ರೈತರ ಜೀವನದಿಯಾದ ಧರ್ಮಾ ಜಲಾಶಯದ 30 ಕಿಮೀ ನೀರು ಹರಿಸುವ ಕಾಲುವೆ ಹೂಳೆತ್ತುವುದು ಸೇರಿದಂತೆ ವಿವಿಧ ಕಾಮಗಾರಿಗೆ ₹50 ಕೋಟಿ ವೆಚ್ಚದಲ್ಲಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಾರ್ಚ್‌ ತಿಂಗಳಾಂತ್ಯದಲ್ಲಿ ಕಾಮಗಾರಿ ಪೂರ್ಣಗೊಂಡು 7,682 ಹೆಕ್ಟೇರ್ ಕೃಷಿ ಭೂಮಿಗೆ ನೀರು ಸರಾಗವಾಗಿ ತಲುಪಿಸುವ ಗುರಿ ಹೊಂದಲಾಗಿದೆ.

ಮಾರುತಿ ಶಿಡ್ಲಾಪುರ

ಹಾನಗಲ್ಲ: ರೈತರ ಜೀವನಾಡಿ ಧರ್ಮಾ ಜಲಾಶಯದ 30 ಕಿಮೀ ನೀರು ಹರಿಸುವ ಕಾಲುವೆ ಹೂಳೆತ್ತುವುದು ಸೇರಿದಂತೆ ವಿವಿಧ ಕಾಮಗಾರಿಗೆ ₹50 ಕೋಟಿ ವೆಚ್ಚದಲ್ಲಿ ಚಾಲನೆ ನೀಡಲಾಗಿದೆ. ಮಾರ್ಚ್‌ ತಿಂಗಳಾಂತ್ಯದಲ್ಲಿ ಕಾಮಗಾರಿ ಪೂರ್ಣಗೊಂಡು 7,682 ಹೆಕ್ಟೇರ್ ಕೃಷಿ ಭೂಮಿಗೆ ನೀರು ಸರಾಗವಾಗಿ ತಲುಪಿಸುವ ಗುರಿ ಹೊಂದಲಾಗಿದೆ.

ಹಾನಗಲ್ಲ ತಾಲೂಕಿನ 28 ಗ್ರಾಮಗಳ ಕೃಷಿಭೂಮಿಗೆ ನೀರೊದಗಿಸುವ ಧರ್ಮಾ ಜಲಾಶಯದ ಕಾಲುವೆ 30 ಕಿಮೀ ಮುಖ್ಯ ಕಾಲುವೆಯೊಂದಿಗೆ 35 ಕಿಮೀ ಉಪಕಾಲುವೆಯನ್ನೂ ಹೊಂದಿದೆ. 20 ವರ್ಷಗಳ ಹಿಂದೆ ಕಾಲುವೆಗೆ ಕಾಂಕ್ರೀಟ್‌ ಹಾಕಲಾಗಿತ್ತು. ಈಗ ಕಾಂಕ್ರೀಟಿನ ಮೇಲೆ ಇರುವ ಮಣ್ಣು ತೆಗೆದು, ಇಡೀ ಕಾಲುವೆ ದುರಸ್ತಿಗೆ ಬೃಹತ್ ನೀರಾವರಿ ಇಲಾಖೆ ಮುಂದಾಗಿದೆ.

ಈ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ 98 ಕೆರೆಗಳನ್ನು ತುಂಬುವ ಯೋಜನೆಯೂ ಇದೆ. ಇದರಲ್ಲಿ 40 ಕೆರೆ ಹೂಳೆತ್ತುವುದು, ತೂಬು ರಿಪೇರಿ, ಕೋಡಿ ರಿಪೇರಿ, ಜಂಗಲ್ ಕಟಿಂಗ್, ಗೇಟ್ ಅಳವಡಿಕೆಯೂ ಸೇರಿದೆ. 20 ವರ್ಷಗಳಿಂದ ಹೂಳು ಜಮಾ ಆಗುತ್ತಿದೆ. ಕೃಷಿ ಭೂಮಿಯಿಂದ ಹರಿದು ಬಂದ ಫಲವತ್ತಾದ ಮಣ್ಣಾಗಿರುವುದರಿಂದ ಕೃಷಿ ಭೂಮಿಗೆ ರೈತರು ಬಳಸಬಹುದಾಗಿದೆ.

ಇದರೊಂದಿಗೆ ಇಡೀ ಮುಖ್ಯ ಕಾಲುವೆ, ಉಪ ಕಾಲುವೆ ವ್ಯಾಪ್ತಿಯ 30 ಕಿಮಿ ಸರ್ವೀಸ್‌ ರಸ್ತೆ ಕೂಡ ಮೆಟ್ಲಿಂಗ್ ಮಾಡಲಾಗುತ್ತದೆ.

