ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಧರ್ಮ ವಿರೋಧಿಗಳು ಮಾಡುತ್ತಿದ್ದಾರೆ. ಅವರ ಮೇಲೆ ಕೂಡಲೇ ಸರ್ಕಾರ ಕ್ರಮ ಜರುಗಿಸಬೇಕು ಹಾಗೂ ಅಂತವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಶಾಸಕ ಎಚ್ ಕೆ ಸುರೇಶ್ ಆಗ್ರಹಿಸಿದರು.ಬಿಜೆಪಿ ಪಕ್ಷದ ವತಿಯಿಂದ ನಮ್ಮ ನಡಿಗೆ ಧರ್ಮದ ಜಾಗೃತಿ ಕಡೆಗೆ ಜಾಥಕ್ಕೆ ಚನ್ನಕೇಶವ ದೇಗುಲದ ಮುಂಭಾಗದಲ್ಲಿ ಚಾಲನೆ ನೀಡಿ ಧರ್ಮದ ಉಳಿವಿಗಾಗಿ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಚನ್ನಕೇಶವ ಸ್ವಾಮಿ ದೇಗುಲದ ಮುಂಭಾಗದಿಂದ ನಮ್ಮ ಮಂಡಲದ ಅಧ್ಯಕ್ಷರಾದ ಸಂಜಯ್ ಕೌರಿ ಅವರ ನೇತೃತ್ವದಲ್ಲಿ ಧರ್ಮಸ್ಥಳ ಭಕ್ತಾದಿಗಳೊಂದಿಗೆ ಸೇರಿ ಬೃಹತ್ ನಡಿಗೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ಒಂದು ವರ್ಗದವರು ನಮ್ಮ ಸಂಸ್ಕೃತಿಯ ಸನಾತನ ಧರ್ಮ ಹಾಗೂ ಹಿಂದೂ ದೇಗುಲವನ್ನು ಗುರಿಯಾಗಿಟ್ಟುಕೊಂಡು ಅಪಪ್ರಚಾರ ಮಾಡುವ ಮೂಲಕ ಧಾರ್ಮಿಕ ಭಾವನೆಗೆ ದಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರತೆ ಬಗ್ಗೆ ಇಡೀ ದೇಶಕ್ಕೆ ಮಾದರಿಯಾಗಿದ್ದು ಅಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಆದರೂ ಸಹ ಕೆಲ ಯೂಟ್ಯೂಬ್‌ಗಳಲ್ಲಿ ಅಂತರ್ಜಾಲ ಸಾಮಾಜಿಕ ತಾಣಗಳಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಕೆಟ್ಟ ಸಂದೇಶ ನೀಡಿ ಅದರ ಮೂಲಕ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ರಾಜ್ಯದ 224 ಕ್ಷೇತ್ರಗಳಲ್ಲೂ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರಿದ್ದಾರೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಅಶೋಕ್ ಹಾಗೂ ನಮ್ಮೆಲ್ಲ ಶಾಸಕರ ಜೊತೆಗೂಡಿ ಧರ್ಮಸ್ಥಳದಲ್ಲಿ ನಾವು ಒಂದು ದೊಡ್ಡ ಸಮಾವೇಶವನ್ನು ಹಮ್ಮಿಕೊಂಡಿದ್ದು ನಮ್ಮೆಲ್ಲ ಹಿಂದೂ ಕಾರ್ಯಕರ್ತರು ಹಾಗೂ ಭಕ್ತಾದಿಗಳು ಭಾಗವಹಿಸಲಿದ್ದಾರೆ. ಧರ್ಮದ ಪರ ಹೋರಾಟಕ್ಕೆ ನಾವೆಲ್ಲ ಸಜ್ಜಾಗಲಿದ್ದೇವೆ ಎಂದರು. ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ಸಂಜಯ್ ಕೌರಿ ಮಾತನಾಡಿ, ಧರ್ಮಸ್ಥಳ ಉತ್ತಮವಾದ ಜನಪರ ಕೆಲಸವನ್ನು ಈ ಕ್ಷೇತ್ರ ಮಾಡಿಕೊಂಡು ಬರುತ್ತಿದೆ. ಇನ್ನು ಸುಳ್ಳು ಅಪಪ್ರಚಾರ ಮಾಡುತ್ತಿರುವ ಮೇಲೆ ಸರ್ಕಾರ ಯಾಕೆ ಇನ್ನು ಕ್ರಮ ಕೈಗೊಳ್ಳುತ್ತಿಲ್ಲ. ಇದರ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೆಲವು ದಿನಗಳಿಂದ ನಮ್ಮ ಧಾರ್ಮಿಕ ಕ್ಷೇತ್ರದ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿ ಎಲ್ಲರಿಗೂ ಗೊತ್ತಿರುವ ವಿಚಾರ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಧರ್ಮಸ್ಥಳ ಬಿಜೆಪಿ ಪಾದಯಾತ್ರೆ ಚಲೋ ಹಮ್ಮಿಕೊಂಡಿರುವುದರಿಂದ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಇಂದು ನಾವು ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗುತ್ತಿದ್ದೇವೆ ಎಂದರು.ಈ ವೇಳೆ ಸುಮಾರು ಸಾವಿರಾರು ಕಾರ್ಯಕರ್ತರು 20 ಬಸ್ಸುಗಳಲ್ಲಿ ಧರ್ಮಸ್ಥಳ ಉಳಿಸಿ ಜಾಗೃತಿ ಜಾಥಕ್ಕೆ ತೆರಳಿದರು.ಈ ಸಂದರ್ಭದಲ್ಲಿ ಮಹಿಳ ಮೋರ್ಚಾ ಅಧ್ಯಕ್ಷೆ ಶೋಭ ಗಣೇಶ್, ಚಂದ್ರಶೆಟ್ಟಿ, ಸಿ ಎಚ್ ಪ್ರಕಾಶ್, ನವೀನ್, ಪ್ರಸನ್ನ, ರೇಣುಕಾನಂದ, ಶೇಷಪ್ಪ ಸೇರಿದಂತೆ ಇತರರು ಇದ್ದರು.