ಸಾರಾಂಶ
ಮಕರಬ್ಬಿ ಗ್ರಾಪಂಗೆ ನಿಯೋಜನೆ ಮಾಡಿರುವ ನರೇಗಾ ಯೋಜನೆಯ ಎಂಜಿನಿಯರ್ ವರ್ತನೆ ಸರಿಯಾಗಿಲ್ಲ, ಕೂಲಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಕೂಲಿಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ತಾಲೂಕಿನ ಮಕರಬ್ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಬನ್ನಿಮಟ್ಟಿ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ನಿಗದಿ ಪಡಿಸಿದಷ್ಟೇ ಕೆಲಸ ಮಾಡಿದ್ದರೂ, ಕೆಲಸಕ್ಕೆ ತಕ್ಕ ಕೂಲಿ ನೀಡದ ಎಂಜಿನಿಯರ್ ವಿರುದ್ಧ ಸ್ಥಳದಲ್ಲೇ ನೂರಾರು ಕೂಲಿ ಕಾರ್ಮಿಕರು ಧರಣಿ ಮಾಡಿರುವ ಘಟನೆ ಮಂಗಳವಾರ ನಡೆಯಿತು.ನೂರಾರು ನರೇಗಾ ಕೂಲಿ ಕಾರ್ಮಿಕರು ಗ್ರಾಪಂ ಕಾರ್ಯದರ್ಶಿ ಕೋಟೆಪ್ಪ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಎಐಟಿಯುಸಿ ತಾಲೂಕು ಮುಖಂಡ ಬಸವರಾಜ ಸಂಶಿ, ಕಳೆದ ಎರಡು ವಾರಗಳಿಂದ ದುರುದ್ದೇಶದಿಂದ ನರೇಗಾ ಯೋಜನೆಯ ಎಂಜಿನಿಯರ್ ವೀರೇಶ ನಿಗದಿ ಪಡಿಸಿದಷ್ಟೇ ಕೆಲಸ ಮಾಡಿದ್ದರೂ, ಕಡಿಮೆ ಕೂಲಿ ಹಾಕುತ್ತಿದ್ದಾರೆ. ಕೂಲಿ ಕಾರ್ಮಿಕರ ಕೆಲಸವನ್ನು ಸರಿಯಾಗಿ ಅಳತೆ ಮಾಡುತ್ತಿಲ್ಲ, ರಜಾ ದಿನಗಳಲ್ಲಿ ಮತ್ತು ಹಬ್ಬದ ದಿನಗಳಲ್ಲಿ ಆಗಮಿಸಿ ಅಳತೆ ಮಾಡಿಕೊಂಡು ಹೋಗುತ್ತಾರೆ. ಯಾರಾದರೂ ಸಮಸ್ಯೆ ಕೇಳಿದರೆ ಹಾಗೂ ಪ್ರಶ್ನಿಸಿದರೆ ಆ ಒಂದು ಗುಂಪಿನ ಎಲ್ಲ ಕಾರ್ಮಿಕರಿಗೆ ಕಡಿಮೆ ಕೂಲಿ ಹಾಕುತ್ತಾರೆ ಎಂದು ದೂರಿದರು.
ಮಕರಬ್ಬಿ ಗ್ರಾಪಂಗೆ ನಿಯೋಜನೆ ಮಾಡಿರುವ ನರೇಗಾ ಯೋಜನೆಯ ಎಂಜಿನಿಯರ್ ವರ್ತನೆ ಸರಿಯಾಗಿಲ್ಲ, ಕೂಲಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇವರಿಂದ ಕೆಲಸಗಾರರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಅವರನ್ನು ಬೇರೆ ಗ್ರಾಪಂಗೆ ವರ್ಗಾಯಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಪಂಚಾಯತಿ ಕಾರ್ಯದರ್ಶಿ ಕೋಟೆಪ್ಪ, ಕರ ವಸೂಲಿಗಾರ ಮಲ್ಲಯ್ಯ ಸ್ವಾಮಿ, ಬಿಎಫ್‌ಟಿ ಮಂಜುನಾಥ, ಕಂಪ್ಯೂಟರ್ ಆಪರೇಟರ್ ಮಂಜುನಾಥ ನೂರಾರು ನರೇಗಾ ಕಾರ್ಮಿಕರು ಉಪಸ್ಥಿತರಿದ್ದರು.