ಚಂದ್ರಗುತ್ತಿ ಜಾತ್ರೆ: ಭಕ್ತರಿಗೆ ಕಾಡಿವೆ ಮೂಲಸೌಕರ್ಯ ಕೊರತೆ

| Published : Mar 17 2024, 01:45 AM IST

ಚಂದ್ರಗುತ್ತಿ ಜಾತ್ರೆ: ಭಕ್ತರಿಗೆ ಕಾಡಿವೆ ಮೂಲಸೌಕರ್ಯ ಕೊರತೆ
Share this Article
  • FB
  • TW
  • Linkdin
  • Email

ಸಾರಾಂಶ

ವರ್ಷಕ್ಕೆ ಕೋಟ್ಯಂತರ ರು.ಗಳ ಆದಾಯ ತರುವ ಶ್ರೀ ರೇಣುಕಾಂಬೆ ನೆಲೆವೀಡಿನ ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ಈಗಾಗಲೇ ಅಂಬೆಯ ಜಾತ್ರೋತ್ಸವದ ಧಾರ್ಮಿಕ ವಿಧಿ-ವಿಧಾನಗಳಿಗೆ ಚಾಲನೆ ದೊರೆತಿದೆ. ಮಾ.೧೭ ಹೂವಿನ ರಥೋತ್ಸವ, ೧೮ರಂದು ಮಹಾರಥೋತ್ಸವ ಜರುಗಲಿದೆ. ಆದರೆ, ಇಲ್ಲಿನಭಕ್ತರಿಗೆ ಮೂಲಸೌಕರ್ಯಗಳು ಎನ್ನುವುದು ಗಗನಕುಸುಮ ಆಗಿವೆ. ಕುಡಿಯುವ ನೀರಿಗೆ ಹಾಹಾಕಾರ, ಬಯಲೇ ಶೌಚಾಲಯ, ಸ್ತ್ರೀಯರ ಸೀರೆ ಸ್ನಾನಗೃಹ, ದೇಹಬಾಧೆ ತೀರಿಸಿಕೊಳ್ಳಲು ಮರ-ಗಿಡಗಳ ಪೊದೆಗಳೋ, ಜಮೀನುಗಳೇ ಗತಿಯಾಗಿದೆ!

ಎಚ್.ಕೆ.ಬಿ. ಸ್ವಾಮಿ

ಕನ್ನಡಪ್ರಭ ವಾರ್ತೆ ಸೊರಬ

ವರ್ಷಕ್ಕೆ ಕೋಟ್ಯಂತರ ರು.ಗಳ ಆದಾಯ ತರುವ ಶ್ರೀ ರೇಣುಕಾಂಬೆ ನೆಲೆವೀಡಿನ ಚಂದ್ರಗುತ್ತಿಯಲ್ಲಿ ಭಕ್ತರಿಗೆ ಮೂಲಸೌಕರ್ಯಗಳು ಎನ್ನುವುದು ಗಗನಕುಸುಮ ಆಗಿವೆ. ಕುಡಿಯುವ ನೀರಿಗೆ ಹಾಹಾಕಾರ, ಬಯಲೇ ಶೌಚಾಲಯ, ಸ್ತ್ರೀಯರ ಸೀರೆ ಸ್ನಾನಗೃಹ, ದೇಹಬಾಧೆ ತೀರಿಸಿಕೊಳ್ಳಲು ಮರ-ಗಿಡಗಳ ಪೊದೆಗಳೋ, ಜಮೀನುಗಳೇ ಗತಿಯಾಗಿದೆ!

ಈಗಾಗಲೇ ಅಂಬೆಯ ಜಾತ್ರೋತ್ಸವದ ಧಾರ್ಮಿಕ ವಿಧಿ-ವಿಧಾನಗಳಿಗೆ ಚಾಲನೆ ದೊರೆತಿದೆ. ಮಾ.೧೭ ಹೂವಿನ ರಥೋತ್ಸವ, ೧೮ರಂದು ಮಹಾರಥೋತ್ಸವ ಜರುಗಲಿದೆ. ೧೯೮೪ರಲ್ಲಿ ಬೆತ್ತಲೆಸೇವೆ ಪದ್ಧತಿಯ ವಿರುದ್ಧ ಪ್ರಗತಿಪರ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ಜಾತ್ರೆ, ಸಾರ್ವಜನಿಕ ಧಾರ್ಮಿಕ ಆಚರಣೆಗಳ ನಿಷೇಧಿಸಲಾಗಿತ್ತು. ಏಳು ವರ್ಷಗಳಿಂದ ಬೆತ್ತಲೆಸೇವೆ ಹೊರತುಪಡಿಸಿ, ಇತರೆ ಧಾರ್ಮಿಕ ಆಚರಣೆಗಳಿಗೆ ಸಡಿಲಿಕೆ ನೀಡಲಾಗಿದೆ.

