ಸಾರಾಂಶ
ಶಿರಸಿ: ಹಿಂದೂಗಳ ಪವಿತ್ರ ಹಬ್ಬಗಳಲ್ಲೊಂದಾದ ಗೌರಿ- ಗಣೇಶ ಹಬ್ಬಕ್ಕೆ ಈಗಾಗಲೇ ಸಡಗರ, ಸಂಭ್ರಮದ ತಯಾರಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರಾರಂಭವಾಗಿದ್ದು, ಗಣೇಶನ ಮೂರ್ತಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ಗುಡಿಗಾರರು ನಿರತರಾಗಿದ್ದಾರೆ.ಗಣೇಶ ಚತುರ್ಥಿ ಹಬ್ಬದಲ್ಲಿ ವಿವಿಧ ರೀತಿಯ ವಿವಿಧ ಆಕಾರದ ಗಣಪತಿಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಭರ್ಜರಿಯಾಗಿ ಸಿಂಗರಿಸಿದ ವೇದಿಕೆಯಲ್ಲಿ ವಿರಾಜಮಾನವಾಗಿ ಕುಳಿತ ಗಣಪನನ್ನು ನೋಡಲು ದೂರದ ಊರುಗಳಿಂದಲೂ ಶಿರಸಿಗೆ ಜನರು ಬರುತ್ತಾರೆ.
ಈಗಾಗಲೇ ಶಿರಸಿಯಲ್ಲಿರುವ ೨೦ಕ್ಕೂ ಅಧಿಕ ಗುಡಿಗಾರರು ಗಣಪತಿ ಮೂರ್ತಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಕಳೆದ ಮೂರು ತಿಂಗಳ ಹಿಂದೆಯೇ ಸಿದ್ದಾಪುರ ತಾಲೂಕಿನ ಹೆಗ್ಗರಣಿ ಸಮೀಪದ ಕುಂಬಾರಕುಳಿಯ ಜೇಡಿಮಣ್ಣನ್ನು ತಂದು ಅದನ್ನು ಹದ ಮಾಡಿ ಇಡಲಾಗುತ್ತದೆ. ನಂತರ ಮೂರ್ತಿ ತಯಾರಿಕೆಯಲ್ಲಿ ನಿರತರಾಗಿರುತ್ತಾರೆ. ಒಂದು ಮಧ್ಯಮ ಗಾತ್ರದ ಗಣೇಶ ಮೂರ್ತಿ ತಯಾರಿಕೆ ಕನಿಷ್ಠ ವೆಂದರೂ ಎರಡರಿಂದ ಮೂರು ದಿನ ಬೇಕಾಗುತ್ತದೆ ಎಂಬುದು ಶಿರಸಿಯ ಗುಡಿಗಾರರ ಮಾತಾಗಿದೆ.ಗಗನಕ್ಕೇರುತ್ತಿದೆ ದರಗಳು: ಗಣೇಶ ಮೂರ್ತಿ ತಯಾರಿಕೆ ಸಾಕಷ್ಟು ಖರ್ಚುಗಳಿವೆ. ಮಣ್ಣು, ಬಣ್ಣ, ಅಲಂಕಾರಿಕ ವಸ್ತುಗಳು ಸೇರಿದಂತೆ ಎಲ್ಲ ರೀತಿಯ ವಸ್ತುಗಳ ಬೆಲೆಗಳು ಗಗನಕ್ಕೇರಿದೆ. ಬೆಲೆಗಳು ಹೆಚ್ಚಾಗಿದೆ ಎಂದು ಗಣೇಶನಮೂರ್ತಿಗೆ ಬೆಲೆ ಏರಿಕೆ ಮಾಡಿದರೆ ಸಾರ್ವಜನಿಕರು ಖರೀದಿಸಲು ಬರುವುದಿಲ್ಲ. ಇದನ್ನು ಉದ್ಯಮ ಎಂದು ನೋಡದೇ ಪೂರ್ವಜರ ಕಾಲದಿಂದಲೂ ನಡೆಸಿಕೊಂಡು ಬಂದ ಪದ್ಧತಿ ಎಂದು ತಿಳಿದು ಮಾಡಬೇಕು ಎಂಬುದು ಗುಡಿಗಾರರ ಅಭಿಪ್ರಾಯವಾಗಿದೆ.ಭರ್ಜರಿ ಡಿಮ್ಯಾಂಡ್: ಶಿರಸಿಯಲ್ಲಿ ತಯಾರಾಗುವ ಗಣೇಶ ಮೂರ್ತಿಗಳಿಗೆ ರಾಜ್ಯದ ಹಲವೆಡೆ ಭರ್ಜರಿ ಬೇಡಿಕೆಯಿದೆ. ಶಿವಮೊಗ್ಗ, ಸಾಗರ, ಚಿತ್ರದುರ್ಗ, ದಾವಣಗೆರೆ, ಹಾವೇರಿ ಸೇರಿದಂತೆ ಹಲವು ಕಡೆ ಶಿರಸಿಯಿಂದಲೇ ಗಣೇಶ ಮೂರ್ತಿಗಳು ಹೋಗುತ್ತದೆ. ಈ ಮೊದಲು ಕೆಲಸಗಾರರು ಸಿಗುತ್ತಿದ್ದರು.