ಟದ ಮೇಲಿರುವ ದೇವಾಲಯದಲ್ಲಿ ಭಕ್ತರಿಗೆ ದರ್ಶನ ನೀಡುವ ದೇವಿರಮ್ಮನ ದರ್ಶನ ಪಡೆಯಲು ಭಕ್ತರು ಅಪಾರ ಉತ್ಸಾಹ ದಿಂದ ಆಗಮಿಸಿದ್ದಾರೆ. ಇಷ್ಟಾರ್ಥ ಸಿದ್ಧಿಗಾಗಿ ಸಾವಿರಾರು ಭಕ್ತರು ಬರಿಗಾಲಲ್ಲೇ ಕಲ್ಲು-ಮುಳ್ಳುಗಳಿಂದ ಕೂಡಿದ ಕಿರಿದಾದ ಹಾಗೂ ದುರ್ಗಮ ಹಾದಿಯಲ್ಲಿ ಸಾಗುತ್ತಾ ಬೆಟ್ಟ ಏರುತ್ತಿದ್ದಾರೆ. ಕಡಿದಾದ ಇಳಿಜಾರು ಪ್ರದೇಶಗಳಲ್ಲಿ ಬೆಟ್ಟ ಹತ್ತಲು ಭಕ್ತರು ಹರಸಾಹಸ ಪಡುತ್ತಿರುವ ದೃಶ್ಯಗಳು ಕಂಡುಬಂದವು. ಮಂಜು ಮುಸುಕಿದ ವಾತಾವರಣದಲ್ಲಿ ಭಕ್ತರು ಬೆಟ್ಟ ಏರುತ್ತಿರುವ ಮನಮೋಹಕ ದೃಶ್ಯಗಳು ಕಂಡು ಬಂದವು.

ಈ ಬಾರಿ ಭಕ್ತರ ಅನುಕೂಲ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಎರಡು ದಿನಗಳ ಕಾಲ ಬೆಟ್ಟ ಏರಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಶನಿವಾರ ಬೆಳಗ್ಗೆ 8 ಗಂಟೆಯಿಂದ ಭಕ್ತರಿಗೆ ಬೆಟ್ಟ ಹತ್ತಲು ಅನುಮತಿ ನೀಡಿದ್ದು, ಹಗಲಿನಲ್ಲಿ ಮಾತ್ರ ಬೆಟ್ಟ ಏರಲು ಅವಕಾಶವಿದೆ. ರಾತ್ರಿ ವೇಳೆ ಬೆಟ್ಟ ಏರುವುದನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. 10 ವರ್ಷ ಮೇಲ್ಪಟ್ಟವರು ಹಾಗೂ 60 ವರ್ಷದೊಳಗಿನವರಿಗೆ ಮಾತ್ರ ಬೆಟ್ಟ ಏರಲು ಅವಕಾಶ ಕಲ್ಪಿಸಲಾಗಿದೆ. ಶನಿವಾರ ಒಂದೇ ದಿನ ಸುಮಾರು 50 ಸಾವಿರ ಭಕ್ತರು ಬೆಟ್ಟ ಹತ್ತುವ ನಿರೀಕ್ಷೆಯಿದ್ದು, ಭಾನುವಾರವೂ ದೇವಿ ದರ್ಶನಕ್ಕೆ ಅವಕಾಶ ಇರಲಿದೆ. ಈ ಬಾರಿ ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯನ್ನು ಜಿಲ್ಲಾಡಳಿತ ಹೊಂದಿದೆ.3 ಮಾರ್ಗಗಳಲ್ಲಿ ಬೆಟ್ಟ ಏರಲು ವ್ಯವಸ್ಥೆ