ಇದರಿಂದಾಗಿ ೩ ಕಿ.ಮೀ. ದೂರದ ವರದಾ ನದಿಯಲ್ಲಿ ಸ್ನಾನ ಮಾಡಿ, ಕಾಲ್ನಡಿಗೆಯಲ್ಲಿ ದೇವಿಯ ಗುಡಿಗೆ ಬಂದು ಸೇವೆ ಸಲ್ಲಿಸುವ, ಉರುಳುಸೇವೆ, ಉದ್ದಂಡ ಮತ್ತು ದೀಡು ನಮಸ್ಕಾರ, ಮೀಸಲುಬುತ್ತಿ ಸೇವೆ, ಕಿವಿ ಚುಚ್ಚುವುದು, ಕೇಶಮುಂಡನೆ, ಪಡ್ಲಿಗೆ ಪೂಜೆ ಆಚರಣೆಗಳನ್ನು ಮಾಡಬಹುದಾಗಿದೆ. ಆದರೆ, ಭಕ್ತರಿಗೆ ಮಾತ್ರ ಅಗತ್ಯ ಸೌಲಭ್ಯಗಳ ಕೊರತೆ ಕಾಡುತ್ತಿದೆ.

ಶಿವಮೊಗ್ಗ ಜಿಲ್ಲೆಯ ಮೂರು-ಎ ಗ್ರೇಡ್ ದೇವಸ್ಥಾನಗಳಲ್ಲಿ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನವೂ ಒಂದಾಗಿದೆ. ಕಾಣಿಕೆ ರೂಪದಲ್ಲಿ ವರ್ಷಕ್ಕೆ ₹೧ ರಿಂದ 2೨ ಕೋಟಿ ಆದಾಯವೂ ಇದೆ. ಭಕ್ತರಿಗೆ ಅಗತ್ಯ ಸವಲತ್ತು ಕಲ್ಪಿಸದೇ, ಕಾಣಿಕೆ ಹಣವೆಲ್ಲ ಮುಜುರಾಯಿ ಇಲಾಖೆ ಖಜಾನೆ ಸೇರುತ್ತಿದೆ. ಹೀಗಾಗಿ ದೇವಿಯ ದರ್ಶನಕ್ಕೆಂದು ಬರುವ ಭಕ್ತರು ರಥಬೀದಿಯಲ್ಲಿಯೇ ಉಳಿಯುತ್ತಾರೆ. ಗ್ರಾಮದ ಕಿರು ರಸ್ತೆ, ಕೃಷಿ ಜಮೀನುಗಳಲ್ಲಿ ದೇಹ ಬಾಧೆ ಮುಗಿಸುತ್ತಿದ್ದಾರೆ.

ರಥಬೀದಿ ಆಜುಬಾಜಿನಲ್ಲಿ ಅಡುಗೆ ತಯಾರಿಕೆ ಇನ್ನೂ ನಿಂತಿಲ್ಲ. ಬಯಲಿನಲ್ಲಿಯೇ ಸ್ನಾನ ಮಾಡುತ್ತಾರೆ. ಮಹಿಳೆಯರು ಬಟ್ಟೆ ಬದಲಾಯಿಸುವಾಗ ಸುತ್ತಲೂ ಸೀರೆ ಕಟ್ಟಿಕೊಳ್ಳುವುದು ಅನಿವಾರ್ಯವಾಗಿದೆ. ಇದು ಹಿಂದಿನ ಬೆತ್ತಲೆ ಸೇವೆಗಿಂತಲೂ ಹೀನಾಯ ಸ್ಥಿತಿ ಎಂದರೆ ತಪ್ಪಾಗದು.

