ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಪಟ್ಟಣದ ಹೊರವಲಯ ಕುಟ್ರಹಳ್ಳಿ ಸಮೀಪ ಹೆದ್ದಾರಿಗೆ ನಿರ್ಮಿಸಲು ಉದ್ದೇಶಿಸಲಾಗಿದ್ದ ಟೋಲ್‌ಗೇಟ್ ರೈತ ಸಮುದಾಯದ ತೀವ್ರ ವಿರೋಧದಿಂದ ಸ್ಥಗಿತಗೊಳಿಸಿ, ಇದೀಗ ಪುನಃ ಸಮೀಪದ ಕೆಎಸ್ಆರ್‌ಟಿಸಿ ಡಿಪೋ ಬಳಿ ಗೇಟ್ ನಿರ್ಮಾಣದ ಕಾಮಗಾರಿ ಆರಂಭಿಸಲಾಗಿದೆ. ಟೋಲ್‌ಗೇಟ್ ಸ್ಥಾಪನೆ, ಬೈಪಾಸ್ ರಸ್ತೆ ನಿರ್ಮಾಣ ಖಂಡಿಸಿ ಜ.15ರಿಂದ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್. ಈಶ್ವರಪ್ಪ ಹೇಳಿದರು.ಶನಿವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ರೈತರ ಜತೆ ಸೇರಿ ಪ್ರತಿಭಟಿಸಿದ ಸಂಸದರ ಕುಮ್ಮಕ್ಕಿನಿಂದಲೇ ಈ ಕಾಮಗಾರಿ ಆರಂಭವಾಗಿದೆ. ಇಂತಹ ಬೂಟಾಟಿಕೆ ಹೆಚ್ಚು ದಿನ ನಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟೋಲ್‌ಗೇಟ್ ಬಿಡಿ, ರೈತರ ಕಾಪಾಡಿ:ಯಡಿಯೂರಪ್ಪ ಮುಖ್ಯಮಂತ್ರಿ ಅವಧಿಯಲ್ಲಿ ಟೋಲ್ ಗೇಟ್ ಅಳವಡಿಸುವ ಕಾಮಗಾರಿಗೆ ಟೆಂಡರ್ ಕಾರ್ಯ ನಡೆದಿದ್ದು, ರೈತರ ವಿರೋಧಕ್ಕೆ ಮಣಿದು ಕೆಲಕಾಲ ಸ್ಥಗಿತಗೊಂಡಿತ್ತು. ಈ ಕಾಮಗಾರಿ ಕಳೆದ ತಿಂಗಳು ಆರಂಭಗೊಂಡಾಗ ಸ್ಥಳೀಯ ರೈತರ ಜತೆಗೆ ಬಿಜೆಪಿ ಯುವಮೋರ್ಚಾ ವತಿಯಿಂದ ಪೂರ್ವಾನುಮತಿ ಪಡೆಯದೇ ರಸ್ತೆ ತಡೆ ನಡೆಸಿ, ಪ್ರತಿಭಟಿಸುವ ನಾಟಕವಾಡಿ ನಂತರದಲ್ಲಿ ಸಂಸದರಿಂದ ವಿರೋಧಿಸುವ ಎಲ್ಲ ತಂತ್ರ ನಡೆದಿದೆ. ಇದೀಗ ಪುನಃ ಸಮೀಪದಲ್ಲಿನ ಕೆಎಸ್ಆರ್‌ಟಿಸಿ ಡಿಪೋ ಬಳಿ ಟೋಲ್ ಗೇಟ್ ನಿರ್ಮಾಣಕ್ಕಾಗಿ ಹಿಟಾಚಿ, ಜೆಸಿಬಿ ರೋಲರ್ ಬಳಸಿ ನೆಲಸಮಗೊಳಿಸಲಾಗಿದೆ. ಸಂಸದರ ಕುಮ್ಮಕ್ಕಿನಿಂದ ಕಾಮಗಾರಿ ಆರಂಭವಾಗಿದೆ. ಇಂತಹ ದೊಂಬರಾಟ ಬಿಟ್ಟು, ಟೋಲ್ ಗೇಟ್ ಅಳವಡಿಸುವುದನ್ನು ಪ್ರಾಮಾಣಿಕವಾಗಿ ತಡೆಗಟ್ಟಿ, ರೈತರ ಹಿತಾಸಕ್ತಿ ಕಾಪಾಡುವಂತೆ ಸವಾಲು ಹಾಕಿದರು.