ಬಿಂಡಿಗ, ಅರಿಶಿನಗುಪ್ಪೆ ಹಾಗೂ ಮಾಣಿಕ್ಯಧಾರಾ ಮಾರ್ಗಗಳಿಂದ ಭಕ್ತರು ಬೆಟ್ಟ ಏರಲು ವ್ಯವಸ್ಥೆ ಮಾಡಲಾಗಿದೆ. ಮಾಣಿಕ್ಯ ಧಾರಾ ಭಾಗದಿಂದ ಬೆಟ್ಟ ಇಳಿದು, ಅಲ್ಲಿಂದ ದೇವಿರಮ್ಮನ ಬೆಟ್ಟ ಏರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಭಕ್ತರ ಸುರಕ್ಷತೆಗೆ ಕಡಿದಾದ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ರೋಪ್‌ಗಳನ್ನು ಅಳವಡಿಸಲಾಗಿದೆ. ಮಾಣಿಕ್ಯಧಾರಾ ಮಾರ್ಗದಲ್ಲಿ ಬೆಟ್ಟ ಏರಲು ಮತ್ತು ಇಳಿಯಲು ಎರಡೂ ಕಡೆ ರೋಪ್ ವ್ಯವಸ್ಥೆ ಮಾಡಲಾಗಿದೆ. ಬಿಂಡಿಗ ಭಾಗದಲ್ಲಿ ಬೆಟ್ಟದ ಅರ್ಧದಷ್ಟು ಪ್ರದೇಶ ದಲ್ಲಿ ರೋಪ್ ಅಳವಡಿಸಲಾಗಿದ್ದು, ಅಗತ್ಯ ಸ್ಥಳಗಳಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿದೆ.10 ರಕ್ಷಣಾ ತಂಡಗಳಿಂದ ನಿಗಾ

ಜಾತ್ರೆ ಸಂದರ್ಭದಲ್ಲಿ ಯಾವುದೇ ಅವಘಡ ಸಂಭವಿಸದಂತೆ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದ್ದು, ಅಗ್ನಿಶಾಮಕ ದಳ ದಿಂದ 10 ರಕ್ಷಣಾ ತಂಡಗಳನ್ನು ರಚಿಸಲಾಗಿದೆ. 10 ಅಧಿಕಾರಿಗಳು ಹಾಗೂ 80ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಿಂಡಿಗ ಭಾಗದಲ್ಲಿ ಆರು ರಕ್ಷಣಾ ತಂಡಗಳು, ಮಾಣಿಕ್ಯಧಾರಾ ಮತ್ತು ಅರಿಶಿನಗುಪ್ಪೆ ಮಾರ್ಗಗಳಲ್ಲಿ ತಲಾ ಎರಡು ತಂಡಗಳನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ತಂಡಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.ಪ್ರತಿಯೊಂದು ತಂಡದಲ್ಲೂ ಪೊಲೀಸ್, ಅಗ್ನಿಶಾಮಕ, ಅರಣ್ಯ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಡಿದಾದ ಪ್ರದೇಶಗಳಲ್ಲಿ ರೋಪ್, ಸ್ಟ್ರೆಚರ್ ಹಾಗೂ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ. ತಂಡಗಳಿಗೆ ವಾಕಿಟಾಕಿ ವ್ಯವಸ್ಥೆ ಕಲ್ಪಿಸಿದ್ದು, ತುರ್ತು ಪರಿಸ್ಥಿತಿಯಲ್ಲಿ ನಿಯಂತ್ರಣ ಕೊಠಡಿಯೊಂದಿಗೆ ತಕ್ಷಣ ಸಂಪರ್ಕ ಸಾಧಿಸಲು ಅನುಕೂಲ ಮಾಡಲಾಗಿದೆ.ಕಳೆದ ವರ್ಷ ಬೆಟ್ಟ ಏರುವ ಹಿಂದಿನ ದಿನ ಮಳೆಯಾಗಿದ್ದರಿಂದ ಹಾದಿ ಜಾರುವಂತಾಗಿತ್ತು. ಆದರೆ ಈ ಬಾರಿ ಮಳೆಯಿಲ್ಲದ ಕಾರಣ ಕಳೆದ ವರ್ಷಕ್ಕೆ ಹೋಲಿಸಿದರೆ ಜಾರಿಕೆ ಕಡಿಮೆಯಾಗಿದೆ. ಈ ಬಾರಿ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಮುನ್ನೆ ಚ್ಚರಿಕಾ ಅಣಕು ಕಾರ್ಯಾಚರಣೆ (ಮಾಕ್‌ಡ್ರಿಲ್) ನಡೆಸಿದ್ದು, ಇದರಿಂದ ಹಲವು ಸುರಕ್ಷತಾ ಕ್ರಮ ಕೈಗೊಳ್ಳಲು ಸಾಧ್ಯ ವಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಕ್ತರು ಆತುರಪಡದೆ, ತಮಾಷೆಗಾಗಿ ಅಪಾಯಕಾರಿ ಸಾಹಸಗಳಿಗೆ ಮುಂದಾಗದೆ, ಸರತಿ ಸಾಲಿನಲ್ಲಿ ನಿಧಾನವಾಗಿ ಹಾಗೂ ಎಚ್ಚರಿಕೆಯಿಂದ ಬೆಟ್ಟ ಏರಬೇಕು ಎಂದು ಮನವಿ ಮಾಡಿದ್ದಾರೆ. ಚಿಕ್ಕಮಗಳೂರು ಅಗ್ನಿಶಾಮಕ ದಳದ ಮುಖ್ಯಸ್ಥ ಪ್ರವೀಣ್ ಮಾತನಾಡಿ, ಈ ಬಾರಿ 3 ಮಾರ್ಗಗಳಲ್ಲೂ ಅಗತ್ಯ ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗಿದೆ. ತುರ್ತು ಪರಿಸ್ಥಿತಿ ಎದುರಿಸಲು ಎಲ್ಲ ತಂಡಗಳು ಸನ್ನದ್ಧ ವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.20 ಸಾವಿರಕ್ಕೂ ಅಧಿಕ ವಾಹನಗಳ ಪಾರ್ಕಿಂಗ್ ವ್ಯವಸ್ಥೆ

