ಲಕ್ಷಾಂತರ ಕುಟುಂಬಗಳಿಗೆ ಬೆಳಕಾದ ಧರ್ಮಸ್ಥಳದ ದೀಪ

| Published : Dec 29 2023, 01:32 AM IST

ಸಾರಾಂಶ

ಚನ್ನಪಟ್ಟಣ: ಎಲ್ಲಿ ಸ್ತ್ರೀ ಕುಟುಂಬದ ಜವಾಬ್ದಾರಿಗಳನ್ನು ಹೊತ್ತು ಕುಟುಂಬದ ಬಗ್ಗೆ ಆಲೋಚನೆ ಮಾಡಿ ಕೆಲಸ ಮಾಡುತ್ತಾಳೆಯೋ ಅಲ್ಲಿ ಖಂಡಿತ ಬೆಳಕು ಚೆಲ್ಲಿ, ಆ ಕುಟುಂಬ ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುತ್ತದೆ ಎಂದು ಗುರುವಿನಪುರ ಬೃಹನ್ಮಠದ ಶ್ರೀ ಜಗದೀಶ ಶಿವಾಚಾರ್ಯ ಮಹಾಸ್ವಾಮಿ ತಿಳಿಸಿದರು.

ಚನ್ನಪಟ್ಟಣ: ಎಲ್ಲಿ ಸ್ತ್ರೀ ಕುಟುಂಬದ ಜವಾಬ್ದಾರಿಗಳನ್ನು ಹೊತ್ತು ಕುಟುಂಬದ ಬಗ್ಗೆ ಆಲೋಚನೆ ಮಾಡಿ ಕೆಲಸ ಮಾಡುತ್ತಾಳೆಯೋ ಅಲ್ಲಿ ಖಂಡಿತ ಬೆಳಕು ಚೆಲ್ಲಿ, ಆ ಕುಟುಂಬ ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುತ್ತದೆ ಎಂದು ಗುರುವಿನಪುರ ಬೃಹನ್ಮಠದ ಶ್ರೀ ಜಗದೀಶ ಶಿವಾಚಾರ್ಯ ಮಹಾಸ್ವಾಮಿ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಸಹಯೋಗದಲ್ಲಿ ತಾಲೂಕಿನ ಅಂಬಾಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾರ್ಗಶಿರ ಮಹಾಲಕ್ಷ್ಮಿ ಪೂಜೆ ಮತ್ತು ಗಣಹೋಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಒಂದು ದೀಪದಿಂದ ನೂರು ದೀಪ ಹಚ್ಚಬಹುದು. ಅದೇ ರೀತಿ ಧರ್ಮಸ್ಥಳದ ದೀಪ ಇಂದು ಲಕ್ಷಾಂತರ ಕುಟುಂಬಗಳ ಮನೆ ಬೆಳಕಾಗಿದೆ. ಸಂಸ್ಥೆಯ ಈ ಕಾರ್ಯ ಇನ್ನು ಹೆಚ್ಚಿನ ಕುಟುಂಬಗಳಿಗೆ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಜಯಕರಶೆಟ್ಟಿ ಮಾತನಾಡಿ, ಸಂಸ್ಥೆ ಹತ್ತು ಹಲವಾರು ಕಾರ್ಯಕ್ರಮಗಳ ಜನೋಪಯೋಗಿ ಯೋಜನೆ ಹಮ್ಮಿಕೊಂಡಿದ್ದು, ಮಹಿಳಾ ಸಬಲೀಕರಣ, ಆರ್ಥಿಕ ಶಿಸ್ತನ್ನು ಕಲಿಸುವುದರ ಜೊತೆಗೆ ಸುಂದರ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದೆ. ಪ್ರತಿಯೊಬ್ಬರೂ ಯೋಜನೆಯ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಾಹಿತಿ ವಿಜಯ್ ರಾಂಪುರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಆರ್ಥಿಕ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿಲ್ಲ, ಸಮಾಜದ ಸರ್ವ ಜನರ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿದೆ. ಸ್ವ-ಸಹಾಯ ಸಂಘಗಳ ಮೂಲಕ ಆರ್ಥಿಕ ನೆರವು ನೀಡಿ ಸಮಾಜದ ಬಡಜನರು ಸ್ವಾಲಂಬನೆ ಬದುಕು ಕಟ್ಟಿಕೊಳ್ಳಲು ಸಂಘ ನೆರವು ನೀಡುತ್ತಿದೆ ಎಂದರು.

ಯೋಜನೆಯ ತಾಲೂಕು ನಿರ್ದೇಶಕ ದಿನೇಶ್ ಕುಮಾರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಹರಿದು ಬರುವ ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸಲಾಗುತ್ತಿದೆ. ಗ್ರಾಮಮಟ್ಟದಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮುಖೇನ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಬಾಣಗಳ್ಳಿ ಗ್ರಾಪಂ ಅಧ್ಯಕ್ಷೆ ಗೌರಮ್ಮ ಪುಟ್ಟಸ್ವಾಮಿ, ನಿವೃತ್ತ ಆರಕ್ಷಕ ನಿರೀಕ್ಷಕ ಎಚ್.ಎಸ್.ಸಿದ್ದಯ್ಯ, ಯೋಜನೆಯ ಸೋಗಾಲ ವಲಯ ಮೇಲ್ವಿಚಾರಕರಾದ ಭಾಗ್ಯ ಇತರರಿದ್ದರು.

ಪೊಟೊ೨೮ಸಿಪಿಟಿ೨:

ತಾಲೂಕಿನ ಅಂಬಾಡಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹಮ್ಮಿಕೊಂಡಿದ್ದ ಮಾರ್ಗಶಿರ ಮಹಾಲಕ್ಷ್ಮಿ ಪೂಜೆ ಮತ್ತು ಗಣಹೋಮ ಕಾರ್ಯಕ್ರಮವನ್ನು ಜಗದೀಶ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.