ಸಾರಾಂಶ
- ಪತ್ರಕರ್ತ ನಾಗರಾಜ ಬಡದಾಳ ಅಭಿಮತ ।
- ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 389 ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಕುಟುಂಬಗಳ ಆರ್ಥಿಕ ಸಬಲತೆಗೆ ಶ್ರಮಿಸುತ್ತಿದೆ. ಅಷ್ಟೇ ಅಲ್ಲ, ಬಡವರು, ಮಧ್ಯಮ ವರ್ಗದ ಪ್ರತಿಭಾವಂತ ಮಕ್ಕಳಿಗೆ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಅನುವಾಗುವಂತೆ 3ರಿಂದ 4 ವರ್ಷ ಅವಧಿಗೆ ಪ್ರತಿ ತಿಂಗಳು ಕೋರ್ಸ್‌ಗಳನ್ನು ಆಧರಿಸಿ ₹400ರಿಂದ ₹1 ಸಾವಿರ ನೀಡುತ್ತಿದೆ. ಆ ಮೂಲಕ ಮಕ್ಕಳ ಭವಿಷ್ಯ ಕಟ್ಟಿಕೊಡುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಹೇಳಿದರು.ನಗರದ ಎಸ್.ಎಸ್. ಹೈಟೆಕ್ ಬಡಾವಣೆಯ ಸದ್ಭಾವನಾ ಸೌಧದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ದಾವಣಗೆರೆ ಮತ್ತು ದೇವನಗರಿ ಯೋಜನಾ ಕಚೇರಿಯಿಂದ ಹಮ್ಮಿಕೊಂಡಿದ್ದ 2023-2024ನೇ ಸಾಲಿನಲ್ಲಿ 389 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಡಾ. ಹೇಮಾವತಿ ಹೆಗ್ಗಡೆಯವರ ಸಾಮಾಜಿಕ ಬದ್ಧತೆ, ಬಡ, ಮಧ್ಯಮ ವರ್ಗದ ಮಕ್ಕಳಿಗೆ ಉಜ್ವಲ ಭವಿಷ್ಯ ಕಟ್ಟಿಕೊಡುವ ನಿಟ್ಟಿನಲ್ಲಿ ಸುಜ್ಞಾನನಿಧಿ ಶಿಷ್ಯ ವೇತನ ನೀಡಿ, ಇತರರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದರು.ಸಂಸ್ಥೆ ಸೇವೆ ಕೇವಲ ಮಹಿಳಾ ಸಬಲೀಕರಣ, ಆರ್ಥಿಕ ಪುನಶ್ಚೇತನಕ್ಕಷ್ಟೇ ಸೀಮಿತವಾಗಿಲ್ಲ. ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದೆ. ಸ್ವಉದ್ಯೋಗ, ಗೃಹ ಕೈಗಾರಿಕೆಗೂ ಪ್ರೋತ್ಸಾಹ ನೀಡುತ್ತಿದೆ. ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಪ್ರೋತ್ಸಾಹದ ನೆರವು ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗ ಗಳಿಸಿ, ಬದುಕು ಕಟ್ಟಿಕೊಂಡ ನಂತರ ಕನಿಷ್ಠ ಒಂದಿಬ್ಬರು ಬಡವಿದ್ಯಾರ್ಥಿಗಳ ಓದಿಗೆ ನೆರವಾಗಬೇಕಿದೆ. ಇದರಿಂದ ಸುಜ್ಞಾನ ನಿಧಿ ಶಿಷ್ಯ ವೇತನ ಪಡೆದಿದ್ದು ಸಾರ್ಥಕವಾಗುತ್ತದೆ ಎಂದರು.
