ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶ್ರೀ ವೇಂಕಟೇಶ್ವರ ಸ್ವಾಮಿಯ 32ನೇ ವರ್ಷದ ವೈಕುಂಠ ಏಕಾದಶಿಯ ಪ್ರಯುಕ್ತ ದೇವಾಲಯದಲ್ಲಿ ಮಂಗಳವಾರ ಕೊರೆಯುವ ಚಳಿಯಲ್ಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀ ವೇಂಕಟೇಶ್ವರನ ದರ್ಶನ ಪಡೆದು ಪುನೀತರಾದರು.
ಕಡೂರು: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶ್ರೀ ವೇಂಕಟೇಶ್ವರ ಸ್ವಾಮಿಯ 32ನೇ ವರ್ಷದ ವೈಕುಂಠ ಏಕಾದಶಿಯ ಪ್ರಯುಕ್ತ ದೇವಾಲಯದಲ್ಲಿ ಮಂಗಳವಾರ ಕೊರೆಯುವ ಚಳಿಯಲ್ಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀ ವೇಂಕಟೇಶ್ವರನ ದರ್ಶನ ಪಡೆದು ಪುನೀತರಾದರು.ಬೆಳಿಗ್ಗೆ ಶ್ರೀ ಸ್ವಾಮಿಯವರಿಗೆ ಕ್ಷೀರಾಭಿಷೇಕ, ಪಂಚದ್ರವ್ಯಗಳ ಅಭಿಷೇಕ, ನಂತರ ಅರಿಶಿನದ ಅಲಂಕಾರದ ಸೇವೆ ನೆರವೇರಿಸಿ ರಜತ ಕವಚ ಸಮರ್ಪಿಸಿ ವಿಶೇಷ ಹೂವಿನ ಅಲಂಕಾರ ಸೇವೆ ನೆರವೇರಿಸಲಾಯಿತು. ಪ್ರಧಾನ ಅರ್ಚಕರಾದ ವಿದ್ವಾನ್ ಅರುಣ್ ಕಶ್ಯಪ್ ಮತ್ತು ವೆಂಕಟೇಶ್ ನೇತೃತ್ವದಲ್ಲಿ ಸೂಕ್ತ ಪಾರಾಯಣ, ವಿಷ್ಣುಸಹಸ್ರನಾಮ, ತುಳಸಿ ಸಹಸ್ರನಾಮಾರ್ಚನೆಯೊಂದಿಗೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು. ದೇವಸ್ಥಾನಕ್ಕೆ ಬಂದಂತಹ ಭಕ್ತರಿಗೆ ಸಮಿತಿಯಿಂದ ಸ್ವಾಮಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ಅವಕಾಶ ಕಲ್ಪಿಸಿಕೊಡಲಾಗಿತ್ತು. ದೇವಾಲಯದಲ್ಲಿ ಸ್ಥಾಪಿಸಿದ್ದ ಶ್ರೀದೇವಿ ,ಭೂದೇವಿ ಸಹಿತ ವಿಗ್ರಹಗಳ ವೈಕುಂಠದ್ವಾರವನ್ನು ಭಕ್ತರು ಪ್ರವೇಶಿಸಿ ಶ್ರದ್ಧಾಭಕ್ತಿಯಿಂದ ಸರತಿ ಸಾಲಿನಲ್ಲಿ ನಿಂತು ಶ್ರೀ ಸ್ವಾಮಿಯ ದರ್ಶನ ಪಡೆದರು. ದೇವಾಲಯದ ಆಡಳಿತ ಮಂಡಳಿಯ ಟ್ರಸ್ಟ್ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಟ್ರಸ್ಟಿಗಳಾದ ಡಿ.ಪ್ರಶಾಂತ್, ಸಲಹಾ ಸಮಿತಿ ಸದಸ್ಯರುಗಳಾದ ಭಂಡಾರಿ ಶ್ರೀನಿವಾಸ್, ಡಿ.ರಾಜೇಶ್,ಕೆ.ಜಿ.ಶ್ರೀನಿವಾಸಮೂರ್ತಿ, ವಿನಯ್ ದಂಡಾವತಿ, ಎನ್. ಎಚ್.ನಂಜುಂಡಸ್ವಾಮಿ, ವೆಂಕಟೇಶ್ವರುಲು, ಟಿ.ಆರ್.ರೇಣುಕಪ್ಪ, ಹೊ.ರಾ.ಕೃಷ್ಣಕುಮಾರ್ ಮತ್ತಿತರರಿದ್ದರು.