ಇದೀಗ ಕೆಲಸಗಾರರೂ ಸಿಗುವುದಿಲ್ಲ. ಯುವಕರೂ ಅಷ್ಟೇನು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಈ ಮೊದಲು ಹಳ್ಳಿ ಭಾಗದಲ್ಲೂ ಗಣೇಶ ಮೂರ್ತಿ ತಯಾರಿಕೆ ಮಾಡುವವರಿದ್ದರು. ಇದೀಗ ಹಳ್ಳಿ ಭಾಗದಲ್ಲಿ ಗಣೇಶಮೂರ್ತಿ ತಯಾರಿಕೆ ಮಾಡುವವರ ಸಂಖ್ಯೆ ತೀರಾ ಇಳಿಮುಖವಾಗಿದೆ. ಹಾಗಾಗಿ ಹಳ್ಳಿಯ ಜನರೂ ಪೇಟೆಗೆ ಬಂದು ಗೌರಿ ಗಣೇಶ ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ನಗರದ ಕೃಷ್ಣ ಪೈನ್ ಆರ್ಟ್‌ನ ಸೂರ್ಯಕಾಂತ ಗುಡಿಗಾರ ಅಭಿಪ್ರಾಯ ತಿಳಿಸಿದ್ದಾರೆ.ಪರಿಸರಸ್ನೇಹಿ ಬಣ್ಣ ಬಳಕೆ: ಶಿರಸಿಯಲ್ಲಿ ತಯಾರಾಗುವ ಸಣ್ಣಗಾತ್ರದಿಂದ ಹಿಡಿದು ಬೃಹತ್ ಗಾತ್ರದ ಗಣೇಶ ಮೂರ್ತಿಗಳ ತಯಾರಿಕೆಯನ್ನು ಯಾವುದೇ ರಾಸಾಯನಿಕ ಬಳಸದೇ ಪರಿಸರಸ್ನೇಹಿಯಾಗಿ ಬಳಸುವುದು ವಿಶೇಷ. ಈ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿದರೂ ನೀರಿನಲ್ಲಿರುವ ಜಲಚರ ಪ್ರಾಣಿಗಳಿಗಾಗಲಿ ಅಥವಾ ನೀರಿಗಾಗಲಿ ಯಾವುದೇ ರೀತಿಯ ಸಮಸ್ಯೆ ಹಾಳಾಗುವುದಿಲ್ಲ ಎನ್ನುತ್ತಾರೆ ಗುಡಿಗಾರರು.ಇನ್ನೇನು ನಾಲ್ಕು ದಿನದಲ್ಲಿ ಪ್ರತಿ ಮನೆಗೆ ಬರಲು ಗೌರಿ ಗಣೇಶ ಮೂರ್ತಿಗಳು ಭರ್ಜರಿಯಾಗಿ ಸಿಂಗಾರಗೊಳ್ಳುತ್ತಿದ್ದು, ಸಾರ್ವಜನಿಕರು ಬೆಲೆ ಏರಿಕೆ ನಡೆಯುವೂ ಭರ್ಜರಿಯಾಗಿ ಚೌತಿ ಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಬಾಲಗಣಪ...ಹಿಂದೂ ಧರ್ಮದ ಹಲವು ಮಹನೀಯರ ಹೋರಾಟದ ಫಲವಾಗಿ ಅಯೋಧ್ಯಾದಲ್ಲಿ ಬಾಲ ಶ್ರೀರಾಮಚಂದ್ರನ ಪ್ರತಿಷ್ಠಾಪನೆಯಾದ ಹಿನ್ನೆಲೆ ಮೊದಲ ಗಣೇಶ ಚತುರ್ಥಿಯಲ್ಲಿ ಅದೇ ರೀತಿ ಹೋಲುವ ಬಾಲಗಣಪನ ಮೂರ್ತಿಯು ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದೆ.ತಂದೆಗೆ ಸಾಥ್ ನೀಡುತ್ತಿರುವ ಪುತ್ರರು...ಪೂರ್ವಜನರಿಂದ ಬಳುವಳಿಯಾಗಿ ಬಂದ ಮಣ್ಣಿನ ಗಣೇಶನ ಮೂರ್ತಿ ತಯಾರಿಕೆ ಮಾಡುತ್ತ ಬಂದಿದ್ದೇನೆ. ನನಗೆ ಈಗ ೭೮ ವರ್ಷ. ಮೂರ್ತಿ ತಯಾರಿಕೆಗೆ ಕಳೆದ ಮೂರು ತಿಂಗಳಿನಿಂದ ಮೂವರು ಪುತ್ರರಾದ ಹರೀಶ ಗುಡಿಗಾರ, ಗಿರೀಶ ಗುಡಿಗಾರ, ರಾಘವೇಂದ್ರ ಗುಡಿಗಾರ ಸಾಥ್ ನೀಡುತ್ತಿದ್ದಾರೆ. ೩೦೦ ಚಿಕ್ಕ ಮೂರ್ತಿ, ಸಾರ್ವಜನಿಕ ಗಣೇಶೋತ್ಸವದ ೨೫ ಮೂರ್ತಿ ತಯಾರಿಸುತ್ತಿದ್ದೇವೆ. ಇವಷ್ಟಕ್ಕೆ ೨೦- ೨೫ ಟನ್ ಜೇಡಿಮಣ್ಣು ಬೇಕಾಗಿದೆ ಎನ್ನುತ್ತಾರೆ ಹಿರಿಯ ಮೂರ್ತಿ ಕಲಾವಿದ ಸೂರ್ಯಕಾಂತ ಗುಡಿಗಾರ.