ಶಿವನಾಮ ಸ್ಮರಣೆಯಲ್ಲಿ ಮಿಂದ ಭಕ್ತಸಮೂಹ

| Published : Mar 09 2024, 01:31 AM IST

ಸಾರಾಂಶ

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಜಾಗರಣೆ ಹಿನ್ನೆಲೆಯಲ್ಲಿ ರಾತ್ರಿಯಿಡೀ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬಳ್ಳಾರಿ: ಶಿವನನ್ನು ಪೂಜಿಸಿ ಪುನೀತಗೊಳ್ಳುವ ಮಹಾಶಿವರಾತ್ರಿ ಆಚರಣೆ ಜಿಲ್ಲಾದ್ಯಂತ ಶ್ರದ್ಧಾಭಕ್ತಿಯಿಂದ ಶುಕ್ರವಾರ ನೆರವೇರಿತು.ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಜಾಗರಣೆ ಹಿನ್ನೆಲೆಯಲ್ಲಿ ರಾತ್ರಿಯಿಡೀ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಮಹಾಶಿವರಾತ್ರಿ ಅಂಗವಾಗಿ ನಗರದ ಕೋಟೆ ಮಲ್ಲೇಶ್ವರಸ್ವಾಮಿ ದೇವಸ್ಥಾನ, ಗ್ರಹಂ ರಸ್ತೆಯ ಮಲ್ಲಿಕಾರ್ಜುನಸ್ವಾಮಿ, ತೇರುಬೀದಿಯ ನೀಲಕಂಠೇಶ್ವರ ಸ್ವಾಮಿ, ಪಾರ್ವತಿನಗರದ ಅನಾದಿಲಿಂಗೇಶ್ವರ, ಕಪ್ಪಗಲ್ ರಸ್ತೆಯ ಮದ್ದಾನೇಶ್ವರ, ಬಸವೇಶ್ವರ ನಗರದ ಸಂಗಮೇಶ್ವರ, ಬೆಂಗಳೂರು ರಸ್ತೆಯಲ್ಲಿ ನಗರೇಶ್ವರಸ್ವಾಮಿ, ಬ್ರಾಹ್ಮಣ ಬೀದಿಯ ಶಿವೇಶ್ವರ, ನಗರ ಹೊರವಲಯದ ಬಾಲಾಜಿ ಕ್ಯಾಂಪ್‌ನಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಅಮರೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಹಾಗೂ ವಿವಿಧ ಹೋಮ ಹವನಗಳು ನಡೆದವು.

ಶಿವನಲಿಂಗಕ್ಕೆ ಜಲಾಭಿಷೇಕ, ರುದ್ರಾಭಿಷೇಕ, ಬಿಲ್ವಪತ್ರೆ ಅರ್ಪಣೆ, ಗಣಹೋಮ, ನವಗ್ರಹ ಹೋಮ, ಶಾಂತಿ ಹೋಮಗಳು ಜರುಗಿದವು. ಶಿವನ ಲಿಂಗಗಳನ್ನು ವಿವಿಧ ಪುಷ್ಪ, ಪತ್ರೆಗಳಿಂದ ಅಲಂಕಾರ ಮಾಡಲಾಗಿತ್ತು.ಇಲ್ಲಿನ ಪಾರ್ವತಿನಗರದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಶಿವಸ್ತ್ರೋತ್ರ ಮಾಡಿದರು. ಸಂಜೆ ವೇಳೆ ಈಶ್ವರ ಲಿಂಗಗಳ ಮೆರವಣಿಗೆ ನಡೆಯಿತು.ಬೆಳಗ್ಗೆ 5 ಗಂಟೆಯಿಂದಲೇ ದೇವಸ್ಥಾನಗಳಲ್ಲಿ ದರ್ಶನಕ್ಕೆ ಅವಕಾಶವಿತ್ತು. ಬೆಳಗಿನ ಜಾವದಿಂದಲೇ ಭಕ್ತರು ಶಿವನ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ಜಾಗರಣೆ ಪ್ರಯುಕ್ತ ದೇವಸ್ಥಾನಗಳಲ್ಲಿ ಭಜನೆ, ಶಿವಸಹಸ್ರನಾಮ ಪಠಣ, ಪುರಾಣ ಪ್ರವಚನ, ಸಂಕೀರ್ತನೆ ಸೇರಿದಂತೆ ನಾನಾ ಧಾರ್ಮಿಕ ನೆಲೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.ನಗರದ ವಿವಿಧೆಡೆ ಸಂಘ ಸಂಸ್ಥೆಗಳು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಪಾರ್ವತಿ ನಗರದ ಅನಾದಿ ಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ 11 ದಿನಗಳ ಶರಣಬಸವೇಶ್ವರ ಪುರಾಣ ಪ್ರವಚನ ಮಹಾಶಿವರಾತ್ರಿ ದಿನವಾದ ಶುಕ್ರವಾರ ಮಹಾಮಂಗಳಗೊಂಡಿತು.ಹೂವು- ಹಣ್ಣುಗಳ ಭರ್ಜರಿ ಖರೀದಿ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಜಿಲ್ಲೆಯ ಶಿವಾಲಯಗಳಲ್ಲಿ ಗುರುವಾರವೇ ಸಿದ್ಧತೆ ನಡೆದಿತ್ತು. ಸಾವಿರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಬರುವ ಭಕ್ತರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಸಂಜೆ ವೇಳೆ ಮನೆಯಲ್ಲಿ ಜರುಗುವ ಪೂಜಾ ವಿಧಿ ವಿಧಾನಗಳಿಗೆ ಹೂವು, ಕಾಯಿ, ವಿವಿಧ ಬಗೆಯ ಹಣ್ಣುಗಳ ಖರೀದಿ ಪ್ರಕ್ರಿಯೆ ಕಂಡುಬಂತು. ಇಲ್ಲಿನ ಕನಕ ದುರ್ಗಮ್ಮ ದೇವಸ್ಥಾನ ಬಳಿಯ ಮೈದಾನದಲ್ಲಿ ಹೂವು, ಹಣ್ಣು, ಬಿಲ್ವಪತ್ರೆ, ಉತ್ತರಾಯಣ ಕಡ್ಡಿ ಮತ್ತಿತರ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು.