ತಾಲೂಕಿನ ಸುಪ್ರಸಿದ್ಧ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಯಲ್ಲಿ ಶನಿವಾರ ನೂರಾರು ಭಕ್ತರು ಕೆಂಡ ಸೇವೆ ಹರಕೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕಿನ ಸುಪ್ರಸಿದ್ಧ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಯಲ್ಲಿ ಶನಿವಾರ ನೂರಾರು ಭಕ್ತರು ಕೆಂಡ ಸೇವೆ ಹರಕೆ ಸಲ್ಲಿಸಿದರು.

ಸೋಡಿಗದ್ದೆ ಜಾತ್ರೆ ಶುಕ್ರವಾರ ಹಾಲ ಹಬ್ಬದೊಂದಿಗೆ ಆರಂಭಗೊಂಡಿತು. ಶನಿವಾರ ಸೋಡಿಗದ್ದೆಯಲ್ಲಿ ಭಕ್ತ ಸಾಗರವೇ ಹರಿದು ಬಂದಿತ್ತು.

ಜಾತ್ರೆಯಲ್ಲಿ ಚಿಕ್ಕ ಮಕ್ಕಳನ್ನು ತಾಯಂದಿರು ಹಾಗೂ ಪೂಜಾರಿಗಳು ಎತ್ತಿಕೊಂಡು ಕೆಂಡ ಹಾಯ್ದರು. ಕೆಂಡ ಸೇವೆಯಲ್ಲಿ ಶ್ರದ್ಧಾಭಕ್ತಿಯಿಂದ ಮಹಿಳೆಯರು, ಮಕ್ಕಳು, ಪುರುಷರು ಪಾಲ್ಗೊಂಡಿದ್ದರು. ಜಾತ್ರೆಯ 2ನೇ ದಿನವೂ ಕೂಡಾ ಭಕ್ತರ ದೊಡ್ಡ ಸರತಿ ಸಾಲು ನೆರೆದಿದ್ದು ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತರು ಮಹಾಸತಿ ದೇವಿಗೆ ಪೂಜೆ ಸಲ್ಲಿಸಿದರು. ಉಡುಪಿ ಜಿಲ್ಲೆಯಿಂದಲೂ ಭಕ್ತರು ಆಗಮಿಸಿ ದೇವಿಗೆ ಶ್ರದ್ಧಾಭಕ್ತಿ ಪೂರ್ಕಕವಾಗಿ ಪೂಜೆ, ಹರಕೆ ಸಲ್ಲಿಸಿದರು. ಕೆಲವರು ಗೊಂಬೆ ಒಪ್ಪಿಸುವುದರ ಮೂಲಕ ಹರಕೆ ಸಲ್ಲಿಸಿದರು. ಜಾತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೂಕುನುಗ್ಗಲು ತಡೆಯಲು ದೇವಸ್ಥಾನ ಅಭಿವೃದ್ಧಿ ಸಮಿತಿಯ ಸ್ವಯಂ ಸೇವಕರು, ಕಂದಾಯ ಇಲಾಖಾ ಸಿಬ್ಬಂದಿಗಳು, ಗ್ರಾಮಸ್ಥರು ಹಾಗೂ ಪೊಲೀಸರು ಸುಸಜ್ಜಿತ ಭದ್ರತಾ ವ್ಯವಸ್ಥೆ ಕಲಿಸಿದ್ದರು. ಭಾನುವಾರ, ಸೋಮವಾರ, ಮಂಗಳವಾರ ತುಲಾಭಾರ ಸೇವೆ ನಡೆಯಲಿದ್ದು, ಈಗಾಗಲೇ ನೂರಾರು ಭಕ್ತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಜ. ೩೧ರ ವರೆಗೂ ನಡೆಯಲಿರುವ ಸೋಡಿಗದ್ದೆ ಜಾತ್ರೆಗೆ ಸ್ಥಳೀಯರು ಮತ್ತು ಪರ ಊರಿನ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಸೋಡಿಗದ್ದೆ ಮಹಾಸತಿ ದೇವಿ ದರ್ಶನ ಪಡೆದ ಕಾಗೇರಿ:

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜಾತ್ರಾ ಪ್ರಯುಕ್ತ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.ಈ ಸಂದರ್ಭ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವಿದಾಸ ಮೊಗೇರ ಮತ್ತು ಪದಾಧಿಕಾರಿಗಳು ಸಂಸದರನ್ನು ಶಾಲು ಹೊದೆಸಿ ದೇವರ ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭ ಮಾಜಿ ಶಾಸಕ ಸುನೀಲ ನಾಯ್ಕ, ಪಶ್ಚಿಮಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಮುಖರಾದ ಸುಬ್ರಾಯ ದೇವಡಿಗ, ರಾಜೇಶ ನಾಯ್ಕ, ಶ್ರೀಕಾಂತ ನಾಯ್ಕ, ಹನುಮಂತ ನಾಯ್ಕ, ಶ್ರೀನಿವಾಸ ನಾಯ್ಕ, ಖೇದಾರ ಕೊಲ್ಲೆ ಮುಂತಾದವರಿದ್ದರು.