ಜಾತ್ರೆಗೆ ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ದೇವಸ್ಥಾನ ವ್ಯವ ಸ್ಥಾಪನಾ ಸಮಿತಿ ಮೂಲಸೌಕರ್ಯ ಕಲ್ಪಿಸಿವೆ. 20 ಸಾವಿರಕ್ಕೂ ಅಧಿಕ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡ ಲಾಗಿದೆ. ವಾಹನ ದಟ್ಟಣೆ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಭಕ್ತರಿಗೆ ಕುಡಿಯುವ ನೀರು, ಸಾರಿಗೆಗಾಗಿ ವಿಶೇಷ ಬಸ್‌ಗಳು ಹಾಗೂ ತುರ್ತು ಸಂದರ್ಭಗಳಲ್ಲಿ ನೆರವಾಗಲು ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಟ್ಟದ ಸುತ್ತಮುತ್ತ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ತೀವ್ರ ನಿಗಾ ವಹಿಸಲಾಗಿದೆ.-- ಬಾಕ್ಸ್‌---

ಮೈಸೂರು ಅರಸರ ಮನೆಯಿಂದ ಮಡಲಕ್ಕಿ ಸೇವೆ

ಪುರಾಣ ಪ್ರಸಿದ್ಧ ದೇವಿರಮ್ಮನ ಕ್ಷೇತ್ರಕ್ಕೆ ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯಿದೆ. ಮೈಸೂರು ಅರಮನೆಯಿಂದ ಇಂದಿಗೂ ದೇವಿಗೆ ಮಡಲಕ್ಕಿ ಸೇವೆ ಸಲ್ಲಿಸುವ ಸಂಪ್ರದಾಯ ಮುಂದುವರಿದಿದೆ. ಈ ಪರಂಪರೆ ಜಾತ್ರೆ ಧಾರ್ಮಿಕ ಮಹತ್ವ ವನ್ನು ಮತ್ತಷ್ಟು ಹೆಚ್ಚಿಸಿದೆ. ವರ್ಷದಿಂದ ವರ್ಷಕ್ಕೆ ದೇವಿರಮ್ಮನ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಈ ಬಾರಿಯೂ ಬೆಟ್ಟದ ತುಂಬೆಲ್ಲಾ ಭಕ್ತರ ಸಮೂಹವೇ ಕಂಡುಬರುತ್ತಿದೆ.

--- ಬಾಕ್ಸ್‌---

ಬರಿಗಾಲಿನಲ್ಲಿ ಬೆಟ್ಟ ಏರಿದ ನಟಿ ಅಮೂಲ್ಯ

ನಟಿ ಅಮೂಲ್ಯ ಕೂಡ ಬರಿಗಾಲಿನಲ್ಲಿ ದೇವಿರಮ್ಮನ ಬೆಟ್ಟ ಏರಿ ದೇವಿ ದರ್ಶನ ಪಡೆದರು. ಅವರಿಗೆ ಪಲ್ಲವಿ ಸಿ.ಟಿ. ರವಿ ಸಾಥ್ ನೀಡಿದರು. ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ತಹಸೀಲ್ದಾರ್ ರೇಷ್ಮಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ್, ದೇವಿರಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಧರ್ಮದರ್ಶಿ ಮಂಡಳಿ ಸದಸ್ಯರು ಮತ್ತು ಇಂಡಿಕಾ ಮನೆ ಗ್ರಾಮದ ಗ್ರಾಮಸ್ಥರು ಜಾತ್ರೆಯ ವ್ಯವಸ್ಥೆಗಳಲ್ಲಿ ಭಾಗವಹಿಸಿದ್ದರು.

(ಫೋಟೋ ಗಳನ್ನು ಬಳಸಿ)