ದುರಸ್ತಿಯಾದ ಬಳಿಕ ಧರ್ಮಾ ಜಲಾಶಯದಿಂದ ಹರಿಸಿದ ನೀರು ಕೇವಲ 5 ದಿನಗಳಲ್ಲಿ ಟೇಲ್ ಎಂಡ್ ಗ್ರಾಮಗಳಾದ ಆಡೂರು, ಶಂಕ್ರಿಕೊಪ್ಪ, ನೆಲ್ಲೀಬೀಡ, ಅರಿಶಿಣಗುಪ್ಪಿ, ಶ್ಯಾಡಗುಪ್ಪಿ ಗ್ರಾಮಗಳ ಕೃಷಿ ಜಮೀನು ತಲುಪಲು ಸಾಧ್ಯ. ಈಗ ಮಣ್ಣು ತುಂಬಿದ್ದರಿಂದ 10 ದಿನ ತೆಗೆದುಕೊಳ್ಳುತ್ತಿತ್ತು.

₹50 ಕೋಟಿಯ ಕಾಮಗಾರಿ ಕೈಗೊಂಡಿರುವುದರಿಂದ ಈ ಬಾರಿ ರೈತರು ಧರ್ಮಾ ಜಲಾಶಯವನ್ನು ಆಶ್ರಯಿಸಿ ಬೇಸಿಗೆ ಬೆಳೆ ಬೆಳೆಯುವುದನ್ನು ಕೈ ಬಿಟ್ಟಿದ್ದಾರೆ. ಇಡೀ ಕಾಮಗಾರಿ ಮುಗಿಯುವ ವರೆಗೆ ನೀರು ಹರಿಸಲು ಸಾಧ್ಯವಿಲ್ಲ. ಈ ವಿಷಯವನ್ನು ಸಭೆ ನಡೆಸಿ ರೈತರ ಗಮನಕ್ಕೆ ತರಲಾಗಿದೆ.

₹50 ಕೋಟಿ ಬೇಕು: ಇಷ್ಟಕ್ಕೆ ಧರ್ಮಾ ಜಲಾಶಯದ ಕಾಲುವೆ ಕಾಮಗಾರಿ ಮುಗಿಯುವುದಿಲ್ಲ. ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮುಗಿಯಲು ಇನ್ನು ₹50 ಕೋಟಿ ಬೇಕು ಎನ್ನಲಾಗುತ್ತಿದೆ. ಇಡೀ 30 ಕಿಮೀ ಕಾಲುವೆ ಉದ್ದಕ್ಕೂ ಅಲ್ಲಲ್ಲಿ ಹತ್ತಾರು ಕಡೆ ಕಾಲುವೆ ದಾಟಲು ದೊಡ್ಡ ಸಿಡಿಗಳನ್ನು ನಿರ್ಮಿಸಬೇಕು. ಇಲ್ಲದಿದ್ದರೆ ಮಳೆಗಾಲದಲ್ಲಿ ಕೃಷಿ ವಹಿವಾಟಿಗೆ ರೈತರಿಗೆ ತೊಂದರೆಯಾಗುತ್ತದೆ. ಟೇಲ್ ಎಂಡ್ ಹಳ್ಳಿಗಳೆಡೆಗೆ ಇರುವ ಕಾಲುವೆಯ ಲೈನಿಂಗ್ ಮಾಡುವ ಅಗತ್ಯವಿದೆ. ಈಗ ಕೇವಲ 40 ಕೆರೆಗಳ ದುರಸ್ತಿ ಹಾಗೂ ಹೂಳೆತ್ತುವ ಕಾರ್ಯ ಕೈಗೊಂಡಿದ್ದು, ಉಳಿದ 58 ಕೆರೆ ಹೂಳೆತ್ತಿ ದುರಸ್ತಿಗೊಳಿಸುವ ಅಗತ್ಯವಿದೆ.

ಮಾರ್ಚ್ ಅಂತ್ಯಕ್ಕೆ ಪೂರ್ಣ: ಕಾಲುವೆ ಕಾಂಕ್ರೀಟೀಕರಣ ಆದ ಮೇಲೆ ಇದರ ಹೂಳು ತೆಗೆಯುವ ಕೆಲಸಕ್ಕೆ ಹೆಚ್ಚು ಒತ್ತಾಸೆ ರೈತರಿಂದ ಇತ್ತು. ಹೂಳು ತೆಗೆಯುವುದರಿಂದ ನೀರಿನ ಉಳಿತಾಯ, ಸಮಯದ ಉಳಿತಾಯವೂ ಸಾಧ್ಯ. ಮಾರ್ಚ್‌ ಅಂತ್ಯದೊಳಗೆ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಬೃಹತ್ ನೀರಾವರಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎನ್. ಗಿರೀಶ ಹೇಳಿದರು.ಈ ಕಾಲುವೆ ದುರಸ್ತಿಗೆ ಬಹುದಿನಗಳಿಂದ ಬೇಡಿಕೆ ಸಲ್ಲಿಸಿದ್ದೆವು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಉಳಿದ ಕಾಮಗಾರಿಗೂ ಸರ್ಕಾರ ಅನುದಾನ ಮಂಜೂರು ಮಾಡಬೇಕು ಎಂದು ಅಚ್ಚುಕಟ್ಟು ಪ್ರದೇಶದ ರೈತ ಗಿರೀಶ ದೇಶಪಾಂಡೆ ಹೇಳಿದರು.