ಪೀಠತ್ಯಾಗ ಮಾಡದಂತೆ ತರಳಬಾಳು ಶ್ರೀಗೆ ಭಕ್ತರ ಒತ್ತಾಯ

| Published : Aug 06 2024, 12:34 AM IST

ಪೀಠತ್ಯಾಗ ಮಾಡದಂತೆ ತರಳಬಾಳು ಶ್ರೀಗೆ ಭಕ್ತರ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಸಿರಿಗೆರೆಯಲ್ಲಿ ನಡೆದ ತರಳಬಾಳು ಮಠದ ಸದ್ಭಕ್ತರ ಸಮಾವೇಶದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಸಮಾಜದ ಪ್ರಮುಖರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಯಾವುದೇ ಕಾರಣದಿಂದಲೂ ಪೀಠತ್ಯಾಗಕ್ಕೆ ಮುಂದಾಗಬಾರದು. ಅವರು ತಮ್ಮ ಕೊನೆಯ ಉಸಿರು ಇರುವವರೆಗೂ ಪೀಠದಲ್ಲಿ ಸ್ವಾಮೀಜಿಯಾಗಿ ಮುಂದುವರೆಯಬೇಕು ಎಂದು ಭಕ್ತರು ಒಕ್ಕೊರಲ ಆಗ್ರಹ ಮಾಡಿದರು.

ಭಾನುವಾರ ದಾವಣಗೆರೆಯಲ್ಲಿ ನಡೆದ ಸದ್ಭಕ್ತರ ಸಮಾಲೋಚನ ಸಭೆಗೆ ಪ್ರತಿಯಾಗಿ ಇಂದು ಸಿರಿಗೆರೆಯ ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ದಾಸೋಹ ಮಂಟಪದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು, ನಮ್ಮ ಶ್ರೀಗಳು ಸಬಲರಿದ್ದಾರೆ, ಆರೋಗ್ಯವಂತರಾಗಿದ್ದಾರೆ, ಅಪಾರ ಪಾಂಡಿತ್ಯ ಉಳ್ಳವರಾಗಿದ್ದಾರೆ, ರೈತರ ಹಿತದೃಷ್ಟಿಯಿಂದ ಹಲವು ಕೆಲಸ ಮಾಡಿದ್ದಾರೆ, ಮೇಲಾಗಿ ಜಗತ್ತಿನ ಸುಮಾರು ೧೮೦ ಕ್ಕೂ ಹೆಚ್ಚು ದೇಶಗಳಲ್ಲಿ ಮಠದ ಕೀರ್ತಿ ಪತಾಕೆಯನ್ನು ಬೆಳಗಿದ್ದಾರೆ. ಅಂತಹವರು ಪೀಠತ್ಯಾಗ ಮಾಡದೇ ಸದಾ ಕಾಲವೂ ಸ್ವಾಮೀಜಿಯಾಗಿ ಮುಂದುವರೆಯಬೇಕು ಎಂದರು.

ದೇಶದ ಹಿತದೃಷ್ಟಿಯಿಂದ ಸಂವಿಧಾನಕ್ಕೆ ಹಲವು ಬಾರಿ ಸೂಕ್ತ ತಿದ್ದುಪಡಿಗಳನ್ನು ತರಲಾಗಿದೆ. ಒಂದು ಮಠದ ಸುವ್ಯವಸ್ಥಿತಿ ಆಡಳಿತಕ್ಕೆ ರಚನೆಯಾಗಿರುವ ಬೈಲಾಕ್ಕೂ ಕೂಡ ತಿದ್ದುಪಡಿ ತರುವುದರಲ್ಲಿ ಯಾವ ತಪ್ಪೂ ಇಲ್ಲ. ಅಂತಹ ತಿದ್ದುಪಡಿಗಳ ಅಗತ್ಯ ಇದ್ದರೆ ಕೂಡಲೇ ಶ್ರೀಗಳು ಆ ಕ್ರಮಕ್ಕೆ ಮುಂದಾಗಬೇಕು. ಅದಕ್ಕೆ ಇಡೀ ಸಮಾಜದ ಒಪ್ಪಿಗೆ ಇದೆ, ನಾವೆಲ್ಲರೂ ಶ್ರೀಗಳ ನಿಲುವನ್ನು ಬೆಂಬಲಿಸುತ್ತೇವೆ ಎಂದು ಘೋಷಣೆ ಮಾಡಿದರು.

ಸಮಾಜದಿಂದ ಎಲ್ಲವನ್ನೂ ಪಡೆದು ಉನ್ನತ ಸ್ಥಾನಗಳಲ್ಲಿರುವವರು ತಮ್ಮ ಅಸಮಾಧಾನಗಳನ್ನು ಗುರುಗಳ ಸನ್ನಿಧಿಗೆ ಬಂದು ನಿವೇದಿಸಿಕೊಳ್ಳಲಿ. ಅದು ಬಿಟ್ಟು ಹಾದಿಬೀದಿಯಲ್ಲಿ ಸಭೆ ಮಾಡುತ್ತಾ ಹೋಗುವುದರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು.

