ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳಿಗೆ ಭಕ್ತಿ ಸಮರ್ಪಣೆ

| Published : Jan 19 2025, 02:16 AM IST

ಸಾರಾಂಶ

ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ 80ನೇ ಜನ್ಮವರ್ಧಂತಿ ಆಚರಣೆ ಸಮಾರಂಭ ಶನಿವಾರ ಸಂಜೆ ನಗರದ ಶ್ರೀ ಭೈರವೇಶ್ವರ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬ್ಯಾಂಕಿನ ಆಡಳಿತ ಮಂಡಳಿ ಪುಷ್ಪಾರ್ಚನೆ ಮಾಡಿ ಭಕ್ತಿನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ 80ನೇ ಜನ್ಮವರ್ಧಂತಿ ಆಚರಣೆ ಸಮಾರಂಭ ಶನಿವಾರ ಸಂಜೆ ನಗರದ ಶ್ರೀ ಭೈರವೇಶ್ವರ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬ್ಯಾಂಕಿನ ಆಡಳಿತ ಮಂಡಳಿ ಪುಷ್ಪಾರ್ಚನೆ ಮಾಡಿ ಭಕ್ತಿನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಟಿ.ಆರ್.ವೆಂಕಟೇಶ್‌ಬಾಬು, ಡಾ.ಬಾಲಗಂಗಾಧರ ಸ್ವಾಮೀಜಿಗಳು ಸಮಾಜಕ್ಕೆ, ಧಾರ್ಮಿಕ ಕ್ಷೇತ್ರಕ್ಕೆ ಅಪೂರ್ವವಾದ ಕೊಡುಗೆ ನೀಡಿದ್ದಾರೆ. 1974ರಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸ್ವಾಮೀಜಿ ಮಠದ ಉನ್ನತಿಗೆ ತಮ್ಮದೇ ಆದ ದೂರದೃಷ್ಠಿ ಚಿಂತನೆಗಳ ಮೂಲಕ ಸೇವಾ ಪ್ರವೃತ್ತರಾದರು. ಚಿಕ್ಕದಾಗಿ ಶಿಥಿಲವಾಗಿದ್ದ ಮಠದ ಕಾಲಭೈರವೇಶ್ವರ ದೇವಸ್ಥಾನವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಿದರು ಎಂದರು.ಆರಂಭದಲ್ಲಿ ಮಠದ ಆರ್ಥಿಕ ಪರಿಸ್ಥಿತಿ ಕಷ್ಟದಲ್ಲಿದ್ದಾಗ ಬಾಲ ಗಂಗಾಧರನಾಥ ಸ್ವಾಮೀಜಿಗಳು ನೇಗಿಲು ಹಿಡಿದು ಹೊಲ ಉಳುಮೆ ಮಾಡಿದರು, ಎತ್ತಿನ ಗಾಡಿ ಕಟ್ಟಿಕೊಂಡು ಊರೂರು ಸುತ್ತಿ ಭಕ್ತರಿಂದ ದವಸಧಾನ್ಯ ಸಂಗ್ರಹಿಸಿ, ಮಠದ ಹಾಗೂ ಭಕ್ತರ ಏಳಿಗೆಗೆ ನೆರವಾದರು ಎಂದರು.ಬ್ಯಾಂಕಿನ ನಿರ್ದೇಶಕ ಬೆಳ್ಳಿ ಲೋಕೇಶ್ ಮಾತನಾಡಿ, ಶಿಕ್ಷಣ, ಆರೋಗ್ಯ, ಪರಿಸರ ಬಾಲಗಂಗಾಧರನಾಥ ಸ್ವಾಮೀಜಿಗಳ ನಿತ್ಯದ ಮಂತ್ರವಾಗಿತ್ತು. ಆ ಮೂರು ಸೇವೆಗಳನ್ನು ಸಾಕಾರಗೊಳಿಸಲು ಶ್ರಮಿಸಿದ್ದರು. ಅದರ ಪರಿಣಾಮ ಇಂದು ಆದಿಚುಂಚನಗಿರಿ ಮಹಾಸಂಸ್ಥಾನದ 500 ಶಿಕ್ಷಣ ಸಂಸ್ಥೆಗಳಿವೆ ಎಂದು ತಿಳಿಸಿದರು.ಬ್ಯಾಂಕಿನ ಉಪಾಧ್ಯಕ್ಷ ಆನಂದಕುಮಾರ್, ನಿರ್ದೇಶಕರಾದ ಸಿ.ರಾಧಾ ದೇವರಾಜು, ಹೆಚ್.ಎಸ್.ಮಂಜುನಾಥ್, ಬಿ.ಸಿ.ಶಿವಕುಮಾರ್, ಆರ್.ಕೃಷ್ಣಯ್ಯ, ಎಸ್.ಆರ್.ಜಗದೀಶ್, ಬೋರೇಗೌಡ, ಜಿ.ನಾಗರಾಜು, ಬಿ.ಹನುಮಂತಯ್ಯ, ಟಿ.ಆರ್.ಚಿಕ್ಕರಂಗಣ್ಣ, ಹೆಚ್.ಜಿ.ಸುಜಾತ ನಂಜೇಗೌಡ, ಡಾ.ಜಿ.ವಿ.ಆನಂದಮೂರ್ತಿ, ಪಿ.ಶಾಮಣ್ಣ, ಕೆ.ಬಿ.ಕಾಂತರಾಜು, ಸಿಇಒ ತಿಮ್ಮೇಗೌಡ, ಹಲವು ಮುಖಂಡರು ಹಾಗೂ ಬ್ಯಾಂಕಿನ ಸಿಬ್ಬಂದಿ ಹಾಜರಿದ್ದು ಸ್ವಾಮೀಜಿಗಳಿಗೆ ಭಕ್ತಿ ಸಮರ್ಪಣೆ ಮಾಡಿದರು.