ಸಾರಾಂಶ
ನಗರದ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಸಹಯೊಗದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಸರ್ಕಾರಗಳ ಯೋಜನೆಗಳು ಜಾತಿವಾರು ಸೌಲಭ್ಯಗಳನ್ನು ಒದಗಿಸಿದರೆ, ಧರ್ಮಸ್ಥಳ ಸಂಘ ನೀತಿವಾರು ಸೌಕರ್ಯಗಳನ್ನು ನೀಡಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಹಕಾರಿಯಾಗಿದೆ ಎಂದರು.
ಸರ್ಕಾರದ ಯೋಜನೆ ಜಾತಿವಾರು, ಧರ್ಮಸ್ಥಳ ಸಂಘದ ಯೋಜನೆ ನೀತಿವಾರು । ಚಿಕ್ಕಮಗಳೂರಿನಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸರ್ಕಾರಗಳ ಯೋಜನೆಗಳು ಜಾತಿವಾರು ಸೌಲಭ್ಯಗಳನ್ನು ಒದಗಿಸಿದರೆ, ಧರ್ಮಸ್ಥಳ ಸಂಘ ನೀತಿವಾರು ಸೌಕರ್ಯಗಳನ್ನು ನೀಡಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಹಕಾರಿಯಾಗಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು. ನಗರದ ಹೌಸಿಂಗ್ ಬೋರ್ಡ್‌ನಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾನವನ ವೈಯಕ್ತಿಕ ಜೀವನದಲ್ಲಿ ಒಂದಲ್ಲೊಂದು ಸಮಸ್ಯೆಗಳಿಂದ ಬಳಲುತ್ತಿರುವುದು ಸಾಮಾನ್ಯ ವಿಷಯ. ಅದರ ಪರಿಹಾರಕ್ಕೆ ನಿಧಾನಗತಿಯಲ್ಲಿ ಸಾಗಬೇಕಿದೆ. ಆ ನಿಟ್ಟಿನಲ್ಲಿ ದೈವದ ನಾಮಸ್ಮರಣೆಯಲ್ಲಿ ತೊಡಗಿದರೆ ಮನಸ್ಸಿಗೆ ಶಾಂತಿ, ನೆಮ್ಮದಿ ಜೊತೆಗೆ ಮಾನಸಿಕ ಒತ್ತಡಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ಮಾಡಿದರು. ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಬದುಕಿನಲ್ಲಿ ಹೊಂದಾಣಿಕೆ ಬಹಳ ಮುಖ್ಯವಾಗಿದೆ. ಅನ್ಯೋನ್ಯತೆಯಿಂದ ಬಾಳುವ ಪ್ರವೃತ್ತಿಯನ್ನು ಇಂದಿನ ಯುವಪೀಳಿಗೆ ಬೆಳೆಸಿಕೊಳ್ಳಬೇಕು. ಹೀಗಾಗಿ ನಾಡಿನ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಚಾಚುತಪ್ಪದೇ ಮನದಾಳದಿಂದ ಪಾಲಿಸಿದರೆ ಮಾತ್ರ ಶ್ರೀ ಮಂಜುನಾಥ ಪ್ರಭು ಹೃದಯದಲ್ಲಿ ಶಾಶ್ವತವಾಗಿ ನೆಲೆಸಿ ಸುಲಲಿತ ಬದುಕು ಲಭಿಸಲು ಸಾಧ್ಯ ಎಂದು ಹೇಳಿದರು. ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಪಲ್ಲವಿ ಸಿ.ಟಿ.ರವಿ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಹಿರಿಯರ ಪುರಾತನ ಸಂಸ್ಕೃತಿ ಹಾಗೂ ಪರಂಪರೆ ನಾಶವಾಗುತ್ತಿದೆ. ದೇವಾಲಯಗಳಲ್ಲಿ ಭಾರತೀಯ ಸಂಸ್ಕೃತಿ ಉಡುಗೆ, ತೊಡುಗೆ ಮರೆಯಾಗುತ್ತಿವೆ. ಭವಿಷ್ಯದಲ್ಲಿ ಮಕ್ಕಳಿಗೆ ಮಾರಕವಾಗುವ ಹಿನ್ನೆಲೆಯಲ್ಲಿ ನಮ್ಮ ನೆಲದ ಪರಂಪರೆ, ಪೂಜಾ ವಿಧಾನ ತಿಳಿಹೇಳುವ ಕೆಲಸ ಪೋಷಕರು ಮಾಡಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭಾ ಸದಸ್ಯೆ ಕವಿತಾ ಶೇಖರ್, ಜಿಲ್ಲೆಯ ಎಲ್ಲಾ ಮಾತೆಯರನ್ನು ಒಗ್ಗೂಡಿಸಿ ಸ್ವಸಹಾಯ ಸಂಘ ಸ್ಥಾಪಿಸಿ ರಾಜ್ಯಾದ್ಯಂತ ವಹಿವಾಟಿಗೆ ಸಂಘ ಮುಂದಾಗಿರುವುದು ಹೆಮ್ಮೆಯ ಸಂಗತಿ. ಮಹಿಳೆಯರು ಅಬಲೆಯರಲ್ಲ, ಸಬಲೆಯರೆಂದು ಸಾಬೀತುಪಡಿಸಲು ಶ್ರೀ ಧರ್ಮಸ್ಥಳ ಸಂಘ ಪ್ರಮುಖವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಪ್ರಕಾಶ್‌ರಾವ್, ತ್ರಿಮೂರ್ತಿ ದೇಗುಲದ ಅಧ್ಯಕ್ಷ ಕೆ.ಜಿ.ನಂಜುಂಡಪ್ಪ, ಎಸ್.ಡಿ.ಎಂ. ಎಜುಕೇಷನ್ ಟ್ರಸ್ಟ್ ಸಂಸ್ಥಾಪಕ ಮಂಜುನಾಥ್, ಧರ್ಮಸ್ಥಳ ಟ್ರಸ್ಟ್‌ನ ಯೋಜನಾ ಧಿಕಾರಿ ರಮೇಶ್ ನಾಯ್ಕ್, ಮೇಲ್ವಿಚಾರಕ ಚಂದನ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ವೃಂದ, ಪ್ರಬಂಧಕ ದಯಾನಂದ್ ಉಪಸ್ಥಿತರಿದ್ದರು.25 ಕೆಸಿಕೆಎಂ 2ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್‌ನಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಹಿರೇಮಗಳೂರು ಕಣ್ಣನ್ ಉದ್ಘಾಟಿಸಿದರು. ಪಲ್ಲವಿ ಸಿ.ಟಿ. ರವಿ, ಕವಿತಾ ಶೇಖರ್, ಪ್ರಕಾಶ್‌ರಾವ್ ಇದ್ದರು.