ಕಣ್ಣು ಹಾಯಿಸದಷ್ಟು ಕಾಣುವ ಜನಸಾಗರ, ಸಮುದ್ರದಂತೆ ಸೇರಿದ್ದ ಲಕ್ಷಾಂತರ ಭಕ್ತರ ಮಧ್ಯೆ ದಕ್ಷಿಣ ಭಾರತ ಕುಂಭ ಮೇಳ ಖ್ಯಾತಿಯ ಐತಿಹಾಸಿಕ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಕಣ್ಣು ಹಾಯಿಸದಷ್ಟು ಕಾಣುವ ಜನಸಾಗರ, ಸಮುದ್ರದಂತೆ ಸೇರಿದ್ದ ಲಕ್ಷಾಂತರ ಭಕ್ತರ ಮಧ್ಯೆ ದಕ್ಷಿಣ ಭಾರತ ಕುಂಭ ಮೇಳ ಖ್ಯಾತಿಯ ಐತಿಹಾಸಿಕ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಸೋಮವಾರ ಸಂಜೆ ಶ್ರೀಮಠದ ಪೀಠಾಧಿಪತಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಸಿದ್ದೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ನೇರವೇರಿಸಿ ಹರಗುರು ಚರಮೂರ್ತಿಗಳೊಂದಿಗೆ ಮೆರವಣಿಗೆಯಲ್ಲಿ ರಥಬೀದಿಗೆ ಆಗಮಿಸಿದರು. ರಥಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಯಲ್ಲಿ ತಂದಿದ್ದ ದೇವರ ಮೂರ್ತಿಯನ್ನು ರಥದಲ್ಲಿರಿಸಲಾಯಿತು. ಆ ಬಳಿಕ ಶ್ರೀಗಳು ಬಸವಪತಾಕಿ ನೆರವೇರಿಸುವ ಸ್ಥಳಕ್ಕೆ ಆಗಮಿಸಿ ನೆರೆದಿದ್ದ ಭಕ್ತಸಾಗರ ನೋಡಿ ಬಾವುಕರಾದರು. ಈ ವೇಳೆ ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅವರು ಬಸವ ಪತಾಕಿ ಹಾರಿಸುವ ಮೂಲಕ 210ನೇ ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.ಚಾಲನೆ ದೊರೆಯುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿ ‘ಗವಿಸಿದ್ದ ಪಾಹಿಮಾಮ್’ ಎಂಬ ಜಯಘೋಷಗಳು ಮೊಳಗಿದವು. ಗವಿಸಿದ್ಧೇಶ್ವರ ಶ್ರೀಗಳು ಬಾಳೆ ಹಣ್ಣು, ಉತ್ತತ್ತಿ ಎಸೆಯದಂತೆ ಸೂಚಿಸಿದ್ದರೂ ಭಕ್ತರು ಉತ್ತತ್ತಿ, ಬಾಳೆ ಹಣ್ಣು ಎಸೆದು ಪುನೀತರಾಗುತ್ತಿದ್ದರು. ಆದರೆ, ಎಸೆಯುವವರ ಪ್ರಮಾಣ ವರ್ಷದಿಂದ ವರ್ಷಕ್ಕೆ ತಗ್ಗಿದೆ. ಗವಿಸಿದ್ಧೇಶ್ವರ ಮಹಾರಥೋತ್ಸವ ಪಾದಗಟ್ಟೆ ತಲುಪಿ, ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ಮರಳಿ ತನ್ನ ಮೂಲ ಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಭಕ್ತರ ಕರತಾಡನ ಮುಗಿಲು ಮುಟ್ಟಿತು. ಭಕ್ತರು ರಥಕ್ಕೆ ನಮಸ್ಕರಿಸಿ ಪುನೀತ ಭಾವ ಮೆರೆದರು.
ಗಣ್ಯರ ಉಪಸ್ಥಿತಿ:ಕಾಖಂಡಕಿಯ ಗುರುದೇವ ಆಶ್ರಮದ ಶಿವಯೋಗಿಶ್ವರ ಸ್ವಾಮೀಜಿ, ಹುಬ್ಬಳ್ಳಿಯ ಮೂರುಸಾವಿರ ಮಠದ ಡಾ.ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ ಸೇರಿದಂತೆ ಹರಗುರುಚರಮೂರ್ತಿಗಳು ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ರಾಜಶೇಖರ ಹಿಟ್ನಾಳ, ಸಚಿವ ಶಿವರಾಜ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಗಾಲಿ ಜನಾರ್ದನರಡ್ಡಿ, ದೊಡ್ಡನಗೌಡ ಪಾಟೀಲ, ಶರಣಗೌಡ ಕಂದಕೂರು ಇದ್ದರು.ಕನ್ನಡಪ್ರಭ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಗವಿಶ್ರೀ:
ಗವಿಸಿದ್ಧೇಶ್ವರ ಜಾತ್ರೆ ಪ್ರಯುಕ್ತ ಕನ್ನಡಪ್ರಭದಿಂದ ಸೋಮವಾರ ಪ್ರಕಟವಾದ ಗವಿಸಿದ್ಧ ವೈಭವ ವಿಶೇಷ ಪುರವಣಿಯನ್ನು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಬಿಡುಗಡೆಗೊಳಿಸಿದರು.ಗವಿಮಠದ ಐತಿಹ್ಯ, ಪರಂಪರೆಯನ್ನೊಳಗೊಂಡು 10 ಪುಟಗಳ ಕನ್ನಡಪ್ರಭ ವಿಶೇಷ ಪುರವಣಿಗೆಗೆ ಶ್ರೀಗಳು ಹಾಗೂ ಓದುಗರು ಮೆಚ್ಚುಗೆ ವ್ಯಕ್ತಪಡಿಸಿದರು. ಭಕ್ತರು ಸರದಿಯಲ್ಲಿ ನಿಂತು ಪುರವಣಿ ಪಡೆದು ಓದಿದರು. ಕನ್ನಡಪ್ರಭ ಜಿಲ್ಲಾ ವರದಿಗಾರ ಸೋಮರಡ್ಡಿ ಅಳವಂಡಿ, ಪ್ರಸರಣಾಂಗ ವಿಭಾಗದ ಈಶ್ವರಗೌಡ್ರು ವಿ.ಎಸ್, ಛಾಯಾಗ್ರಾಯಕ ನಾಬಿರಾಜ ದಸ್ತೇನನವರ ಇದ್ದರು.