ತೋಳಹುಣಿಸೆ ವಿರುಪಣ್ಣ ಮಾತನಾಡಿ, ಶಾಮನೂರು ಶಿವಶಂಕರಪ್ಪನವರು ಬಾಪೂಜಿ ವಿದ್ಯಾಸಂಸ್ಥೆಯನ್ನು ತಮ್ಮ ವಶಕ್ಕೆ ಪಡೆದುಕೊಂಡ ಬಗೆ, ಅಣಬೇರು ರಾಜಣ್ಣ ಸಮಾಜದಲ್ಲಿ ಬೆಳೆದ ರೀತಿಯನ್ನು ಬಹಿರಂಗಪಡಿಸಲಿ. ನಮ್ಮ ಮಠ ಅಂತಾರಾಷ್ಟ್ರೀಯಮಟ್ಟಕ್ಕೆ ಬೆಳೆದಿದೆ. ಶ್ರೀಗಳು ಮಠ ಮತ್ತು ಸಮಾಜವನ್ನು ಸದೃಢವಾಗಿ ಕಟ್ಟಿದ್ದಾರೆ. ಅಂತಹವರ ವಿರುದ್ಧ ಮಾತನಾಡುವುದನ್ನು ಮೊದಲು ಬಿಡಲಿ ಎಂದರು.

ವಿಶ್ವಬಂಧು ಬ್ಯಾಂಕ್‌ ಅಧ್ಯಕ್ಷ ಚಿಕ್ಕಬೆನ್ನೂರು ಗೌಡ್ರ ತೀರ್ಥಪ್ಪ ಮಾತನಾಡಿ, ಮಠಕ್ಕೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಶ್ರೀಗಳಿಗೆ ಯಾವುದೇ ಅಡ್ಡಿ ಇಲ್ಲ. ಆದರೆ ಅವರು ಕೊನೆಯ ಉಸಿರು ಇರುವವರೆಗೂ ತರಳಬಾಳು ಪೀಠದಲ್ಲಿ ಮುಂದುವರೆಯಬೇಕು ಎಂದು ಕೋರಿದರು.

ಮೂರು ತಲೆಮಾರುಗಳಿಂದ ಸಮಾಜ ಮತ್ತು ಮಠದದಿಂದ ಅನುಕೂಲ ಪಡೆದುಕೊಂಡ ಅಣಬೇರು ರಾಜಣ್ಣ ಗುರುಗಳ ವಿರುದ್ಧವಾಗಿ ಮಾತನಾಡಿರುವುದು ಖಂಡನಾರ್ಹ ಎಂದು ದೊಡ್ಡ ಮಲ್ಲಾಪುರದ ಶ್ರೀಧರ್‌ ಹೇಳಿ ಮಠದ ವಿರುದ್ಧ ಮಾತನಾಡುವವರಿಗೆ ಮಠದಿಂದ ಬಹಿಷ್ಕಾರ ಹಾಕಬೇಕು ಎಂದರು.

ಪಿ,ಎಂ. ಮರುಳಸಿದ್ಧಯ್ಯ ಮಾತನಾಡಿ, ಪಾದಯಾತ್ರೆ ಮಾಡಿಕೊಂಡು ಬರಲು ಇದೇನು ಮೂಡಾ ಅಥವಾ ವಾಲ್ಮೀಕಿ ಹಗರಣವಲ್ಲ ಎಂದರೆ ಜಮ್ಮೇನಹಳ್ಳಿ ಜಯಪ್ರಕಾಶ್‌ ಶ್ರೀಗಳು ಮಾಡಿದ ಪ್ರಯತ್ನದಿಂದ ಈ ಭಾಗದ ಜನರು ಎಂಟು ವರ್ಷಗಳಿಂದ ನೀರು ಕುಡಿಯುತ್ತಿದ್ದೇವೆ. ಸೂಟ್‌ಕೇಸ್‌ ಖ್ಯಾತಿ ಮಾಜಿ ಮಂತ್ರಿ ಬಿ.ಸಿ. ಪಾಟೀಲ್‌ ಇದನ್ನು ತಿಳಿದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಹಾಲುವರ್ತಿ ಶ್ರೀಧರ್‌, ಬಸವಾಪಟ್ಟಣದ ಬಿ.ಸಿ. ನಾಗರಾಜ್‌, ಹಂಪನೂರು ಶಿವಕುಮಾರ್‌, ರಾಮಗೊಂಡನಹಳ್ಳಿ ಶೇಖರಪ್ಪ , ಸಿರಿಗೆರೆ ಎಂ. ಬಸವರಾಜಯ್ಯ, ಲಿಂಗನಮೂರ್ತಿ, ದಾವಣಗೆರೆ ರೇವಣಸಿದ್ದಪ್ಪ ಮುಂತಾದವರು ಮಾಡನಾಡಿದರು.

ವೇದಿಕೆಯಲ್ಲಿ ಸಾಧು ವೀರಶೈವ ಸಂಘದ ಉಪಾಧ್ಯಕ್ಷ ಡಾ. ಮೂಗಪ್ಪ, ಕೆ.ಜಿ. ಬಸವನಗೌಡ, ಹರಪನಹಳ್ಳಿ ಬಿ. ಮಂಜುನಾಥ್‌, ಮಾಗನೂರು ಸಂಗಮೇಶ್‌ಗೌಡ, ಅಮರಾವತಿ ಪರಮೇಶ್ವರಪ್ಪ, ಹೊನ್ನಾಳಿ ಗದಿಗೇಶ್‌, ದಾವಣಗೆರೆ ಎಚ್.ಡಿ. ಮಹೇಶ್ವರಪ್ಪ, ರಾಣೇಬೆನ್ನೂರಿನ ಶಿವಣ್ಣ ನಂದಿಹಳ್ಳಿ, ಹಾವೇರಿ ಗಿರೀಶ್‌ ರಟ್ಟೀಹಳ್ಳಿ, ಚನ್ನಗಿರಿಯ ಟಿ.ವಿ. ರಾಜು, ಭದ್ರಾವತಿ ಕೆ.ಜಿ. ಶ್ರೀಧರ್‌ ಪಾಟೀಲ್‌, ಪ್ರವೀಣ ವಿಜಾಪುರ ಇದ್ದರು.