ಸಾರಾಂಶ
ಶ್ರಾವಣ ಮಾಸದ ಕಡೆಯ ದಿನವಾದ ಮಂಗಳವಾರ ಸುಕ್ಷೇತ್ರ ಸೂಳೆಬಾವಿ ಮಹಾಲಕ್ಷ್ಮೀ ದೇವಿಯ ಉಡಿ ತುಂಬುವ ಕಾರ್ಯಕ್ರಮ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಶ್ರಾವಣ ಮಾಸದ ಕಡೆಯ ದಿನವಾದ ಮಂಗಳವಾರ ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಯ ಉಡಿ ತುಂಬುವ ಕಾರ್ಯಕ್ರಮ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು.ಸೂಳೆಬಾವಿ ಶ್ರೀ ಮಹಾಲಕ್ಷ್ಮೀ ದೇವಿಗೆ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಉಡಿ ತುಂಬುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು. ಶ್ರಾವಣ ಮಾಸದ ಅಮವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಹೂವಿನ ಅಲಂಕಾರ ಮಾಡಿ ಆಕರ್ಷಕಗೊಳಿಸಲಾಗಿತ್ತು. ದೇವಿಗೆ ಹೂಬತ್ತಿಯ ವಿಶೇಷ ಅಲಂಕಾರ ಮಾಡಲಾಗಿತ್ತು.
ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ದೇವಿಯ ಉಡಿ ತುಂಬಲು ಸರದಿ ಸಾಲಿನಲ್ಲಿ ನಿಂತಿದ್ದರು. ಇಡೀ ದಿನ ಭಕ್ತರು ದೇವಸ್ಥಾನಕ್ಕೆ ಬಂದು ದರ್ಶನ ಪಡೆದರು. ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ವಿಶೇಷ ದರ್ಶನ ಹಾಗೂ ಮುಖ ದರ್ಶನದ ವ್ಯವಸ್ಥೆಯೂ ಇತ್ತು.ಮಂಗಳವಾರ ಕೊನೆಯ ದಿನದಂದು ಮಹಾಲಕ್ಷ್ಮೀ ದೇವಿಯ ಪಲ್ಲಕ್ಕಿ ಉತ್ಸವ ಮಾಡಲಾಯಿತು. ದೇವಸ್ಥಾನಕ್ಕೆ ಪಲ್ಲಕ್ಕಿಯ ಪ್ರದಕ್ಷಿಣೆ ಹಾಕಲಾಯಿತು. ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಹಾಗೂ ಅರ್ಚಕರು ಸೇರಿದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಗ್ರಾಮದ ಜಾಂಜ್ ಪಥಕ, ಢೋಲ್ ತಾಷಾ, ಭಜನೆ ಸೇರಿದಂತೆ ವಿವಿಧ ವಾದ್ಯಮೇಳಗಳು ಮೆರಗು ತಂದವು. ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಲ್ಲಿಯೂ ಭಕ್ತರು ದೇವಿಯ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದು ವಿಶೇಷವಾಗಿತ್ತು. ಭಕ್ತರಿಗಾಗಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.