ಕರಾವಳಿ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಸಂಭ್ರಮ

| Published : Dec 25 2023, 01:32 AM IST

ಕರಾವಳಿ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ವೈಕುಂಠ ಏಕಾದಶಿಯ ಪ್ರಯುಕ್ತ ಕರಾವಳಿಯ ವಿವಿಧ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿಯ ದೇವಸ್ಥಾನಗಳಲ್ಲಿ ಶನಿವಾರ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯ ದೇವಸ್ಥಾನಗಳಿಗೆ ಭಕ್ತರ ದಂಡೇ ಆಗಮಿಸಿದ್ದು, ಸುಪ್ರಭಾತ ಸೇವೆಯಿುಂದ ಮೊದಲ್ಗೊಂಡು ದಿನಪೂರ್ತಿ ದೇವರ ದರ್ಶನಕ್ಕೆ ಆಗಮಿಸುತ್ತಿದ್ದರು.

ಮಂಗಳೂರಿನ ಡೊಂಗರಕೇರಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ವಿಶೇಷವಾಗಿ ಆಚರಿಸಲಾಯಿತು. ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆ ಮೂಲಕ ವೈಕುಂಠ ಏಕಾದಶಿ ಆಚರಣೆಯನ್ನು ಭಕ್ತಿಪ್ರದಾನವಾಗಿ ಸಂಭ್ರಮಿಸಲಾಯಿತು.

ವೈಕುಂಠ ಏಕಾದಶಿ ಪ್ರಯುಕ್ತ ದೇವಸ್ಥಾನದಲ್ಲಿ ನಾಮತ್ರಯ ಮಹಾಮಂತ್ರ ಜಪಯಜ್ಞ, ನಸುಕಿನ 5 ಗಂಟೆಗೆ ಸುಪ್ರಭಾತ ಸೇವೆ ಮೂಲಕ ಆರಂಭಿಸಿ 6 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಅಷ್ಟಾಕ್ಷರಿ ಮಂತ್ರಜಪ, ಸಾಮೂಹಿಕ ವಿಷ್ಣು ಸಹಸ್ರ ನಾಮ ಪಾರಾಯಣ, ನಾಮತ್ರಯ ಮಹಾಮಂತ್ರ ಜಪಯಜ್ಞ, ಉಪವಾಸ ವೃತಾಚರಣೆ ಕೈಗೊಂಡು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದರು.

ದೇವರ ಮುಂದೆ ದೀಪವನ್ನು ಬೆಳಗಿಸಿ ತುಳಸಿ ದಳ ಅರ್ಪಿಸಿದರು. ವಿಷ್ಣು ಸಹಸ್ರನಾಮ ಮತ್ತು ಶ್ರೀಹರಿ ಸ್ತೋತ್ರ ಪಠಿಸಿ ದೇವರ ಸೇವೆ ನೆರವೇರಿಸಿದರು.

ಒಳಲಂಕೆ ವೆಂಕಟರಮಣ ದೇವಸ್ಥಾನದಲ್ಲಿ ಮುಕ್ಕೋಟಿ ದ್ವಾದಶಿ-

ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮುಕ್ಕೋಟಿ ದ್ವಾದಶಿ ನಡೆಯಿತು.ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಾತಃಕಾಲ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನಡೆದು ಶ್ರೀ ದೇವರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಶಾಂಭವಿ ನದಿಯಲ್ಲಿ ನದಿ ಸ್ನಾನ ಬಳಿಕ ಪೇಟೆ ಸವಾರಿ, ದೇವಸ್ಥಾನದಲ್ಲಿ ಶ್ರೀ ಬಿಂದುಮಾದವ ದೇವರಿಗೆ ಅಭಿಷೇಕ, ಸಾನಿಧ್ಯ ಹವನ, ಮಧ್ಯಾಹ್ನ ಮಹಾ ನೈವೇದ್ಯ, ಮಂಗಳಾರತಿ, ಸಂಜೆ ಭೂರಿ ಸಮಾರಾಧನೆ, ರಾತ್ರಿ ಪೂಜೆ, ದೀಪಾರಾದನೆ, ಸಣ್ಣ ರಥೋತ್ಸವ, ದೇವ ದರ್ಶನ ಸಹಿತ ನಿತ್ಯೋತ್ಸವ, ಬಂಡಿ ಗರುಡೋತ್ಸವ, ವಸಂತ ಪೂಜೆ ಮೂಲಕ ಸಂಪನ್ನಗೊಂಡಿತು.