ಸಂಸ್ಥೆ ನಿರ್ದೇಶಕ ಎಂ.ಲಕ್ಷ್ಮಣ್ ಮಾತನಾಡಿ, ಬಡತನ, ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ, ಮೂಲಸೌಲಭ್ಯಗಳ ಕೊರತೆ, ದೂರದಲ್ಲಿರುವ ಶಿಕ್ಷಣ ಸಂಸ್ಥೆಗಳು ಇನ್ನಿತರೆ ಕಾರಣಕ್ಕೆ ಗ್ರಾಮೀಣ ವಿದ್ಯಾರ್ಥಿಗಳು ವೃತ್ತಿ ಮತ್ತು ತಾಂತ್ರಿಕ ಶಿಕ್ಷಣದಿಂದ ಹೊರಗೆ ಉಳಿಯಬಾರದು. ಈ ಕಾರಣಕ್ಕೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಡಾ.ಹೇಮಾವತಿ ವಿ. ಹಗ್ಗಡೆಯವರು 2007ರ ಏಪ್ರಿಲ್14ರಂದು ಸುಜ್ಞಾನ ನಿಧಿ ಶಿಷ್ಯವೇತನ ಯೋಜನೆಗೆ ಚಾಲನೆ ನೀಡಿದ್ದರು. ವಿದ್ಯಾರ್ಥಿಗಳಿಗೆ ತಾಂತ್ರಿಕ, ವೃತ್ತಿ ಶಿಕ್ಷಣಗಳಿಗೆ ಸಂಸ್ಥೆ ನಿಗದಿಪಡಿಸಿದ ಆಯ್ದ ಕೋರ್ಸ್‌ಗೆ ₹400 ರಿಂದ ₹1 ಸಾವಿರವರೆಗೆ ಮಾಸಿಕ ಶಿಷ್ಯವೇತನ ನೀಡಲಾಗುತ್ತಿದೆ ಎಂದರು.2023- 2024ನೇ ಸಾಲಿನಲ್ಲಿ 389 ವಿದ್ಯಾರ್ಥಿಗಳ ಸುಜ್ಞಾನ ನಿಧಿವೇತನ ಮಂಜೂರಾತಿ ಪತ್ರ ವಿತರಿಸಲಾಯಿತು. ಜಿಲ್ಲಾ ಜನ ಜಾಗೃತಿ ವೇದಿಕೆಯ ಗೌಡರ ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್‌ಬಿಐ ಪ್ರಧಾನ ವ್ಯವಸ್ಥಾಪಕ ಲಕ್ಷ್ಮಣ ಕೆ.ನಂದೀಶ್ವರ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಸದಸ್ಯರಾದ ಎಸ್.ಟಿ.ಕುಸುಮ ಶ್ರೇಷ್ಠಿ, ಚೇತನಾ ಶಿವಕುಮಾರ, ಜಿ.ಎಚ್. ಮಹಾಂತೇಶ, ದೇವನಗರಿ ಯೋಜನಾಧಿಕಾರಿ ಬಾಲಕೃಷ್ಣ, ಅಣಬೇರು ಮಂಜಣ್ಣ ಇತರರು ಇದ್ದರು.
- - -ಬಾಕ್ಸ್ * 2163 ಮಕ್ಕಳಿಗೆ ಶಿಷ್ಯವೇತನ: ಲಕ್ಷ್ಮಣ್ ಜಿಲ್ಲಾದ್ಯಂತ ಆರ್ಥಿಕ ವರ್ಷದಲ್ಲಿ 2163 ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪಾವತಿಸಲಾಗುತ್ತಿದೆ. ಈವರೆಗೆ ಜಿಲ್ಲೆಯ 5002 ವಿದ್ಯಾರ್ಥಿಗಳಿಗೆ ₹8.59 ಕೋಟಿ ಶಿಷ್ಯವೇತನ ನೀಡಲಾಗಿದೆ. ರಾಜ್ಯಾದ್ಯಂತ 97 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ₹114.50 ಕೋಟಿ ಶಿಷ್ಯವೇತನ ನೀಡಿದೆ. ದಾವಣಗೆರೆ ಹಾಗೂ ದೇವನಗರಿ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಪ್ರಸ್ತುತ ವರ್ಷ 2023- 2024ರಲ್ಲಿ ಒಟ್ಟು 389 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿಯಡಿ ಶಿಷ್ಯವೇತನ ಮಂಜೂರಾಗಿದೆ. ಈವರೆಗೆ ಒಟ್ಟು 1812 ವಿದ್ಯಾರ್ಥಿಗಳಿಗೆ ಒಟ್ಟು ₹1.94 ಲಕ್ಷ ಶಿಷ್ಯವೇತನ ನೀಡಲಾಗಿದೆ. ಶಿಷ್ಯವೇತನ ಪಡೆದ ಅದೆಷ್ಟೋ ಬಡ ಮಕ್ಕಳು ವೈದ್ಯರು, ಎಂಜಿನಿಯರ್, ಉನ್ನತ ಶಿಕ್ಷಣ ಪಡೆದು ಸಾಧನೆ ಮಾಡಿದ್ದಾರೆ ಎಂದು ಎಂ.ಲಕ್ಷ್ಮಣ್ ಮಾಹಿತಿ ನೀಡಿದರು.
- - - -3ಕೆಡಿವಿಜಿ1, 2:ದಾವಣಗೆರೆಯಲ್ಲಿ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ದಾವಣಗೆರೆ ಮತ್ತು ದೇವನಗರಿ ಯೋಜನಾ ಕಚೇರಿಯಿಂದ 2023- 2024ನೇ ಸಾಲಿನಲ್ಲಿ 389 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಿಸಲಾಯಿತು.