ಸಾವಿರಾರು ಮಹಿಳೆಯರು ರಾತ್ರಿಯಿಡಿ ಶೇಂಗಾ ಹೋಳಿಗೆ, ರೊಟ್ಟಿ ಬುತ್ತಿ ಮಾಡಿಕೊಂಡು ಬಿಸಿಲನ್ನು ಲೆಕ್ಕಿಸದೇ ಬೃಹತ್ ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ಅಧ್ಯಾತ್ಮ ಚಿಂತನೆಗೆ ಆದ್ಯತೆ ನೀಡಿದರು.

ನವಲಗುಂದ:

ಕಟುಂಬದೊಂದಿಗೆ ಕುಳಿತು ಊಟ ಮಾಡಲು ಸಮಯವೇ ಇಲ್ಲದ ಇಂದಿನ ದಿನಗಳಲ್ಲಿ ತಾಲೂಕಿನ ಭಕ್ತ ಸಮೂಹ ಒಂದೆಡೆ ಸೇರಿ ಧರ್ಮದ ಬುತ್ತಿ ಹೆಸರಿನಲ್ಲಿ ಜಾತಿ, ಮತ ಮೀರಿ ಹಿರೇಮಠಕ್ಕೆ ಬುತ್ತಿ ತಂದು ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದೀರಿ ಎಂದು ಮಣಕವಾಡ ದೇವಮಂದಿರದ ಅಭಿನವ ಮೃತ್ಯುಂಜಯ ಶ್ರೀ ಹೇಳಿದರು.

ಇಲ್ಲಿನ ಪಂಚಗ್ರಹ ಹಿರೇಮಠದ ನೂತನ ಪೀಠಾಧಿಕಾರ ಹಾಗೂ ಗುರು ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಭಾನುವಾರ ಸಂಜೆ ಆಯೋಜಿಸಿದ್ದ ಧರ್ಮದ ಬುತ್ತಿ ಜಾಥಾ ಉದ್ಘಾಟಿಸಿ ಮಾತನಾಡಿದರು.

ಹಿರೇಮಠದ ನೂತನ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ತಾಲೂಕಿನ ಸಾವಿರಾರು ಮಹಿಳೆಯರು ರಾತ್ರಿಯಿಡಿ ಶೇಂಗಾ ಹೋಳಿಗೆ, ರೊಟ್ಟಿ ಬುತ್ತಿ ಮಾಡಿಕೊಂಡು ಬಿಸಿಲನ್ನು ಲೆಕ್ಕಿಸದೇ ಬೃಹತ್ ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ಅಧ್ಯಾತ್ಮ ಚಿಂತನೆಗೆ ಆದ್ಯತೆ ನೀಡಿರುವುದು ನವಲಗುಂದದ ಹೆಮ್ಮೆಯಾಗಿದೆ ಎಂದರು.

ಗವಿಮಠದ ಬಸವಲಿಂಗ ಶ್ರೀ ಮಾತನಾಡಿ, ಈ ಹಿಂದೆ ನಡೆದ ಎಲ್ಲ ಮಠಗಳ ಪಟ್ಟಾಧಿಕಾರ ಮಹೋತ್ಸವಗಳನ್ನೂ ಮೀರಿಸುವಂತಹ ಧಾರ್ಮಿಕ ಕಾರ್ಯಗಳು ತಾಲೂಕಿನ ಭಕ್ತರ ಸಹಕಾರದಿಂದ ಹಿರೇಮಠದಲ್ಲಿ ನಡೆದಿರುವುದು ಎಲ್ಲರನ್ನು ಭಕ್ತ ಸಾಗರದಲ್ಲಿ ಮಿಂದೇಳುವಂತೆ ಮಾಡಿದೆ ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮಾತನಾಡಿ, ಪಟ್ಟಣದಲ್ಲಿ ಹಿಂದೆಂದು ಕಾಣದಂತಹ ಬೃಹತ್ ಧಾರ್ಮಿಕ ಕಾರ್ಯಕ್ರಮ ಇದಾಗಿದ್ದು, ಸಾವಿರಾರು ಮಹಿಳೆಯರು ಧರ್ಮದ ಬುತ್ತಿ ಹೊತ್ತು ಶ್ರೀಮಠಕ್ಕೆ ಮೆರವಣಿಗೆ ಮೂಲಕ ಬಂದು ಸಾವಿರಾರು ಭಕ್ತರಿಗೆ ಪ್ರಸಾದ ರೂಪದಲ್ಲಿ ಬುತ್ತಿಯನ್ನು ನೀಡಿದ ಕಾರ್ಯ ಶ್ಲಾಘನೀಯ ಎಂದರು.

ಇದಕ್ಕೂ ಮುನ್ನ ಶ್ರೀಶಂಕರ ಕಾಲೇಜು ಮೈದಾನದಲ್ಲಿ ಧರ್ಮದ ಬುತ್ತಿ ಜಾಥಾವನ್ನು ಪಂಚಗ್ರಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಮಣಕವಾಡ ಗವಿಮಠದ ಬಸವಲಿಂಗ ಶ್ರೀ, ನರಗುಂದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ನಿಯೋಜಿತ ಪೀಠಾಧಿಕಾರಿ ವೀರಬಸವ ಸ್ವಾಮೀಜಿ, ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಚಾಲನೆ ನೀಡಿದರು.

ಅಣ್ಣಪ್ಪ ಬಾಗಿ, ಪಾಂಡಪ್ಪ ಕೋನರಡ್ಡಿ, ಸಿದ್ದಲಿಂಗಯ್ಯ ಹಿರೇಮಠ, ಶಿವಾಜಿ ಕಲಾಲ, ಯಲ್ಲಪ್ಪ ಭೋವಿ, ಮಹೇಶ ಹಳ್ಳದ, ಬಾಬು ಹಳ್ಳದ, ಅಡಿವೆಪ್ಪ ಶಿರಸಂಗಿ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.

ಗಮನ ಸೆಳೆದ ಧರ್ಮದ ಬುತ್ತಿ ಜಾಥಾ

ಹಿರೇಮಠದ ಪೀಠಾಧಿಕಾರ ಮಹೋತ್ಸವ ಅಂಗವಾಗಿ ಭಾನುವಾರ ಜರುಗಿದ ಧರ್ಮದ ಬುತ್ತಿ ಜಾಥಾದಲ್ಲಿ 5 ಸಾವಿರಕ್ಕೂ ಹೆಚ್ಚು ಮಹಿಳೆಯರು, ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ರಾಷ್ಟ್ರ ಧ್ವಜ ಹಾಗೂ ರಾಷ್ಟ್ರಧ್ವಜ ಹೋಲುವ ಕೇಸರಿ, ಬಿಳಿ, ಹಸಿರು ಬಟ್ಟೆಗಳನ್ನು ಬುತ್ತಿ ಬುಟ್ಟಿಗೆ ಕಟ್ಟಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.