- - - ಕೋಟ್ಸ್ ರೇಣುಕಾದೇವಿ ಕ್ಷೇತ್ರದಲ್ಲಿ ಕಲ್ಯಾಣ ಮಂಟಪ, ಪ್ರವಾಸಿ ಮಂದಿರ ಇದೆ. ದಿನಕ್ಕೆ ಬಾಡಿಗೆ ₹೬೫೦ ಪಡೆಯುತ್ತಾರೆ. ಆದರೆ ಯಾವುದೇ ವ್ಯವಸ್ಥೆ ಇಲ್ಲ. ಶೌಚಾಲಯಗಳಲ್ಲಿ ಶುಚಿತ್ವವಿಲ್ಲ. ಹಾಗಾಗಿ ಯಾತ್ರಾರ್ಥಿಗಳು ಇಲ್ಲಿ ತಂಗುವುದಿಲ್ಲ. ಗ್ರಾಮಾಭಿವೃದ್ಧಿಯ ವಿವಿಧ ಯೋಜನೆಗಳಿಗೆ ಗ್ರಾಪಂಗೆ ನೀಡುವ ಹಣವನ್ನು ಸ್ವಚ್ಛತೆಗೆ ವಿನಿಯೋಗಿಸುವ ಮೂಲಕ ಶುಚಿತ್ವ ಕಾಯ್ದುಕೊಳ್ಳಬಹುದು

- ರಾಮಪ್ಪ ಚಕ್ರಪಾಣಿ, ಹಿರೇಕೆರೂರು

ಚಂದ್ರಗುತ್ತಿ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿಸಲು ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಹೈಟೆಕ್ ಶೌಚಾಲಯ, ಉತ್ತಮ ವಸತಿ ಗೃಹ ಮೊದಲಾದವುಗಳನ್ನು ಮುಂದಿನ ಜಾತ್ರಾ ಸಮಯದಲ್ಲಾದರೂ ಪೂರೈಸಬೇಕು. ದೇವಸ್ಥಾನದ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಬೇಕು ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಇದು ಮುಜರಾಯಿ ಮತ್ತು ಪ್ರಾಚ್ಯವಸ್ತು ಇಲಾಖೆಗೆ ಸಂಬಂಧ ಪಡುತ್ತದೆಯೇ ಎನ್ನುವುದನ್ನು ತಿಳಿಸಿಲ್ಲ

– ಟಿ. ರಾಜಪ್ಪ ಮಾಸ್ತರ್ ಸೊರಬ, ಪ್ರಗತಿಪರ ಸಂಘಟನೆಗಳ ಹೋರಾಟಗಾರ ಕಾಣಿಕೆ ಹಣ ಅಭಿವೃದ್ಧಿ ಕಾರ್ಯಗಳಿಗೆ ಬಳಸುವ ಅಧಿಕಾರ ತಾಲೂಕು ಆಡಳಿತಕ್ಕಿಲ್ಲ. ಜಾತ್ರಾ ಸಮಯದಲ್ಲಿ ಭಕ್ತರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಗುಡ್ಡದ ಮೇಲೆ ಮತ್ತು ಕೆಳಗೆ ನೆರಳಿಗಾಗಿ ಶಾಮಿಯಾನ ಹಾಕಲಾಗಿದೆ. ಸಾಗರ ಎಸಿ ಆದೇಶದ ಮೇರೆಗೆ ಮೊಬೈಲ್ ಶೌಚಾಲಯ ಅಳವಡಿಸಲಾಗಿದೆ. ಅಲ್ಲದೇ, ವಾಹನ ಪಾರ್ಕಿಂಗ್, ಸ್ವಚ್ಛತೆ, ಬೀದಿದೀಪ ವ್ಯವಸ್ಥೆ ಮಾಡಲಾಗಿದೆ

– ವಿ.ಎಲ್. ಶಿವಪ್ರಸಾದ್, ಕಾರ್ಯನಿರ್ವಾಹಣಾಧಿಕಾರಿ, ಶ್ರೀ ರೇಣುಕಾಂಬಾ ದೇವಸ್ಥಾನ

- - - -೧೫ಕೆಪಿಸೊರಬ೦೧:

ಸೊರಬ ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬಾ ದೇವಿಯ ದೇವಸ್ಥಾನ.