ಪರಿಹಾರ ಕಲ್ಪಿಸದೇ ಶಾಸಕ ಪ್ರವಾಸ:ಅವೈಜ್ಞಾನಿಕವಾದ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಬಗ್ಗೆ ರೈತರ ತೀವ್ರ ವಿರೋಧ ವ್ಯಕ್ತವಾಗಿದ್ದು, ಬಹುತೇಕ ಬಿಜೆಪಿಯಲ್ಲಿ ಗುರುತಿಸಿಕೊಂಡ ರೈತರ ಜಮೀನು ಭೂಸ್ವಾಧೀನ ಬಗ್ಗೆ ಜಿಲ್ಲಾಧಿಕಾರಿ ಸಹಿತ ಉನ್ನತ ಅಧಿಕಾರಿಗಳ ಸಭೆಯಲ್ಲಿ ವಿರೋಧಿಸಿ ಮನವಿ ಸಲ್ಲಿಸಿದರೂ ಹಿಂಬರಹ ನೀಡದೇ ಅಚ್ಚುಕಟ್ಟುದಾರ ರೈತರ ಸಭೆ ಆಯೋಜಿಸದೆ. ಪುರಸಭೆಯಲ್ಲಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಲಾಗಿದ್ದು, ಎಲ್ಲ ಮೀರಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಇದರಿಂದ ಸ್ವಕ್ಷೇತ್ರದಲ್ಲಿ ರೈತರ ಸ್ಥಿತಿ ಆಯೋಮಯವಾಗಿದೆ. ಪರಿಹಾರ ಕಲ್ಪಿಸದೇ ಕ್ಷೇತ್ರದ ಶಾಸಕರು ರಾಜ್ಯ ಪ್ರವಾಸದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವ್ಯವಸ್ಥಿತ ಸಂಚು:ಶಿವಮೊಗ್ಗದ ದೇವಿ ಶುಗರ್ಸ ಕಂಪನಿಯ ಅಂದಾಜು 3 ಸಾವಿರ ಅಧಿಕ ಎಕರೆ ಜಾಗ ಕಬಳಿಸುವ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಈ ದಿಸೆಯಲ್ಲಿ ರಿಯಲ್ ಎಸ್ಟೇಟ್ ಕುಳಗಳ ಜತೆ ಪ್ರತಿಭಟಿಸುವ ನಾಟಕವಾಡಿ, ಕಾನೂನು ಬಾಹಿರವಾಗಿ ಹಸಿರು ವಲಯನ್ನು ಹಳದಿ ವಲಯವಾಗಿಸಿ ಪರಿವರ್ತಿಸುವ ಪ್ರಕ್ರಿಯೆ ನಡೆಯುತ್ತಿದೆ. ರೈತರ ವಿರುದ್ಧ ವಿಪರೀತ ದೌರ್ಜನ್ಯ ನಡೆಯುತ್ತಿದ್ದರೂ, ವಿರೋಧಿ ಕಾಂಗ್ರೆಸ್ ಮುಖಂಡರು ಮಾತ್ರ ನಿರ್ಲಿಪ್ತರಾಗಿದ್ದಾರೆ. 71 ಸಾವಿರ ಮತ ಪಡೆದು ಬೆನ್ನು ತಟ್ಟಿಕೊಳ್ಳುತ್ತಿರುವ ನಾಗರಾಜಗೌಡ ರೈತಪರ ಹೋರಾಟಕ್ಕೆ ಇಳಿಯುತ್ತಿಲ್ಲ. ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ಅಪ್ಪ, ಮಕ್ಕಳನ್ನು ಅಭಿನಂದಿಸಿ ಚುನಾವಣೆಯಲ್ಲಿ ಮಾತ್ರ ವಿರೋಧ, ನಂತರದಲ್ಲಿ ಹೊಂದಾಣಿಕೆಯ ರಾಜಕಾರಣದಲ್ಲಿ ಸಿದ್ಧಹಸ್ತರಾಗಿದ್ದಾರೆ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭಾ ಮಾಜಿ ಸದಸ್ಯ ರೇವಣಸಿದ್ದಪ್ಪ ಸಿರಿಯಣ್ಣಾರ ಮುಖಂಡ ಶ್ರೀನಿವಾಸ್, ಬಸವರಾಜ್ ಬಡಗಿ, ಪರಮೇಶ್ ಡಿಎಸ್ಎಸ್, ಮೋಹನ್ ಹಿರೇಕೇರೂರು, ಗೋಕುಲ್‌ರಾಜ್, ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.- - - -30ಕೆಎಸ್‌ಕೆಪಿ1: ಪತ್ರಿಕಾಗೋಷ್ಟಿಯಲ್ಲಿ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್. ಈಶ್ವರಪ್ಪ ಮಾತನಾಡಿದರು.