ದೇವೀರಮ್ಮ ಜಾತ್ರೆಗೆ ಭಕ್ತ ಸಾಗರ

| Published : Oct 20 2025, 01:02 AM IST

ಸಾರಾಂಶ

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗಾ ದೇವೀರಮ್ಮ ಜಾತ್ರಾ ಮಹೋತ್ಸವಕ್ಕೆ ಮಳೆಯ ನಡುವೆಯೂ ಭಾನುವಾರ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗಾ ದೇವೀರಮ್ಮ ಜಾತ್ರಾ ಮಹೋತ್ಸವಕ್ಕೆ ಮಳೆಯ ನಡುವೆಯೂ ಭಾನುವಾರ ಚಾಲನೆ ನೀಡಲಾಯಿತು. ಸಮುದ್ರಮಟ್ಟದಿಂದ 3,800 ಅಡಿ ಎತ್ತರದಲ್ಲಿರುವ, ವರ್ಷದಲ್ಲಿ ಒಮ್ಮೆ ಮಾತ್ರ ಭಕ್ತರಿಗೆ ಬೆಟ್ಟದ ತುದಿಯಲ್ಲಿ ದರ್ಶನ ನೀಡುವ ಬಿಂಡಿಗಾ ದೇವಿರಮ್ಮ ಜಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಬೆಟ್ಟದಲ್ಲಿ ಎರಡು ದಿನ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ. ಮೊದಲ ದಿನವಾದ ಭಾನುವಾರ ಸಂಜೆ ವೇಳೆಗೆ 50,000 ಭಕ್ತರು ಬೆಟ್ಟ ಏರಿದ್ದಾರೆ ಎಂದು ಅಂದಾಜಿಸಲಾಗಿದೆ. ಸೋಮವಾರವೂ ಬೆಟ್ಟ ಏರಲು ಅವಕಾಶ ನೀಡಲಾಗಿದೆ.

ಮಂಗಳವಾರದಂದು ಫಲಾಹಾರಸ್ವಾಮಿ ಮಠದಿಂದ ಪರಂಪರೆಯಂತೆ ಮಠಕ್ಕೆ ಸೇರಿದ ಹತ್ತಾರು ಹಳ್ಳಿಯ ಸ್ಥಳೀಯ ಭಕ್ತರು ಒಟ್ಟುಗೂಡಿ ದೇವಿಯ ಬೆಟ್ಟವನ್ನೇರಿ ಹಗಲಿಡಿ ಪೂಜಾ ಕೈಂಕರ್ಯ ನೆರವೇರಿಸಿ, ಸಂಜೆ ಮರಿ ದೀಪ ಹಚ್ಚಿ ಹಿಂದಿರುಗಲಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಈ ಭಾಗದಲ್ಲಿ ಮಳೆ ಬೀಳುತ್ತಿದ್ದು, ಮಳೆಯನ್ನೂ ಲೆಕ್ಕಿಸದೆ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಭಕ್ತರಿಗೆ ಬೆಟ್ಟ ಏರಲು ಅನುಕೂಲವಾಗುವಂತೆ ಹಲವಡೆ ಹಗ್ಗಗಳನ್ನು ಕಟ್ಟಲಾಗಿದೆ.

ರಾಜ್ಯದ ಪ್ರಸಿದ್ಧ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಬರುವ ಮುಳ್ಳಯ್ಯನ ಗಿರಿ, ಬಾಬಾಬುಡನ್ ಗಿರಿ ಮತ್ತು ದೇವಿರಮ್ಮ ಬೆಟ್ಟ ಪಶ್ಚಿಮಘಟ್ಟ ಗಿರಿಶ್ರೇಣಿಯಲ್ಲಿರುವ ಪ್ರಮುಖ ಮೂರು ಪ್ರವಾಸಿ ತಾಣಗಳೆಂದು ಪ್ರಸಿದ್ಧವಾಗಿದೆ. ಇವುಗಳಲ್ಲಿ ಮುಳ್ಳಯ್ಯನ ಗಿರಿ, ಬಾಬಾಬುಡನ್ ಗಿರಿಗೆ ವರ್ಷವೀಡಿ ಪ್ರವಾಸಿಗರು ಆಗಮಿಸುತ್ತಾರೆ. ದೇವಿರಮ್ಮನ ಬೆಟ್ಟ ಭಕ್ತರಿಂದ ಕಳೆಗಟ್ಟುವುದು ವರ್ಷಕೆ ಒಮ್ಮೆ, ದೀಪಾವಳಿ ಸಂದರ್ಭದಲ್ಲಿ ಮಾತ್ರ. ರಾಜ್ಯದ ನಾನಾ ಕಡೆಗಳಿಂದ ಇಲ್ಲಿಗೆ ಬರುವ ಲಕ್ಷಾಂತರ ಭಕ್ತರು ಕಡಿದಾದ ಬೆಟ್ಟವನ್ನೇರಿ ದೇವಿಯ ದರ್ಶನ ಪಡೆಯುವುದು ಪ್ರತೀತಿ.